Twin storms 
ದೇಶ

ಅವಳಿ ಬಿರುಗಾಳಿ

ಜಗತ್ತಿನ ಅತಿದೊಡ್ಡ ಕೃಷಿ ಪ್ರಧಾನ ದೇಶಗಳಲ್ಲಿ ಭಾರತವೂ ಒಂದು. ದೇಶದ ಅರ್ಧಕ್ಕಿಂತ ಹೆಚ್ಚು ಜನರು ಇಂದಿಗೂ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇಶದ ಕೃಷಿ ವಲಯ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ಪ್ರಮುಖವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯದು, ಪ್ರಕೃತಿಯ ಮುನಿಸಿನಿಂದ ಉಂಟಾದ ಹವಾಮಾನ ಬಿಕ್ಕಟ್ಟು. ಎರಡನೆಯದು, ಮಾನವ ನಿರ್ಮಿತ ಜಾಗತಿಕ ರಾಜಕೀಯ ಸಂಘರ್ಷ. ಈ ಎರಡೂ ಅಂಶಗಳು ಭಾರತದ ಆಹಾರ ಭದ್ರತೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸಂಕಷ್ಟಕ್ಕೆ ತಳ್ಳಿವೆ.

ಅನಿಶ್ಚಿತತೆಯ ಹೊಸ ನಮೂನೆಗಳು

ಹವಾಮಾನ ಬದಲಾವಣೆ ಈಗ ಒಂದು ಪರಿಸರ ಸಮಸ್ಯೆಯಾಗಿ ಉಳಿದಿಲ್ಲ; ಇದು ರೈತನ ಪಾಲಿಗೆ ಆರ್ಥಿಕ ದುರಂತವಾಗಿ ಪರಿಣಮಿಸಿದೆ. ಶೇ. 50ಕ್ಕಿಂತ ಹೆಚ್ಚು ಕೃಷಿಯು ಮಾನ್ಸೂನ್ ಮಳೆಯ ಮೇಲೆಯೇ ಅವಲಂಬಿತ ಆಗಿರುವುದರಿಂದ, ಮಳೆಯ ಪ್ಯಾಟರ್ನ್‌ನಲ್ಲಿ ಆಗುವ ಸಣ್ಣ ಬದಲಾವಣೆಯೂ ವ್ಯವಸಾಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ.
