ಸಾಂದರ್ಭಿಕ ಚಿತ್ರ 
ದೇಶ

ಐಆರ್​ಎಸ್​ ಅಧಿಕಾರಿ ಮನೆ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಿದ ಆರೋಪ; ಇಬ್ಬರು ಸಿಬಿಐ ಅಧಿಕಾರಿಗಳಿಗೆ ಜೈಲು ಶಿಕ್ಷೆ | CBI officers

ನವದೆಹಲಿ: ಸುಮಾರು 25 ವರ್ಷಗಳ ಹಿಂದಿನ ಐಆರ್‌ಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿ, ಶೋಧ ನಡೆಸುವ ವೇಳೆ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್​​, ಇಂದು(ಏ. 28) ಇಬ್ಬರು ಸಿಬಿಐ ಅಧಿಕಾರಿಗಳಿಗೆ(CBI officers) ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣವು 2000ರಲ್ಲಿ ಐಆರ್‌ಎಸ್ ಅಧಿಕಾರಿ ಅಶೋಕ್ ಕುಮಾರ್ ಅಗರ್ವಾಲ್ ಅವರ ಮನೆ ಮೇಲಿನ ಸಿಬಿಐ ದಾಳಿಗೆ ಸಂಬಂಧಿಸಿದ್ದು, ಪ್ರಸ್ತುತ ಸಿಬಿಐ ಜಂಟಿ ನಿರ್ದೇಶಕರಾಗಿರುವ ರಾಮನೀಶ್ ಮತ್ತು ನಿವೃತ್ತ ಅಧಿಕಾರಿ ವಿ.ಕೆ. ಪಾಂಡೆ ಅವರಿಗೆ ತಲಾ 50 ಸಾವಿರ ದಂಡ, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಐಆರ್‌ಎಸ್ ಅಧಿಕಾರಿ ಅಶೋಕ್ ಕುಮಾರ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಶಾಂಕ್ ನಂದನ್ ಭಟ್, ಬಲವಂತದ ಪ್ರವೇಶ ಮತ್ತು ಕಾರ್ಯವಿಧಾನದ ಉಲ್ಲಂಘನೆ ಆರೋಪದ ಮೇಲೆ ಇಬ್ಬರನ್ನು ದೋಷಿಗಳೆಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2000 ಆಕ್ಟೋಬರ್ 19ರಂದು ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿರುವ ಐಆರ್‌ಎಸ್ ಅಧಿಕಾರಿ ಅಶೋಕ್ ಕುಮಾರ್ ಅಗರ್ವಾಲ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ವೇಳೆ ಶೋಧ ನಡೆಸಿ ಸಿಬಿಐ ಅವರನ್ನು ಬಂಧಿಸಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದ ಅಗರ್ವಾಲ್, ಅಧಿಕಾರಿಗಳು ಮುಂಜಾನೆ ತಮ್ಮ ಮನೆಗೆ ಬಲವಂತವಾಗಿ ಪ್ರವೇಶಿಸಿ, ತಮ್ಮ ಮೇಲೆ ಹಲ್ಲೆ ನಡೆಸಿ, ಬಂಧನದ ಸಮಯದಲ್ಲಿ ಕಾನೂನು ವಿಧಾನಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು (ಏಜೆನ್ಸೀಸ್).