ಲಡಾಖ್‌ನಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಪುಟ ಅನುಮೋದನೆ 
ದೇಶ

ಒಂದೇ ದಿನ ಎರಡು ಬಂಪರ್​ ಗಿಫ್ಟ್​: ಲಡಾಖ್‌ಗೆ ಹೈಕೋರ್ಟ್ ಪೀಠ, ರೈಲ್ವೆ ಅಭಿವೃದ್ಧಿಗೆ 9,450 ಕೋಟಿ ರೂ. ಕ್ಯಾಬಿನೆಟ್​ ಅನುಮೋದನೆ! Central Cabinet

ಪ್ರಮುಖ ಮುಖ್ಯಾಂಶಗಳು

  • ಲಡಾಖ್‌ನಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಪುಟ ಅನುಮೋದನೆ
  • ರೈಲ್ವೆ ಅಭಿವೃದ್ಧಿಗೆ 9,450 ಕೋಟಿ ರೂ. ಮಂಜೂರು
  • ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವರ ಸಂಪುಟದಲ್ಲಿ ಮಹತ್ವದ ನಿರ್ಧಾರ
ಲಡಾಖ್​: ಕೇಂದ್ರ ಸರ್ಕಾರದ ಮಹತ್ವದ ನಿರ್ಣಯವೊಂದರ ಮೂಲಕ ಲಡಾಖ್ ಜನತೆಗೆ ಬಹುಕಾಲದ ನ್ಯಾಯಾಂಗ ಬೇಡಿಕೆ ಈಡೇರುವ ಸಮಯ ಈಗ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ (Central Cabinet) ಸಭೆಯಲ್ಲಿ ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಪ್ರತ್ಯೇಕ ಪೀಠವನ್ನು ಸ್ಥಾಪಿಸಲು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.
ಇದರೊಂದಿಗೆ ದೇಶಾದ್ಯಂತ ರೈಲು ಸಂಪರ್ಕವನ್ನು ಬಲಪಡಿಸಲು ಬರೋಬ್ಬರಿ 9,450 ಕೋಟಿ ರೂ. ವೆಚ್ಚದ ನಾಲ್ಕು ರೈಲ್ವೆ ಯೋಜನೆಗಳಿಗೂ ಸಹ ಗ್ರೀನ್ ಸಿಗ್ನಲ್ ದೊರಕಿದೆ.

ಲಡಾಖ್ ಜನತೆಗೆ ಸಿಗಲಿದೆ ಸುಲಭ ನ್ಯಾಯ!

ಈವರೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ ಜಮ್ಮು ಮತ್ತು ಶ್ರೀನಗರವೇ ಹೈಕೋರ್ಟ್‌ನ ಪ್ರಧಾನ ಕೇಂದ್ರಗಳಾಗಿದ್ದವು. ಅಕ್ಟೋಬರ್ 31, 2019ರಂದು ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದ್ದರೂ, ಕಾನೂನು ಪರಿಹಾರಗಳಿಗಾಗಿ ನಿವಾಸಿಗಳು ಹೊರರಾಜ್ಯ ಅಥವಾ ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು.

ಈ ಭೌಗೋಳಿಕ ಸವಾಲುಗಳನ್ನು ಮನಗಂಡು ಕೇಂದ್ರ ಗೃಹ ಸಚಿವಾಲಯವು ಮಹತ್ವದ ಹೆಜ್ಜೆ ಇಟ್ಟಿದೆ.


ಸಮಯ ಮತ್ತು ಖರ್ಚು ಉಳಿತಾಯ: ಲಡಾಖ್‌ನ ದೂರದ ಪ್ರದೇಶಗಳ ನಾಗರಿಕರು ಕಾನೂನು ಸೇವೆಗಳು ಹಾಗೂ ನ್ಯಾಯಾಲಯದ ಪ್ರವೇಶಕ್ಕಾಗಿ ಇನ್ನು ಮುಂದೆ ದೀರ್ಘ ಪ್ರಯಾಣ ಮಾಡಬೇಕಿಲ್ಲ.


ಸ್ಥಳೀಯವಾಗಿ ನ್ಯಾಯ: ಸ್ಥಳೀಯರ ಬಾಗಿಲಿಗೇ ನ್ಯಾಯಾಂಗ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತೀರ್ಮಾನವು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.

ರೈಲ್ವೆ ಜಾಲ ವಿಸ್ತರಣೆಗೆ 9,450 ಕೋಟಿ ರೂ. ಯೋಜನೆ

ಮತ್ತೊಂದೆಡೆ, ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ನಾಲ್ಕು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 410 ಕಿಲೋಮೀಟರ್‌ಗಳಷ್ಟು ವಿಸ್ತರಿಸುವ ಈ ಯೋಜನೆಗಳಿಗೆ ಒಟ್ಟು 9,450 ಕೋಟಿ ರೂ. ವೆಚ್ಚವಾಗಲಿದ್ದು, 2030-31ರ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

ಪ್ರಮುಖ ರೈಲ್ವೆ ಯೋಜನೆಗಳ ವಿವರ

ಪಶ್ಚಿಮ ಬಂಗಾಳ - ಒಡಿಶಾ: ಖರಗ್‌ಪುರ ಮತ್ತು ರಾಣಿತಾಲ್ ನಡುವೆ 173 ಕಿ.ಮೀ. ಉದ್ದದ ನಾಲ್ಕನೇ ಮಾರ್ಗ ನಿರ್ಮಾಣ.


ಒಡಿಶಾ ಸಂಪರ್ಕ: ಭದ್ರಕ್ ಮತ್ತು ಹರಿದಾಸ್ಪುರ್ ನಡುವೆ 75 ಕಿ.ಮೀ. ಹಾಗೂ ಕಟಕ್ ಮತ್ತು ಪರದೀಪ್ ನಡುವೆ 72 ಕಿ.ಮೀ. ಹೊಸ ಮಾರ್ಗಗಳ ನಿರ್ಮಾಣ.
ಆಂಧ್ರಪ್ರದೇಶ - ತಮಿಳುನಾಡು: ಗುಮ್ಮಿಡಿಪುಂಡಿ ಮತ್ತು ಗುಡೂರ್ ನಡುವೆ 90 ಕಿ.ಮೀ. ಉದ್ದದ ಮೂರನೇ ಹಾಗೂ ನಾಲ್ಕನೇ ಮಾರ್ಗ ನಿರ್ಮಾಣ.
ಈ ಎಲ್ಲಾ ಯೋಜನೆಗಳು ದೇಶದ ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಪ್ರಯಾಣಿಕರ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ, (ಏಜನ್ಸೀಸ್​).