ಎಲ್‌ನಿನೋದಿಂದ ಮುಂಗಾರು ಏರುಪೇರು: ಎಲ್‌ನಿನೋ ಎಂಬ ಹವಾಮಾನ ವೈಪರೀತ್ಯದ ಪ್ರಭಾವದಿಂದಾಗಿ ಭಾರತದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ. ಪೆಸಿಫಿಕ್ ಸಾಗರದ ಉಷ್ಣಾಂಶ ಏರಿಕೆ ಈಗ ಭಾರತದ ಮಾನ್ಸೂನ್ ಗಾಳಿಯನ್ನು ದುರ್ಬಲಗೊಳಿಸುತ್ತಿದೆ. ಇದರಿಂದಾಗಿ ಬಿತ್ತನೆಯ ಸಮಯದಲ್ಲಿ ಮಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮತ್ತೊಂದೆಡೆ, ಒಮ್ಮೆಲೆ ಅನಿರೀಕ್ಷಿತವಾಗಿ ಸುರಿಯುವ ಅತಿಯಾದ ಮಳೆಯಿಂದ ಬೆಳೆಗಳು ಹಾಳಾಗುತ್ತಿವೆ.
ಇಳುವರಿಗೆ ತಾಪಮಾನ ಏರಿಕೆಯ ಹೊಡೆತ: ಹವಾಮಾನ ಬದಲಾವಣೆಯ ನೇರ ಪರಿಣಾಮವೆಂದರೆ ಹೆಚ್ಚುತ್ತಿರುವ ತಾಪಮಾನ. ವಿಶೇಷವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕಂಡುಬರುವ ಹಠಾತ್ ಉಷ್ಣಾಂಶ ಏರಿಕೆ ಗೋಧಿ ಇಳುವರಿಯನ್ನು ಶೇ. 10ರಿಂದ 20ರಷ್ಟು ಕಡಿಮೆ ಮಾಡುತ್ತಿದೆ. ಧಾನ್ಯಗಳು ಪಕ್ವವಾಗುವ ಮೊದಲೇ ಶಾಖಕ್ಕೆ ಸಿಲುಕಿ ಒಣಗುತ್ತಿವೆ. ಇದು ದೇಶದ ಆಹಾರ ಉತ್ಪಾದನೆ ಮತ್ತು ಸಂಗ್ರಹದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ.
ಅಂತರ್ಜಲ ಮಟ್ಟ ಕುಸಿತ: ಮಳೆ ಕೊರತೆಯಿಂದಾಗಿ ನದಿಗಳು ಮತ್ತು ಜಲಾಶಯಗಳು ಬತ್ತುತ್ತಿವೆ. ಇದರಿಂದಾಗಿ ರೈತರು ಅಂತರ್ಜಲವನ್ನು ಅತಿಯಾಗಿ ಅವಲಂಬಿಸಬೇಕಾಗಿದೆ. ಆದರೆ, ಅಂತರ್ಜಲ ಮಟ್ಟವೂ ಅಪಾಯಕಾರಿ ಮಟ್ಟಕ್ಕೆ ಕುಸಿಯುತ್ತಿರುವುದು ಕೃಷಿಯ ಭವಿಷ್ಯದ ಬಗ್ಗೆಯೇ ಅನಿಶ್ಚಿತತೆ ಮೂಡಿಸಿದೆ.

