ನೀಟ್ ಹಗರಣಕ್ಕೆ ಟ್ವಿಸ್ಟ್! ಸಿಬಿಐ ತನಿಖೆಯ ನಡುವೆಯೂ ಪೇಪರ್ ಲೀಕ್ ಆಗಿಲ್ಲ! ಸಂಸದೀಯ ಸಮಿತಿ ಮುಂದೆ ಜಾರಿಕೊಂಡ ಎನ್‌ಟಿಎ ಮುಖ್ಯಸ್ಥ! 
ದೇಶ

ನೀಟ್ ಹಗರಣಕ್ಕೆ ಟ್ವಿಸ್ಟ್! ಸಿಬಿಐ ತನಿಖೆಯ ನಡುವೆಯೂ ಪೇಪರ್ ಲೀಕ್ ಆಗಿಲ್ಲ! ಸಂಸದೀಯ ಸಮಿತಿ ಮುಂದೆ ಜಾರಿಕೊಂಡ ಎನ್‌ಟಿಎ ಮುಖ್ಯಸ್ಥ! NEET Paper Leak

ನವದೆಹಲಿ: ದೇಶದ 22 ಲಕ್ಷ ವೈದ್ಯಕೀಯ ಆಕಾಂಕ್ಷಿಗಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿರುವ ನೀಟ್ (NEET Paper Leak) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಗುರುವಾರ ನವದೆಹಲಿಯಲ್ಲಿ ಹೈ-ವೋಲ್ಟೇಜ್ ರಾಜಕೀಯ ಡ್ರಾಮಾವೊಂದು ನಡೆದಿದೆ. ದೇಶಾದ್ಯಂತ ಪರೀಕ್ಷಾ ಮಾಫಿಯಾದ ಬೃಹತ್ ಜಾಲ ಬಯಲಾಗುತ್ತಿದ್ದರೂ, ಎನ್‌ಟಿಎ (NTA) ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಮಾತ್ರ ಸಂಸದೀಯ ಸಮಿತಿಯ ಮುಂದೆ ಅತ್ಯಂತ ಹಠಮಾರಿ ನಿಲುವು ತಳೆದಿದ್ದಾರೆ. ನಾವು ಇದನ್ನು ಪ್ರಶ್ನೆ ಪತ್ರಿಕೆ ಸೋರಿಕೆ (Paper Leak) ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾದ ಎನ್‌ಟಿಎ ಅಧಿಕಾರಿಗಳು, ವಿರೋಧ ಪಕ್ಷಗಳ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಬಡಾಯಿಸಿದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಮಾತ್ರ ನಿರಾಕರಿಸಿದ್ದಾರೆ.

ಸಂಸದೀಯ ಸಮಿತಿಯಲ್ಲಿ ಹಠಮಾರಿ ನಿಲುವು!

