ಲಕ್ನೋ ಅವಳಿ ಕೊ*ಲೆ-ಆತ್ಮ*ಹತ್ಯೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್!(Lucknow Murder Case ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ ದಂಪತಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ವಿಚ್ಛೇದನದ ವೇಳೆ ಪತ್ನಿ ನೀಡಿದ್ದ ಭಾರಿ ಪ್ರಮಾಣದ ಬೇಡಿಕೆಯೇ ಈ ಕೃತ್ಯಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಉದ್ಯೋಗಿಯಾದ ಮಾನಸ್ ಬಾಜಪೇಯಿ ಎಂಬಾತ ಪತ್ನಿ ದಿವ್ಯ ಮಿಶ್ರಾ ಹಾಗೂ ಸಹೋದರಿಯನ್ನು ಹತ್ಯೆ ಮಾಡಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಪ್ರಕರಣದ ಹಿನ್ನೆಲೆ ಮತ್ತು ಜೀವನಾಂಶದ ಬೇಡಿಕೆ
ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವ್ಯ ಮಿಶ್ರಾ ಮತ್ತು ಮಾನಸ್ 2017ರಲ್ಲಿ ವಿವಾಹವಾಗಿದ್ದರು. ಆದರೆ, ಇವರಿಬ್ಬರ ನಡುವೆ ನಿರಂತರ ಕೌಟುಂಬಿಕ ಕಲಹ ಉಂಟಾಗಿದ್ದರಿಂದ ಕಳೆದ ನವೆಂಬರ್ನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.ಈ ನಡುವೆ ದಿವ್ಯ ಈ ವರ್ಷದ ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 18 ರಂದು ಕುಟುಂಬ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ದಿವ್ಯಾ 1.5 ಕೋಟಿ ರೂ. ಜೀವನಾಂಶ ಕೋರಿದ್ದರು. ಈ ವಿಚಾರಣೆಯ ನಂತರವೇ ಮಾನಸ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಿಂದ ಮುಂಚಿತವಾಗಿಯೇ ಯೋಜನೆ ರೂಪಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸಹೋದರಿಯೊಂದಿಗಿನ ಭಿನ್ನಾಭಿಪ್ರಾಯ
ಆರ್ಥಿಕ ವಿವಾದದ ಹೊರತಾಗಿ, ದಂಪತಿ ನಡುವೆ ಮಾನಸ್‌ನ ತಂಗಿ ಶೀಬಾ (28) ಕುರಿತಾಗಿಯೂ ಭಿನ್ನಾಭಿಪ್ರಾಯವಿತ್ತು. ಶೀಬಾ ಜೊತೆಗೆ ವಾಸಿಸಲು ದಿವ್ಯ ಇಷ್ಟಪಡುತ್ತಿರಲಿಲ್ಲ ಎನ್ನಲಾಗಿದೆ. ಆದಾಗ್ಯೂ, 2018ರಲ್ಲಿ ಮಾನಸ್ ತಾಯಿಗೆ ಕ್ಯಾನ್ಸರ್ ಕಾಣಿಸಿಕೊಂಡಾಗ ದಿವ್ಯಾ ಮನೆಗೆ ವಾಪಸ್ಸಾದಾಗ ತಂಗಿಯ ವಿಚಾರದಲ್ಲಿ ಗಲಾಟೆಗಳು ಪ್ರಾರಂಭವಾಗಿದ್ದವು. 2019ರಲ್ಲಿ ತಾಯಿ ನಿಧನರಾದ ನಂತರ ಕೌಟುಂಬಿಕ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಯಿತು.
ಒಂದೇ ದಿನ ಮೂರು ಸರಣಿ ಹತ್ಯೆಗಳು!
ಗುರುವಾರ ಮಧ್ಯಾಹ್ನ ಗೋಮತಿನಗರದಲ್ಲಿರುವ ದಿವ್ಯ ಅವರ ಕಚೇರಿಯ ಹೊರಗೆ ಆಕೆಯನ್ನು ಮಾನಸ್ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ನಂತರ ಹುಸೇಡಿಯಾ ಕ್ರಾಸಿಂಗ್ ಬಳಿ ಇರುವ ತನ್ನ ಮನೆಗೆ ತೆರಳಿ, ತಂಗಿ ಶೀಬಾಳನ್ನು ಹತ್ಯೆಗೈದು, ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಆದಾಗ್ಯೂ, ಹತ್ಯೆಯ ವೇಳೆ ಗುಂಡಿನ ಸದ್ದು ಹೊರಗೆ ಕೇಳಿಸದಿರಲಿ ಎಂಬ ಕಾರಣಕ್ಕೆ ಮನೆಯ ಕೋಣೆಯ ಬಾಗಿಲು ಹಾಕಿ, ಟಿವಿಯ ಶಬ್ದವನ್ನು ಜೋರಾಗಿ ಇಟ್ಟು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಾಮಾಜಿಕ ಜಾಲತಾಣದ ಸ್ಥಿತಿ ಮತ್ತು ಮುಂದಿನ ತನಿಖೆ
ಆತ್ಮಹತ್ಯೆಗೂ ಮುನ್ನ ಮಾನಸ್ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಪತ್ನಿ ತನಗೆ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಿದ್ದು, ಆಕೆಯ ಸಹೋದರಿ ಯೂಟ್ಯೂಬರ್ ಪ್ರಗ್ಯಾ ಮಿಶ್ರಾ ಮತ್ತು ಆಕೆಯ ಪತಿ ಭರತ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾನೆ. ಆದರೆ, ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ದಿವ್ಯ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪ್ರಕರಣ ನಡೆದ ಸ್ಥಳದಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಾನಸ್ ತನ್ನ ಪತ್ನಿಯ ಚಲನವಲನದ ಮೇಲೆ ಎರಡು ದಿನಗಳಿಂದ ಕಣ್ಣಿಟ್ಟು, ಪಕ್ಕಾ ಯೋಜನೆ ಹೂಡಿ ನಂತರ ಈ ಹತ್ಯೆಗಳನ್ನು ನಡೆಸಿದ್ದಾನೆ ಎನ್ನಲಾಗಿದೆ. ಡಿಜಿಟಲ್ ಪುರಾವೆ ಹಾಗೂ ವಾಟ್ಸಾಪ್ ಸಂದೇಶಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ (ಏಜೆನ್ಸೀಸ್).