Punjab CM Bhagwant Mann Video Row
- ಪಂಜಾಬ್ ಸಿಎಂ ಭಗವಂತ್ ಮಾನ್ 'ಅಗೌರವ' ವಿಡಿಯೋ ಕೇಸ್
- ನಕಲಿ ಫಾರೆನ್ಸಿಕ್ ವರದಿಗಾಗಿ ಲಂಚ ಕೊಟ್ಟ ಆರೋಪ. ವಾಟ್ಸಾಪ್ ಚಾಟ್ ವೈರಲ್
- ವಾಟ್ಸಾಪ್ ಚಾಟ್ಸ್ ಹಾಗೂ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ ಸಚಿವ ಸಿರ್ಸಾ!
Punjab CM Bhagwant Mann Video Row: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಧಾರ್ಮಿಕ ಅಗೌರವದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಹೊಸ ವಿವಾದ ಭುಗಿಲೆದ್ದಿದೆ. ಸಿಎಂ ಭಗವಂತ್ ಮಾನ್ ಅವರಿಗೆ ಕ್ಲೀನ್ ಚಿಟ್ ನೀಡುವ ನಿಟ್ಟಿನಲ್ಲಿ ವಿಧಿವಿಜ್ಞಾನ ವರದಿ ಸಿದ್ಧಪಡಿಸಲು ಪಂಜಾಬ್‌ನ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು 10 ಲಕ್ಷ ರೂಪಾಯಿ ಲಂಚ ನೀಡಿದ್ದಾರೆ ಎಂಬ ದೂರಿನ ಮೇರೆಗೆ ಗುರುಗ್ರಾಮ್ ಪೊಲೀಸರು ಇಬ್ಬರು ಸೈಬರ್ ತಜ್ಞರನ್ನು ಬಂಧಿಸಿದ್ದಾರೆ. ಸಿಖ್ಖರ ಅತ್ಯುನ್ನತ ಧಾರ್ಮಿಕ ಸ್ಥಾನವಾದ ಅಕಲ್ ತಖ್ತ್ "ಗುರು ವಿರೋಧಿ" ಎಂದು ಕರೆದಿದೆ.
ಇಬ್ಬರ ಬಂಧನ
ಬಂಧಿತರನ್ನು ಅಂಕಿತ್ (25) ಮತ್ತು ಅರುಣ್ (25)ಎಂದು ಗುರುತಿಸಲಾಗಿದೆ. ವಿಧಿವಿಜ್ಞಾನ ತಜ್ಞ ಜಸ್‌ಪ್ರೀತ್ ಸಿಂಗ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಗುರುಗ್ರಾಮ್ ಪೊಲೀಸ್ ಠಾಣೆಯಲ್ಲಿ ಪಂಜಾಬ್ ಸರ್ಕಾರದ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿಧಿವಿಜ್ಞಾನ ತಜ್ಞ ಹೇಳಿದ್ದೇನು?
ಪೊಲೀಸರು ಲಂಚದ ಆಮಿಷ ಒಡ್ಡಿದ ಬಗ್ಗೆ ವಿಧಿವಿಜ್ಞಾನ ತಜ್ಞರೊಬ್ಬರು ನೇರ ಆರೋಪ ಮಾಡಿದ್ದ ಬೆನ್ನಲೇ ಈ ಪ್ರಕರಣ ನಡೆದಿದೆ. ಪಂಜಾಬ್ ಪೊಲೀಸರ ಬೆದರಿಕೆಗೆ ಹೆದರಿ ನಾನು ನಕಲಿ ವಿಧಿವಿಜ್ಞಾನ ವರದಿಯನ್ನು ಸಿದ್ಧಪಡಿಸಿಕೊಟ್ಟೆ. ಆದರೆ ಇದನ್ನು ಅಕಲ್ ತಖ್ತ್ ಸಾಹಿಬ್ ಪೀಠದ ವಿರುದ್ಧ ಬಳಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ನಾನೂ ಒಬ್ಬ ಸಿಖ್ ಆಗಿರುವುದರಿಂದ ನನ್ನ ತಪ್ಪಿನ ಅರಿವಾಗಿದೆ. ಆ ಬೆನ್ನಲ್ಲೇ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಈ ವರದಿಯನ್ನು ಸಿದ್ಧಪಡಿಸಲು ಅವರು ದೆಹಲಿಯ ಅಂಕಿತ್ ಮತ್ತು ಪಂಚಕುಲದ ಅರುಣ್ ಎಂಬ ಸೈಬರ್ ತಜ್ಞರನ್ನು ಬಳಸಿಕೊಂಡಿದ್ದರು. ಪಂಜಾಬ್ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರು ವಾಟ್ಸಾಪ್ ಮೂಲಕ ನಿರಂತರವಾಗಿ ನಿಗಾ ಇಟ್ಟು, ತಮಗೆ ಬೇಕಾದ ರೀತಿಯಲ್ಲಿ ವರದಿಯನ್ನು ಪದೇ ಪದೇ ಎಡಿಟ್ ಮಾಡಿಸಿದ್ದರು ಎನ್ನಲಾಗಿದೆ
ವಾಟ್ಸಾಪ್ ಚಾಟ್ ವೈರಲ್