ಸಮಿತಿಯ ಅಧ್ಯಕ್ಷರಾದ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಎನ್‌ಟಿಎ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡರು. ಸಿಬಿಐ ಈಗಾಗಲೇ ದೇಶದ ವಿವಿಧೆಡೆ ಶಿಕ್ಷಕರು ಮತ್ತು ಕೋಚಿಂಗ್ ಸೆಂಟರ್ ದಂಧೆಕೋರರನ್ನು ಬಂಧಿಸಿ ಲೀಕ್ ಆಗಿರುವುದನ್ನು ಖಚಿತಪಡಿಸಿದೆ. ಹೀಗಿದ್ದರೂ ಎನ್‌ಟಿಎ ಏಕೆ ಒಪ್ಪುತ್ತಿಲ್ಲ ಎಂದು ಪ್ರಶ್ನಿಸಿದಾಗ, ಪ್ರಕರಣ ಸದ್ಯ ಸಿಬಿಐ ತನಿಖೆಯಲ್ಲಿದೆ. ಸಿಬಿಐ ತನ್ನ ಅಂತಿಮ ವರದಿಯಲ್ಲಿ ಪೇಪರ್ ಲೀಕ್ ಎಂದು ಅಧಿಕೃತವಾಗಿ ದೃಢಪಡಿಸುವವರೆಗೂ ನಮ್ಮ ಏಜೆನ್ಸಿ ಇದನ್ನು ಸೋರಿಕೆ ಎಂದು ಪರಿಗಣಿಸುವುದಿಲ್ಲ ಎಂದು ಅಭಿಷೇಕ್ ಸಿಂಗ್ ವಾದಿಸಿದ್ದಾರೆ. ಈ ವೇಳೆ ಆಡಳಿತಾರೂಢ ಎನ್‌ಡಿಎ ಸಂಸದರು ಎನ್‌ಟಿಎ ಮುಖ್ಯಸ್ಥರ ಬೆಂಬಲಕ್ಕೆ ನಿಂತಿದ್ದು ಭಾರಿ ಜಟಾಪಟಿಗೆ ಕಾರಣವಾಯಿತು.
ಸಿಬಿಐ ತನಿಖೆಯಲ್ಲಿ ಬಯಲಾಯ್ತು ಶಿಕ್ಷಕರು-ಕೋಚಿಂಗ್ ಮಾಫಿಯಾ ಲಿಂಕ್!
ಮತ್ತೊಂದೆಡೆ, ಸಿಬಿಐ ತನ್ನ ತನಿಖೆಯನ್ನು ತೀವ್ರಗೊಳಿಸಿದ್ದು, ಎನ್‌ಟಿಎ ಒಳಗೆ ಅಡಗಿರುವ ಕಪ್ಪು ಕುರಿಗಳನ್ನು ಒಂದೊಂದಾಗಿ ಹೊರಗೆಳೆಯುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಹರಡಿರುವ ಈ ಜಾಲದ ಬರೋಬ್ಬರಿ 10 ಜನ ಪ್ರಮುಖ ಆರೋಪಿಗಳನ್ನು ಈಗಾಗಲೇ ಸಿಬಿಐ ಅರೆಸ್ಟ್ ಮಾಡಿದೆ.
ದೆಹಲಿ ವಿಶೇಷ ನ್ಯಾಯಾಲಯವು ಜೈಪುರ ಮತ್ತು ಗುರುಗ್ರಾಮದಲ್ಲಿ ಬಂಧಿತರಾದ ಮಂಗಿಲಾಲ್ ಖಾತಿಕ್, ವಿಕಾಸ್ ಬಿವಾಲ್, ದಿನೇಶ್ ಬಿವಾಲ್ ಮತ್ತು ಯಶ್ ಯಾದವ್ ಸೇರಿದಂತೆ ಐವರು ಆರೋಪಿಗಳನ್ನು ಜೂನ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಹಗರಣದ ಕಿಂಗ್‌ಪಿನ್‌ಗಳಾದ ಪಿ.ವಿ. ಕುಲಕರ್ಣಿ ಮತ್ತು ಮನಿಷಾ ಸಂಜಯ್ ವಾಘ್ಮಾರೆ ಅವರ ಲಿಂಕ್ ಇಡೀ ಶಿಕ್ಷಣ ರಂಗವನ್ನೇ ನಡುಗಿಸಿದೆ.

ಎನ್‌ಟಿಎ ಸಮಿತಿಯಲ್ಲೇ ಇದ್ದ ಭ್ರಷ್ಟ ಶಿಕ್ಷಕಿ!