ರಫ್ತು ನಿರ್ಬಂಧ

ದೇಶೀಯವಾಗಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಗೋಧಿ ಮತ್ತು ಅಕ್ಕಿ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಇದರಿಂದ ದೇಶದ ಒಳಗೆ ಬೆಲೆಗಳು ನಿಯಂತ್ರಣಕ್ಕೆ ಬಂದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುವ ಅವಕಾಶವನ್ನು ಭಾರತೀಯ ರೈತರು ಕಳೆದುಕೊಳ್ಳುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಸರ್ಕಾರಿ ಗೋದಾಮುಗಳಲ್ಲಿನ ಬಫರ್ ಸ್ಟಾಕ್ ಪ್ರಮಾಣ ಕಡಿಮೆಯಾಗುತ್ತಿದೆ. ಇದು ತುರ್ತು ಸಂದರ್ಭಗಳಲ್ಲಿನ ಆಹಾರ ಭದ್ರತೆಗೆ ಸವಾಲಾಗಿದೆ.

ಯುದ್ಧದ ಕರಿನೆರಳು

ಹಲವು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಯೂಕ್ರೇನ್ ಸಂಘರ್ಷ ಮತ್ತು ಇತ್ತೀಚೆಗಷ್ಟೇ 40 ದಿನಗಳ ಕಾಲ ನಡೆದ ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಭಾರತದ ರೈತರ ಮೇಲೆ ನೇರ ಆರ್ಥಿಕ ಪರಿಣಾಮ ಉಂಟಾಗಿದೆ.
ರಸಗೊಬ್ಬರ ಬಿಕ್ಕಟ್ಟು: ಭಾರತ ರಸಗೊಬ್ಬರವನ್ನು ಗಣನೀಯ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ರಷ್ಯಾ ಮತ್ತು ಬೆಲಾರುಸ್ ಜಗತ್ತಿನ ಪ್ರಮುಖ ಪೊಟ್ಯಾಷ್ ಮತ್ತು ಯೂರಿಯಾ ರಫ್ತುದಾರ ದೇಶಗಳು. ಯುದ್ಧದಿಂದಾಗಿ ಪೂರೈಕೆ ಸರಪಳಿ ಕಡಿತಗೊಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಗಗನಕ್ಕೇರಿದೆ. ಸರ್ಕಾರ ರೈತರಿಗೆ ಸಬ್ಸಿಡಿ ನೀಡಿದರೂ, ಮಾರುಕಟ್ಟೆಯಲ್ಲಿ ಲಭ್ಯತೆ ಇಲ್ಲ. ಹಾಗಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ.
ಕೃಷಿ ವೆಚ್ಚ ಹೆಚ್ಚಿಸಿದ ಇಂಧನ ಬೆಲೆ: ಟ್ರ್ಯಾಕ್ಟರ್‌ಗಳು, ಪಂಪ್‌ಸೆಟ್‌ಗಳು ಮತ್ತು ಕೃಷಿ ಯಂತ್ರೋಪಕರಣಗಳಿಗೆ ಡೀಸೆಲ್ ಅತ್ಯಗತ್ಯ. ಜಾಗತಿಕ ಯುದ್ಧದ ಭೀತಿಯಿಂದ ಕಚ್ಚಾ ತೈಲ ಬೆಲೆ ಏರಿಕೆಯಾದಾಗ, ಕೃಷಿ ವೆಚ್ಚ ತಾನಾಗಿಯೇ ಹೆಚ್ಚಾಗುತ್ತದೆ. ಇದರಿಂದ ರೈತನ ಲಾಭದ ಪ್ರಮಾಣ ಕುಸಿಯುತ್ತಿದೆ.
ಖಾದ್ಯ ತೈಲದ ಕೊರತೆ: ಭಾರತ ಸೂರ್ಯಕಾಂತಿ ಎಣ್ಣೆಯ ಹೆಚ್ಚಿನ ಭಾಗವನ್ನು ಯೂಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತಿತ್ತು. ಯುದ್ಧ ಶುರುವಾದಾಗಿನಿಂದ ಈ ಪೂರೈಕೆ ಸ್ಥಗಿತಗೊಂಡಿತು. ಇದರಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ದಾಖಲೆ ಮಟ್ಟಕ್ಕೆ ತಲುಪಿತು. ಇದು ಗ್ರಾಹಕರಿಗೂ ಹೊರೆಯಾಯಿತಲ್ಲದೆ, ತೈಲಬೀಜ ಬೆಳೆಯುವ ರೈತರಿಗೂ ಮಾರುಕಟ್ಟೆಯ ಅನಿಶ್ಚಿತತೆಯನ್ನು ತಂದೊಡ್ಡಿತು.
ಆಹಾರ ಪದಾರ್ಥಗಳ ಬೆಲೆ ಏರಿಕೆ: ಕೃಷಿ ಉತ್ಪನ್ನಗಳ ಬೆಲೆ ಏರಿಕೆ ನೇರವಾಗಿ ದೇಶದ ಹಣದುಬ್ಬರದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಅಕ್ಕಿ, ಬೇಳೆಕಾಳುಗಳು ಮತ್ತು ತರಕಾರಿಗಳ ಬೆಲೆ ಏರಿಕೆ ಸಮಾಜದ ಕೆಳವರ್ಗದ ಜನರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.

ನಾವು ಮಾಡಬೇಕಾದುದೇನು?

