ಬಿಹಾರ: ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡಬೇಕು, ಅವರ ಓದಿಗೆ ಯಾವುದೇ ತೊಂದರೆ ಆಗಬಾರದು. ತನಗೆ ಎಷ್ಟೇ ಕಷ್ಟ ಬಂದರೂ ಮಕ್ಕಳು ಚೆನ್ನಾಗಿ ಓದಿ, ಅವರವರ ಕಾಲ ಮೇಲೆ ಅವರು ನಿಂತು, ಇನ್ನೊಬ್ಬರಿಗೆ ಮಾರ್ಗದರ್ಶನ ನೀಡಬೇಕು ಎಂಬ ಬಡ ತಂದೆಯ ಕನಸು ಕೊನೆಗೂ ನನಸಾದ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಬಿಹಾರದ ಸಾಮಾನ್ಯ ಕೂಲಿ ಕಾರ್ಮಿಕನೊಬ್ಬನ ಕನಸು ಈಗ ನನಸಾಗಿರುವುದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳ ಕನಸಿಗಾಗಿ ತಮ್ಮ ಬಳಿಯಿದ್ದ ಎರಡು ತುಂಡು ಕೃಷಿ ಭೂಮಿಯಲ್ಲಿ ಒಂದನ್ನು ಮಾರಿದ ಈತ, ಕಷ್ಟ, ಕಡು ಬಡತನ, ಅನಾರೋಗ್ಯ ಸಮಸ್ಯೆಗಳಿದ್ದರೂ ಇಬ್ಬರು ಪುತ್ರರು ಓದಿ, ವಿದ್ಯಾವಂತರಾಗಲಿ ಎಂಬ ಹೆಬ್ಬಯಕೆ ಇಂದು ಅಂದುಕೊಂಡಂತೆ ನೆರವೇರಿದೆ.
ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಯಾವುದಕ್ಕೂ ಎದೆಗುಂದದೆ ಓದಿದ ಇಬ್ಬರು ಸಹೋದರರು ಈಗ ತಂದೆಯ ತ್ಯಾಗಕ್ಕೆ ತಕ್ಕ ಪ್ರತಿಫಲ ನೀಡಿದ್ದು, ಅವರ ಜೀವನಪೂರ್ತಿ ಮರೆಯಲಾಗದಂತ ಯಶಸ್ಸಿನ ಉಡುಗೊರೆಯನ್ನೇ ನೀಡಿದ್ದಾರೆ. ಒಬ್ಬ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರೆ, ಮತ್ತೊಬ್ಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಸೀಟನ್ನು ಗಿಟ್ಟಿಸಿಕೊಂಡಿದ್ದಾರೆ. ಗಯಾದ ಈ ಸಹೋದರರ ಸಾಧನೆಯ ಹಿಂದಿರುವ ತಂದೆಯ ತ್ಯಾಗದ ಕಥೆ ಕೇಳಿದ್ರೆ ನಿಜಕ್ಕೂ ಮನಮುಟ್ಟುವಂತಿದೆ.
ಗಯಾ ಜಿಲ್ಲೆಯ ಮನೋಜ್ ಕುಮಾರ್ ಮತ್ತು ರೇಷ್ಮಿ ದೇವಿ ದಂಪತಿಯ ಪುತ್ರರಾದ ಸೋನು ರಾಜ್ ಹಾಗೂ ಮೋನು ರಾಜ್ ಈ ಸಾಧನೆಗೈದ ಸಹೋದರರು. ರಾಜಸ್ಥಾನದ ಕೋಟಾದಲ್ಲಿರುವ ಅಲೆನ್ ಕೋಚಿಂಗ್ ಸಂಸ್ಥೆಯಲ್ಲಿ ಇಬ್ಬರೂ ಎರಡು ವರ್ಷಗಳ ಕಾಲ ಒಟ್ಟಿಗೆ ಕಠಿಣವಾಗಿ ವಿದ್ಯಾಭ್ಯಾಸ ಮಾಡಿದ್ದಾರೆ. ಹಿರಿಯ ಸಹೋದರ ಸೋನು ರಾಜ್ ನೀಟ್ 2026ರ ಪರೀಕ್ಷೆಯಲ್ಲಿ 636 ಅಂಕಗಳನ್ನು ಗಳಿಸಿ, ದೆಹಲಿಯ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (CAPFIMS)ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹತೆ ಗಳಿಸಿದ್ದಾರೆ.