ಸಚಿವ ಸಿರ್ಸಾ ಅವರು ಹಂಚಿಕೊಂಡಿರುವ ವಾಟ್ಸಾಪ್ ಚಾಟ್‌ಗಳಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ವಿಧಿವಿಜ್ಞಾನ ತಜ್ಞರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಬಹಿರಂಗವಾಗಿದೆ. ಸಿಎಂ ಭಗವಂತ್ ಮಾನ್ ಅವರಿಗೆ ಕ್ಲೀನ್ ಚೀಟ್ ಸಿಗುವಂತೆ ಮಾಡಲು, ಮೂಲ ವಿಧಿವಿಜ್ಞಾನ ವರದಿಯಲ್ಲಿ ತಮಗೆ ಅಗತ್ಯವಿರುವ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವಂತೆ ಆ ಅಧಿಕಾರಿ ತಜ್ಞರಿಗೆ ಸ್ಪಷ್ಟವಾಗಿ ಸೂಚಿಸಿರುವುದು ಈ ಚಾಟ್‌ಗಳಿಂದ ತಿಳಿದುಬಂದಿದೆ.
ಇದರ ಜೊತೆಗೆ ಬಿಡುಗಡೆಯಾಗಿರುವ ವಿಡಿಯೋ ದೃಶ್ಯಾವಳಿಯಲ್ಲಿ, ಪಂಜಾಬ್ ಪೊಲೀಸ್ ಅಧಿಕಾರಿಗಳು ರಹಸ್ಯವಾಗಿ ವಿಧಿವಿಜ್ಞಾನ ಪ್ರಯೋಗಾಲಯದ ಮಾಲೀಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಈ ಭೇಟಿಯ ವೇಳೆಯೇ ನಕಲಿ ವರದಿಗಾಗಿ ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಲಾಗಿದೆ.
ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದೇನು?
ಪಂಜಾಬ್ ಮುಖ್ಯಮಂತ್ರಿಯೊಬ್ಬರು ಧರ್ಮನಿಂದನೆಯ ಆರೋಪಗಳನ್ನು ಎದುರಿಸಿ, ನಂತರ ಅದನ್ನು ಮುಚ್ಚಿಹಾಕಲು ತಮ್ಮ ಕಚೇರಿಯ ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ. ಇತ್ತೀಚೆಗೆ ಜಾರಿಯಾದ ಬೇಆಬ್ದಿ ಕಾನೂನು ಸಾಮಾನ್ಯ ನಾಗರಿಕರನ್ನು ಶಿಕ್ಷಿಸಲು ಮಾತ್ರ ಸೀಮಿತವಾಗಬಾರದು. ಮುಖ್ಯಮಂತ್ರಿಯಾಗಲಿ, ಯಾರೇ ಆಗಲಿ ಕಾನೂನಿಗಿಂತ ಯಾರು ಮಿಗಿಲಿಲ್ಲ. ಈ ಕಾನೂನಿನಡಿ ಮೊದಲ ಪ್ರಕರಣವನ್ನು ಭಗವಂತ್ ಮಾನ್ ವಿರುದ್ಧ ದಾಖಲಿಸಬೇಕು.
ಮುಖ್ಯವಾಗಿ, ಪಂಜಾಬ್ ಈಗ ಗಂಭೀರ ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಲಿ ಮುಖ್ಯಮಂತ್ರಿಯೊಬ್ಬರು ಹೊಣೆಗಾರಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸ್ ಮತ್ತು ರಾಜ್ಯ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಭಗವಂತ್ ಮಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಇದು ಸೂಕ್ತವಾದ ಪ್ರಕರಣವಾಗಿದೆ ಎಂದು ಮಂಜಿಂದರ್ ಸಿಂಗ್ ಸಿರ್ಸಾ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
2025ರ ಅಕ್ಟೋಬರ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಸಿಖ್ ಗುರುಗಳ ಭಾವಚಿತ್ರಗಳ ಮೇಲೆ ಮದ್ಯವನ್ನು ಚಿಮುಕಿಸುತ್ತಿರುವ ದೃಶ್ಯವಿದೆ ಎಂದು ಆರೋಪಿಸಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಹೋಲುತ್ತಿದ್ದಾರೆ ಎಂಬುದು ಈ ವಿವಾದದ ಮೂಲ, (ಏಜೆನ್ಸೀಸ್).