Murder Case 
ದೇಶ

ಪ್ರಾಧ್ಯಾಪಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್; ಮಾಸ್ಕ್ ಧರಿಸಿ ಮನೆಗೆ ಬಂದ ಜೋಡಿ: 30 ನಿಮಿಷದ ಬಳಿಕ ನಡೆದಿದ್ದೇನು? | Murder Case

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಶಿವಾಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡೆಬೋಸ್ಮಿತಾ ಪಾಲ್ ಅವರ ಕೊಲೆ ಪ್ರಕರಣಕ್ಕೆ(Murder Case) ಹೊಸ ತಿರುವು ಸಿಕ್ಕಿದೆ. ಕೊಲೆ ನಡೆದ ದಿನವೇ ಮುಖಕ್ಕೆ ಮಾಸ್ಕ್ ಧರಿಸಿದ್ದ ಪುರುಷ ಮತ್ತು ಮಹಿಳೆಯೊಬ್ಬರು ಅವರ ಮನೆಗೆ ಭೇಟಿ ನೀಡಿದ್ದ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?

ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ ಸತ್ಯಂ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಡೆಬೋಸ್ಮಿತಾ ಪಾಲ್ ಅವರು ಜೂನ್ 3ರಂದು ಹತ್ಯೆಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರ ಮೃತದೇಹ ಜೂನ್ 4ರಂದು ಪತ್ತೆಯಾಗಿತ್ತು.

ಮನೆಗೆ ಬಂದವರು ಯಾರು?

ಪೊಲೀಸ್ ಮೂಲಗಳ ಪ್ರಕಾರ, ಜೂನ್ 3ರಂದು ಮಧ್ಯಾಹ್ನ ಸುಮಾರು 3.20ರ ವೇಳೆಗೆ ಖಾಸಗಿ ಕ್ಯಾಬ್‌ನಲ್ಲಿ ಮೂವರು ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಅವರಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಮುಖಕ್ಕೆ ಮಾಸ್ಕ್ ಧರಿಸಿ, ಕೈಯಲ್ಲಿ ಬ್ಯಾಗ್ ಹಿಡಿದು ಪ್ರಾಧ್ಯಾಪಕಿಯ ಮನೆಗೆ ತೆರಳಿದ್ದರು. ಇಬ್ಬರೂ ಲಿಫ್ಟ್ ಬಳಸದೇ ಮೆಟ್ಟಿಲುಗಳ ಮೂಲಕ ಮೇಲಕ್ಕೆ ಹೋಗಿದ್ದು, ಸುಮಾರು 30 ನಿಮಿಷಗಳ ಬಳಿಕ ಹೊರಬಂದಿದ್ದಾರೆ. ಹೊರಬರುವಾಗ ಅವರ ಉಡುಪು ಬದಲಾಗಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಕ್ಯಾಬ್ ಚಾಲಕ ವಿಚಾರಣೆ

ಈ ವೇಳೆ ಕ್ಯಾಬ್ ಚಾಲಕ ವಾಹನದಲ್ಲೇ ಕಾಯುತ್ತಿದ್ದನು. ಪ್ರಕರಣದ ಸುಳಿವು ಪತ್ತೆಹಚ್ಚಲು ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಯಾಣದ ವಿವರಗಳನ್ನೂ ಪರಿಶೀಲಿಸಲಾಗುತ್ತಿದೆ.

ಬಲವಂತದ ಪ್ರವೇಶದ ಗುರುತು ಇಲ್ಲ

ಪ್ರಾಥಮಿಕ ತನಿಖೆಯಲ್ಲಿ ಮನೆಯ ಬಾಗಿಲು ಒಡೆದಿರುವ ಅಥವಾ ಬಲವಂತವಾಗಿ ಪ್ರವೇಶಿಸಿರುವ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಇದರಿಂದ ಆರೋಪಿಗಳು ಡೆಬೋಸ್ಮಿತಾ ಅವರಿಗೆ ಪರಿಚಿತರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮೃತದೇಹ ಪತ್ತೆಯಾದದ್ದು ಹೇಗೆ?

ಡೆಬೋಸ್ಮಿತಾ ಅವರ ಸಹೋದರಿ ದೇವರತಿ ಪಾಲ್ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆಗೆ ತೆರಳಿ ನೋಡಿದಾಗ ಹೊರಗಿನಿಂದ ಬೀಗ ಹಾಕಲಾಗಿತ್ತು. ಒಳಗೆ ಪ್ರವೇಶಿಸಿದ ವೇಳೆ ಡೆಬೋಸ್ಮಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು.

ಕೊಲೆ ಹೇಗೆ ನಡೆದಿದೆ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ತಲೆಯ ಭಾಗದಲ್ಲಿ ಗಂಭೀರ ಗಾಯ ಕಂಡುಬಂದಿದ್ದು, ಕೈ ಮಣಿಕಟ್ಟಿನ ನರಗಳು ಕೂಡ ಕತ್ತರಿಸಲ್ಪಟ್ಟಿರುವುದು ಪತ್ತೆಯಾಗಿದೆ.ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಮನೆ ಕೆಲಸದವರು ಹಾಗೂ ನೆರೆಹೊರೆಯವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರ ವಿಶೇಷ ತಂಡ ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದು, ಮಾಸ್ಕ್ ಧರಿಸಿ ಬಂದಿದ್ದ ಇಬ್ಬರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ,(ಏಜೆನ್ಸೀಸ್​).