ಇನ್ನು, ಕಿರಿಯ ಸಹೋದರ ಮೋನು ರಾಜ್ JEE ಮೇನ್ ಪರೀಕ್ಷೆಯಲ್ಲಿ ಶೇ.93 ಅಂಕ ಗಳಿಸಿ, ಜಾರ್ಖಂಡ್‌ನ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಮೆಸ್ರಾದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ.
ಈ ಸಹೋದರರ ಯಶಸ್ಸಿನ ಹಿಂದೆ ತಂದೆ ಮನೋಜ್ ಕುಮಾರ್ ಅವರ ದೊಡ್ಡ ತ್ಯಾಗವಿದೆ. ಗಯಾದ ಧಾನ್ಯ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು, ಮೊದಲು ಮನರೇಗಾ ಯೋಜನೆಯಡಿ ದಿನಗೂಲಿ ಕೆಲಸವನ್ನೂ ಮಾಡುತ್ತಿದ್ದರು. ಇವರ ಪತ್ನಿ ರೇಷ್ಮಿ ದೇವಿ ಗೃಹಿಣಿಯಾಗಿದ್ದು, ಕುಟುಂಬಕ್ಕೆ ಬೆಂಬಲವಾಗಿ ಅಣಿಯಾಗಿದ್ದಾರೆ.
ಕುಟುಂಬದ ಬಳಿ ಎರಡು ಸಣ್ಣ ಕೃಷಿ ಜಮೀನುಗಳಿದ್ದವು. ಅವುಗಳಿಂದ ಸಿಗುತ್ತಿದ್ದ ಬೆಳೆ ಮನೆಯ ಅಗತ್ಯಕ್ಕೆ ಸಾಕಾಗುತ್ತಿತ್ತು ಅಷ್ಟೇ. ಸ್ವಲ್ಪ ಪ್ರಮಾಣದ ಉತ್ಪನ್ನವನ್ನು ಮಾರಿ, ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲಾಗುತ್ತಿತ್ತು. ಆದರೆ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು, ಅದಕ್ಕೆ ಊಹೆಗೂ ಮೀರಿದ ಹಣಕಾಸು ಹೊಂದಿಸಬೇಕು, ಕೋಟಾಗೆ ಕಳುಹಿಸಲು ಹಣ ಹೊಂದಿಸುವುದು ದೊಡ್ಡ ಸವಾಲಾಯಿತು.
ಮೋನು ರಾಜ್ ತನ್ನ ವಿದ್ಯಾಭ್ಯಾಸಕ್ಕಾಗಿ ಕೋಟಾಗೆ ಹೋಗುವ ಆಸೆ ವ್ಯಕ್ತಪಡಿಸಿದಾಗ, ತಂದೆ ಮನೋಜ್ ಕುಮಾರ್ ತಮ್ಮ ಬಳಿಯಿದ್ದ ಎರಡು ಜಮೀನುಗಳಲ್ಲಿ ಒಂದನ್ನು ಮಾರಿದರು. ಆ ಹಣದಿಂದ ಮಗನ ಕೋಚಿಂಗ್ ಮತ್ತು ಶಿಕ್ಷಣದ ವೆಚ್ಚವನ್ನು ಭರಿಸಿದರು. ಕೋಟಾದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಮೋನು ರಾಜ್ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಬೇಕಾಯಿತು. ಮೊದಲು ಟೈಫಾಯ್ಡ್ ಕಾಣಿಸಿಕೊಂಡರೆ, ಬಳಿಕ ಕಾಮಾಲೆ ಕಾಯಿಲೆಗೂ ತುತ್ತಾದರು. ಹೃದಯ ಬಡಿತ ಅಸಹಜವಾಗಿ ಹೆಚ್ಚಾಗುವ ಸಮಸ್ಯೆಯ ಜತೆಗೆ ಸುಮಾರು ಮೂರು ತಿಂಗಳ ಕಾಲ ನಿರಂತರ ಜ್ವರದಿಂದಲೂ ಬಳಲಿದರು. ಇಷ್ಟಾದರೂ ಒಳಗಿದ್ದ ಕಿಚ್ಚು ಮಾತ್ರ ಆರಲಿಲ್ಲ.