ಈ ಬಿಕ್ಕಟ್ಟುಗಳನ್ನು ಎದುರಿಸಲು ಸರ್ಕಾರ ಎಷ್ಟೇ ಪರಿಹಾರ ಧನ ನೀಡಿದರೂ ಸಾಲುವುದಿಲ್ಲ; ಕೃಷಿ ಪದ್ಧತಿಯಲ್ಲೇ ಮೂಲಭೂತ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಸ್ಮಾರ್ಟ್ ಕೃಷಿ: ಹವಾಮಾನ ಮುನ್ಸೂಚನೆಯನ್ನು ರೈತರಿಗೆ ನಿಖರವಾಗಿ ತಲುಪಿಸುವ ತಂತ್ರಜ್ಞಾನಗಳು ಬೆಳೆಯಬೇಕು. ಯಾವ ಸಮಯದಲ್ಲಿ ಬಿತ್ತನೆ ಮಾಡಬೇಕು ಮತ್ತು ಯಾವ ಬೆಳೆಯನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಕೃತಕ ಬುದ್ಧಿಮತ್ತೆಯ (AI) ಸಹಾಯ ಪಡೆಯಬಹುದು.
ವೈವಿಧ್ಯಮಯ ಬೆಲೆ: ಕೇವಲ ಅಕ್ಕಿ ಮತ್ತು ಗೋಧಿ ಮೇಲೆ ಅವಲಂಬಿತವಾಗದೆ, ಕಡಿಮೆ ನೀರಿನಲ್ಲೇ ಬೆಳೆಯಬಹುದಾದ ಮತ್ತು ಹವಾಮಾನ ಏರುಪೇರನ್ನು ತಡೆದುಕೊಳ್ಳಲು ಶಕ್ತವಾದ ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಇದು ಮಣ್ಣಿನ ಫಲವತ್ತತೆಯನ್ನು ಕಾಪಾಡುವುದಲ್ಲದೆ ಆರೋಗ್ಯಕ್ಕೂ ಪೂರಕ.
ರಸಗೊಬ್ಬರ ಸ್ವಾವಲಂಬನೆ: ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ ವಿದೇಶಿ ರಾಸಾಯನಿಕ ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕು. ನ್ಯಾನೋ ಯೂರಿಯಾದಂತಹ ಸ್ಥಳೀಯ ಸಂಶೋಧನೆಗಳನ್ನು ಉತ್ತೇಜಿಸಬೇಕು.
ಬೆಲೆಗಳನ್ನು ರಕ್ಷಿಸಲು ಕೇವಲ ಬಿತ್ತನೆ ಮತ್ತು ಕಟಾವು ಸುಧಾರಿಸಿದರೆ ಸಾಲದು, ಕಟಾವಿನ ನಂತರದ ನಿರ್ವಹಣೆಯೂ ಮುಖ್ಯವಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಸುಮಾರು ಶೇ. 15-20ರಷ್ಟು ಕೃಷಿ ಉತ್ಪನ್ನಗಳು ಸರಿಯಾದ ಶೇಖರಣಾ ವ್ಯವಸ್ಥೆ ಇಲ್ಲದೆ ವ್ಯರ್ಥವಾಗುತ್ತಿವೆ. ತರಕಾರಿ ಮತ್ತು ಹಣ್ಣುಗಳ ಬೆಲೆ ಏರಿಕೆಯಾದಾಗ, ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಡಲು ಆಧುನಿಕ ಕೋಲ್ಡ್ ಸ್ಟೋರೇಜ್‌ಗಳ ಕೊರತೆ ಎದುರಿಸುತ್ತಿದ್ದಾರೆ. ಯುದ್ಧದ ಕಾರಣದಿಂದಾಗಿ ರಫ್ತು ನಿಂತಾಗ, ಈ ಉತ್ಪನ್ನಗಳನ್ನು ದೀರ್ಘಕಾಲ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರು ತಮ್ಮ ಧಾನ್ಯಗಳನ್ನು ಮಳೆಯಿಂದ ರಕ್ಷಿಸಲು ವೈಜ್ಞಾನಿಕ ಗೋದಾಮುಗಳ ಅಗತ್ಯವಿದೆ.

ಕೃಷಿ-ಉದ್ಯಮಶೀಲತೆ, ಸ್ಟಾರ್ಟಪ್ ಕ್ರಾಂತಿ

ಇಂದಿನ ಸವಾಲುಗಳನ್ನು ಎದುರಿಸಲು ಯುವಜನರು ಕೃಷಿಯಲ್ಲಿ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತರು ತಾವೇ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು ಅಥವಾ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್ (FPO) ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಉತ್ತಮ. ಕೀಟನಾಶಕಗಳ ಸಿಂಪಡಣೆ ಮತ್ತು ಬೆಳೆ ಸಮೀಕ್ಷೆಗೆ ಡ್ರೋನ್ ಬಳಸುವುದರಿಂದ ಕಾರ್ಮಿಕರ ಕೊರತೆ ನೀಗಿಸಿ ನಿಖರತೆ ಸಾಧಿಸಬಹುದು.