ಸಿಬಿಐ ನೀಡಿರುವ ಆಘಾತಕಾರಿ ಮಾಹಿತಿ ಪ್ರಕಾರ, ಎನ್‌ಟಿಎ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸಮಿತಿಯಲ್ಲೇ ಸದಸ್ಯೆಯಾಗಿದ್ದ ಬಯಾಲಜಿ ಉಪನ್ಯಾಸಕಿ ಮನಿಷಾ ಮಂಧಾರೆ ಎಂಬಾಕೆಯನ್ನು ಸಿಬಿಐ ಬಂಧಿಸಿದೆ. ಈಕೆ ಪರೀಕ್ಷಾ ಮಂಡಳಿಯ ರಹಸ್ಯ ಕಾಯ್ದು ಕೊಳ್ಳಬೇಕಾದ ಸರ್ಕಾರಿ ಅಧಿಕಾರಿಯೊಂದಿಗೆ ಕೈಜೋಡಿಸಿ, ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಮತ್ತು ಕೀಲಿ ಉತ್ತರಗಳನ್ನು ಪಡೆದುಕೊಂಡಿದ್ದಳು. ನಂತರ ಅದನ್ನು ಮನಿಷಾ ವಾಘ್ಮಾರೆ ಮೂಲಕ ಧನಂಜಯ್ ಲೋಖಂಡೆ ಎಂಬಾತನಿಗೆ ಕೋಟ್ಯಂತರ ರೂಪಾಯಿ ಹಣದ ಆಮಿಷಕ್ಕೆ ಮಾರಾಟ ಮಾಡಲಾಗಿತ್ತು. ವಿಷಯ ತಜ್ಞ ಎನ್ನಲಾದ ಕುಲಕರ್ಣಿ ಈ ರಹಸ್ಯ ದಾಖಲೆಗಳನ್ನು ಆಯ್ದ ಶ್ರೀಮಂತ ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದ. ಮೇ 17 ರಂದು ಲಾತೂರ್‌ನ ಪ್ರಖ್ಯಾತ ರೇಣುಕಾಯಿ ಕೆರಿಯರ್ ಸೆಂಟರ್ ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ಶಿವರಾಜ್ ರಘುನಾಥ್ ಮೊಟೆಗಾಂವ್ಕರ್‌ನನ್ನು ಸಿಬಿಐ 10ನೇ ಆರೋಪಿಯಾಗಿ ಸೆರೆಹಿಡಿದಿದೆ.

ಮರುಪರೀಕ್ಷೆ ಕೌಂಟ್‌ಡೌನ್: ಜೂನ್ 21 ಕ್ಕೆ ಬಿಗ್ ಟೆಸ್ಟ್!

ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವುದು ದೃಢಪಟ್ಟ ಕಾರಣ, ಫಲಿತಾಂಶ ಪ್ರಕಟವಾದ ಎರಡು ದಿನಗಳಲ್ಲೇ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈಗ ಇಡೀ ದೇಶ ಕಾಯುತ್ತಿರುವ ಜೂನ್ 21ರ ಮರುಪರೀಕ್ಷೆಗೆ ದಿನಗಣನೆ ಆರಂಭವಾಗಿದೆ.
ಎನ್‌ಟಿಎ ಮುಖ್ಯಸ್ಥರ ಈ ಬೇಜವಾಬ್ದಾರಿ ಹೇಳಿಕೆಗೆ ನಟ ಕಮಲ್ ಹಾಸನ್ ಹಾಗೂ ತಮಿಳುನಾಡಿನ ಯುವ ನಾಯಕ ಉದಯನಿಧಿ ಸ್ಟಾಲಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡಿದ ಎನ್‌ಟಿಎ ಸಂಸ್ಥೆಯನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿಬಿಐ ತನಿಖಾ ತಂಡವು ಮಹಾರಾಷ್ಟ್ರದ ನಾಸಿಕ್ ಮತ್ತು ರಾಜಸ್ಥಾನದ ಹಲವು ಕೇಂದ್ರಗಳಿಗೆ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ದೊಡ್ಡ ತಲೆಗಳು ಉರುಳುವುದು ಖಚಿತವಾಗಿದೆ,(ಏಜೆನ್ಸೀಸ್​).