ತೀವ್ರ ಅನಾರೋಗ್ಯದ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಮೋನು ಅರ್ಧಕ್ಕೆ ಮೊಟಕುಗೊಳಿಸುವಂತ ಪರಿಸ್ಥಿತಿ ಎದುರಾಯಿತು. ಆದರೆ, ಇಷ್ಟು ನೋವಿನ ನಡುವೆಯೂ ತಂದೆಯ ತ್ಯಾಗವನ್ನು ನೆನಪಿಸಿಕೊಂಡ ಈತ, ಅನಾರೋಗ್ಯದ ನಡುವೆಯೂ ತರಗತಿಗಳಿಗೆ ಹಾಜರಾಗಿ, ಪರೀಕ್ಷೆಯ ಸಿದ್ಧತೆಯನ್ನು ಮುಂದುವರಿಸಿದರು. ಅವರ ಈ ಛಲವೇ ಇಂದು ಇಂಜಿನಿಯರಿಂಗ್ ಪ್ರವೇಶ ಪಡೆಯಲು ಸೀಟು ಪಡೆಯುವಂತೆ ಮಾಡಿದೆ.
ಮೋನು ರಾಜ್ 10ನೇ ತರಗತಿಯಲ್ಲಿ ಶೇ.96ರಷ್ಟು ಹಾಗೂ 12ನೇ ತರಗತಿಯಲ್ಲಿ ಶೇ.84.5ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಗಯಾದ ಹಲವು ವಿದ್ಯಾರ್ಥಿಗಳು ಕೋಟಾಗೆ ತೆರಳಿ ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ, ವೈದ್ಯರು ಹಾಗೂ ಇಂಜಿನಿಯರ್‌ಗಳಾಗುತ್ತಿರುವುದನ್ನು ಕಂಡು ತಮಗೂ ದೊಡ್ಡ ಕನಸು ಕಾಣುವ ಪ್ರೇರಣೆ ಸಿಕ್ಕಿತು. ಆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು, ಕೋಟಾದ ಅಲೆನ್ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ನಿರ್ಧರಿಸಿದ್ದಾಗಿ ಮೋನು ತಿಳಿಸಿದ್ದಾರೆ.
ತಮ್ಮ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೋನು ರಾಜ್, ತಂದೆ-ತಾಯಿಯ ಕನಸುಗಳನ್ನು ನನಸಾಗಿಸಲು ಇಬ್ಬರೂ ಹಗಲಿರುಳು ಶ್ರಮಿಸಿದ್ದೇವೆ. ನಮ್ಮ ಪೋಷಕರು ನಮಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈಗ ಅವರಿಗಾಗಿ ಮತ್ತು ಸಮಾಜಕ್ಕಾಗಿ ಏನಾದರೂ ಮಾಡುವ ಸಮಯ ಬಂದಿದೆ. ನಮ್ಮ ಯಶಸ್ಸಿನಲ್ಲಿ ಕೋಟಾದ ಶೈಕ್ಷಣಿಕ ವಾತಾವರಣವೂ ಪ್ರಮುಖ ಪಾತ್ರ ವಹಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತಂದೆ ಮನೋಜ್ ಕುಮಾರ್ ಕೂಡ ಮಕ್ಕಳ ಸಾಧನೆಯ ಬಗ್ಗೆ ಭಾವುಕರಾಗಿ ಮಾತನಾಡಿದ್ದು, ನಮ್ಮ ಪರಿಶ್ರಮ ಮತ್ತು ತ್ಯಾಗಕ್ಕೆ ಕೊನೆಗೂ ಫಲ ಸಿಕ್ಕಿದೆ. ಉತ್ತಮ ಶಿಕ್ಷಣ ಮತ್ತು ಮಾರ್ಗದರ್ಶನ ದೊರೆತರೆ ಮಕ್ಕಳ ಕನಸುಗಳು ನನಸಾಗುತ್ತವೆ. ಇದಕ್ಕೆ ಕೋಟಾ ಮತ್ತೊಮ್ಮೆ ಸಾಕ್ಷಿಯಾಗಿದೆ. ಸಹಕಾರ ನೀಡಿದ ಶಿಕ್ಷಕರಿಗೆ ಹಾಗೂ ಕೋಟಾದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).