ಸಣ್ಣ ರೈತರ ಆರ್ಥಿಕ ಅಸ್ಥಿರತೆ

ಭಾರತದ ಶೇ. 80ಕ್ಕಿಂತ ಹೆಚ್ಚು ರೈತರು ಸಣ್ಣ ಹಿಡುವಳಿದಾರರು. ಇವರಿಗೆ ಹವಾಮಾನ ಬದಲಾವಣೆ ಅಥವಾ ಜಾಗತಿಕ ಯುದ್ಧದಿಂದ ಉಂಟಾಗುವ ಆರ್ಥಿಕ ಹೊಡೆತವನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ. ಕೃಷಿ ವೆಚ್ಚ ಹೆಚ್ಚಾದಂತೆ ರೈತರು ಖಾಸಗಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುತ್ತಿದ್ದಾರೆ. ಬೆಳೆ ವಿಫಲವಾದಾಗ ಈ ಸಾಲವೇ ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಪ್ರೇರೇಪಿಸುತ್ತಿದೆ. ಪ್ರಧಾನಮಂತ್ರಿ ಫಸಲ್ ಬಿಮಾದಂತಹ ವಿಮಾ ಯೋಜನೆಗಳು ಇನ್ನೂ ತಳಮಟ್ಟದ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟಕ್ಕೆ ತಕ್ಷಣದ ಪರಿಹಾರ ಸಿಗುವಂತಾಗಲು ತಂತ್ರಜ್ಞಾನ ಆಧಾರಿತ ವಿಮಾ ಪಾವತಿ ವ್ಯವಸ್ಥೆ ಜಾರಿಗೆ ಬರಬೇಕಿದೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ಹಿಮನದಿಗಳು ಕರಗುತ್ತಿವೆ. ಇದು ಉತ್ತರ ಭಾರತದ ನದಿಗಳ ನೀರಿನ ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ. ಇಸ್ರೇಲ್ ಮಾದರಿಯ ಹನಿ ನೀರಾವರಿ ಪದ್ಧತಿಯನ್ನು ದೇಶದ ಪ್ರತಿಯೊಂದು ಹಳ್ಳಿಗೂ ತಲುಪಿಸುವುದು ಅಗತ್ಯ. ಇದು ಯುದ್ಧದ ಸಮಯದಲ್ಲಿ ಇಂಧನ ಮತ್ತು ರಸಗೊಬ್ಬರವನ್ನು ಉಳಿಸಲು ನೆರವಾಗುತ್ತದೆ, ಏಕೆಂದರೆ ಹನಿ ನೀರಾವರಿ ಮೂಲಕ ರಸಗೊಬ್ಬರವನ್ನು ನೇರವಾಗಿ ಬೇರುಗಳಿಗೆ ತಲುಪಿಸಬಹುದು. ಹವಾಮಾನ ಬದಲಾವಣೆಯಿಂದಾಗಿ ನೀರಿನ ಲಭ್ಯತೆ ಕಡಿಮೆಯಾದಾಗ, ನೆರೆಯ ದೇಶಗಳೊಂದಿಗೆ ನದಿ ನೀರು ಹಂಚಿಕೆಯ ವಿಚಾರದಲ್ಲಿ ರಾಜತಾಂತ್ರಿಕ ಸಂಘರ್ಷಗಳು ಏರ್ಪಡುತ್ತಿವೆ. ಇದು ಕೃಷಿ ವಲಯದ ಮೇಲೆ ಪರೋಕ್ಷವಾಗಿ ಭೌಗೋಳಿಕ ರಾಜಕೀಯ ಒತ್ತಡವನ್ನು ಹೆಚ್ಚಿಸುತ್ತಿದೆ.

ಪರಿಸರ ಸಮತೋಲನ

ಜಾಗತಿಕವಾಗಿ ಕಾರ್ಬನ್ ಎಮಿಷನ್ ಕಡಿಮೆ ಮಾಡಲು ಕೃಷಿ ವಲಯವೂ ಕೊಡುಗೆ ನೀಡಬೇಕಿದೆ. ಭತ್ತದ ಗದ್ದೆಗಳಿಂದ ಹೊರಬರುವ ಮಿಥೇನ್ ಅನಿಲ ಹವಾಮಾನ ಬದಲಾವಣೆಗೆ ಒಂದು ಕಾರಣ. ಆದ್ದರಿಂದ, ಕಡಿಮೆ ನೀರು ಬಳಸುವ ಭತ್ತದ ತಳಿಗಳನ್ನು ಬೆಳೆಯುವುದು ಮತ್ತು ಬೆಳೆ ತ್ಯಾಜ್ಯ ಸುಡುವುದನ್ನು ತಪ್ಪಿಸುವುದು ಅತ್ಯಗತ್ಯ. ವಾಯು ಮಾಲಿನ್ಯ ತಡೆಯಲು ಇದು ಅತಿ ಮುಖ್ಯ.