Maynaguri Politics 
ದೇಶ

ಒಂದೇ ಕ್ಷೇತ್ರದಿಂದ ಇಬ್ಬರು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ! ಹೈಕಮಾಂಡ್ ಸೂಚನೆಗೂ ಕ್ಯಾರೆ ಎನ್ನದ ಹಾಲಿ ಶಾಸಕ! | Maynaguri Politics

Maynaguri Politics: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ವೇಳೆ ಜಲ್ಪೈಗುರಿ ಜಿಲ್ಲೆಯ ಮೇನಾಗೂರಿ ಕ್ಷೇತ್ರದಲ್ಲಿ ಅತ್ಯಂತ ವಿಚಿತ್ರ ಘಟನೆಯೊಂದು ನಡೆದಿದ್ದು, ಇಲ್ಲಿ ಬಿಜೆಪಿಯ ಇಬ್ಬರು ನಾಯಕರು ತಾವೇ ಪಕ್ಷದ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡಿಸಿ ನಾಮಪತ್ರ ಸಲ್ಲಿಸಿರುವುದು ಪಕ್ಷದ ನಾಯಕತ್ವವನ್ನು ಮುಜುಗರಕ್ಕೀಡು ಮಾಡಿದೆ.
ಮೇನಾಗೂರಿ ಕ್ಷೇತ್ರದಲ್ಲಿ ಹಾಲಿ ಶಾಸಕ ಕೌಶಿಕ್ ರಾಯ್ ಮತ್ತು ದಲಿಮ್ ರಾಯ್ ಎಂಬ ಇಬ್ಬರು ನಾಯಕರು ಏಕಕಾಲದಲ್ಲಿ ಕಣಕ್ಕಿಳಿದಿರುವುದು ಮತದಾರರಲ್ಲಿ ಮತ್ತು ಕಾರ್ಯಕರ್ತರಲ್ಲಿ ಭಾರೀ ಗೊಂದಲ ಮೂಡಿಸಿದೆ.
ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಕೌಶಿಕ್ ರಾಯ್ ಅವರ ಹೆಸರೇ ಇತ್ತು. ಆದರೆ, ಈ ಘೋಷಣೆಯ ಬೆನ್ನಲ್ಲೇ ಸ್ಥಳೀಯ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಆಂತರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಮುಂದಾದ ಬಿಜೆಪಿ ಹೈಕಮಾಂಡ್, ಕೊನೆಕ್ಷಣದಲ್ಲಿ ಕೌಶಿಕ್ ರಾಯ್ ಬದಲಿಗೆ ದಲಿಮ್ ರಾಯ್​ರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿತು. ಪಕ್ಷದ ಈ ಬದಲಾವಣೆಯನ್ನು ಒಪ್ಪದ ಕೌಶಿಕ್ ರಾಯ್, ತಾವೇ ಅಂತಿಮ ಅಭ್ಯರ್ಥಿ ಎಂದು ಪಟ್ಟು ಹಿಡಿದು ನಾಮಪತ್ರ ಸಲ್ಲಿಸಿದರು. ಇತ್ತ ದಲಿಮ್ ರಾಯ್ ಕೂಡ ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿ, ಬಿ-ಫಾರ್ಮ್ ತಮಗೇ ಸಿಕ್ಕಿದೆ ಎಂದು ಪ್ರತಿಪಾದಿಸಿದರು.

ಬಿಜೆಪಿ ರಿಯಾಕ್ಷನ್​..

ಈ ಗೊಂದಲದ ನಡುವೆ ಬಿಜೆಪಿಯ ಹಿರಿಯ ರಾಜ್ಯ ವಕ್ತಾರರು ಸ್ಪಷ್ಟನೆ ನೀಡಿದ್ದು, ಮೇನಾಗೂರಿಯಿಂದ ದಲಿಮ್ ರಾಯ್ ಅವರೇ ಪಕ್ಷದ ಅಂತಿಮ ಮತ್ತು ಅಧಿಕೃತ ಅಭ್ಯರ್ಥಿ ಎಂದಿದ್ದಾರೆ. ಆದರೂ ಕೌಶಿಕ್ ರಾಯ್ ಬಂಡಾಯದ ನಡೆ ಪಕ್ಷಕ್ಕೆ ನುಂಗಲಾರದ ತುತ್ತಾಗಿದ್ದು, ಬಂಗಾಳದಾದ್ಯಂತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದಾಗಿನಿಂದಲೂ ಇಂತಹ ಪ್ರತಿಭಟನೆಗಳು ಸಾಮಾನ್ಯವಾಗುತ್ತಿವೆ. ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ಹಾಲಿ ಶಾಸಕಿ ಅಂಬಿಕಾ ರಾಯ್ ವಿರುದ್ಧ ಅವರದ್ದೇ ಪಕ್ಷದ ಕಾರ್ಯಕರ್ತರು ಪೋಸ್ಟರ್ ಸಮರ ಸಾರಿದ್ದು, ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿ ಬಿಜೆಪಿ ಚಿಹ್ನೆಯ ಮೇಲೆ ಕೆಂಪು ಗೆರೆ ಎಳೆದಿರುವ ಪೋಸ್ಟರ್‌ಗಳು ಜಿಲ್ಲೆಯಾದ್ಯಂತ ಕಾಣಿಸಿಕೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂಬಿಕಾ ರಾಯ್, ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ ವಿರೋಧಿಗಳು ಇಂತಹ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಟಿ ಮಿಮಿ ಚಕ್ರವರ್ತಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಹೊತ್ತಿದ್ದ ತನಯ್ ಶಾಸ್ತ್ರಿ ಇತ್ತೀಚೆಗೆ ಹಬ್ರಾ ಬಿಜೆಪಿ ಅಭ್ಯರ್ಥಿಯ ಸಮ್ಮುಖದಲ್ಲಿ ಪಕ್ಷ ಸೇರಿರುವುದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ನ್ಯಾಯದ ನಿರೀಕ್ಷೆಯಲ್ಲಿ ತಾನು ಬಿಜೆಪಿ ಸೇರಿರುವುದಾಗಿ ಶಾಸ್ತ್ರಿ ಸಮರ್ಥಿಸಿಕೊಂಡಿದ್ದರೂ, ಇದು ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಚರ್ಚೆಗಳು ಆರಂಭವಾಗಿವೆ(ಏಜೆನ್ಸೀಸ್​​).