ವಿನಯ್ ಮತ್ತು ವಿಜಯ್ ಕೈಹಿಡಿದ ಕೀರ್ತನಾ ಮತ್ತು ಕೀರ್ತಿ
- ಅವಳಿ ಸಹೋದರರನ್ನು ಮದುವೆಯಾದ ಅವಳಿ ಸಹೋದರಿಯರು
- ತೆಲಂಗಾಣದಲ್ಲಿ ನಡೆದ ಈ ಅಪರೂಪದಲ್ಲಿ ಅಪರೂಪದ ಮದುವೆ
- ವಿನಯ್ ಮತ್ತು ವಿಜಯ್ ಕೈಹಿಡಿದ ಕೀರ್ತನಾ ಮತ್ತು ಕೀರ್ತಿ
ತೆಲಂಗಾಣ: ಮದುವೆ..ಮದುವೆ.. ಮದುವೆ ಎಲ್ಲಿ ನೋಡಿದರೂ ಎಲ್ಲಿ ಕೇಳಿದರೂ ಬರಿ ಮದುವೆಯದ್ದೇ ಸುದ್ದಿಯಾಗಿದೆ. ಮೊಬೈಲ್ ತೆಗೆದು ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಸಾಕು ಸಾಲು-ಸಾಲು ಮದುವೆಗಳದ್ದೇ ರೀಲ್ಸ್ಗಳು ನಮ್ಮ ಮುಂದೆ ಪ್ರಕಟವಾಗುತ್ತಿವೆ.
ಸದ್ಯ ಭಾರತದಲ್ಲಿ ಸದ್ದು ಮಾಡುತ್ತಿರುವ ಮದುವೆ ಎಂದರೆ ಅದು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರ ಮದುವೆ. ಆದರೆ ಈ ಸ್ಟಾರ್ ನಟ-ನಟಿಯರ ಮದುವೆಯ ನಡುವೆ ತೆಲಂಗಾಣದಲ್ಲಿ ನಡೆದ ಮದುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ತಂದೆ ತಾಯಿಗೆ ಅವಳಿ ಮಕ್ಕಳು ಹುಟ್ಟುವುದೇ ಅಪರೂಪ, ಅದರಲ್ಲೂ ಹುಟ್ಟಿದ ಅವಳಿ ಮಕ್ಕಳಿಗೆ ಅವಳಿ ಸೊಸೆಯಂದಿರನ್ನು ತರುವುದು ಇನ್ನೂ ಅಪರೂಪ. ಆದರೆ ಈ ಅಪರೂಪದಲ್ಲಿ ಅಪರೂಪದ ಘಟನೆ ತೆಲಂಗಾಣದಲ್ಲಿ ನಡೆದಿದೆ. ವಿಜಯ್ ಮತ್ತು ವಿನಯ್ ಎಂಬ ಇಬ್ಬರು ಅವಳಿ ಸಹೋದರರು ಕೀರ್ತನಾ ಮತ್ತು ಕೀರ್ತಿ ಎಂಬ ಅವಳಿ ಸಹೋದರಿಯರನ್ನು ವಿವಾಹ(Twins marriage)ವಾಗುವ ಮೂಲಕ ಈ ಅಪರೂಪದಲ್ಲಿ ಅಪರೂಪವಾದ ಘಟನೆಯನ್ನು ಸತ್ಯವಾಗಿಸಿದ್ದಾರೆ.
ಈ ಎರಡೂ ಜೋಡಿಯ ಮದುವೆಯು ಒಂದೇ ಮಂಟಪದಲ್ಲಿ ನಡೆದಿದ್ದು, ವಧು-ವರರಿಬ್ಬರೂ ಒಂದೇ ವಿನ್ಯಾಸದ ಬಟ್ಟೆ ಧರಿಸಿದ್ದು ಈ ಮದುವೆಯನ್ನು ಜೀವಮಾನದಲ್ಲಿ ನೋಡಬಹುದಾದ ಕ್ಷಣವಾಗಿ ರೂಪಿಸಿದ್ದಂತು ನಿಜವೆಂದು ಕಾಮರೆಡ್ಡಿ ಜಿಲ್ಲೆಯ ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ. ವಧು-ವರರಿಬ್ಬರೂ ಒಂದೇ ಬಗೆಯ ಉಡುಗೆಯನ್ನು ಧರಿಸಿದ್ದರಿಂದ ಮದುವೆಗೆ ಬಂದ ಅತಿಥಿಗಳಿಗೆ ಯಾರು ವಿಜಯ್? ಯಾರು ವಿನಯ್? ಯಾರು ಕೀರ್ತನಾ? ಯಾರು ಕೀರ್ತಿ? ಎಂದು ಕನ್ಪ್ಯೂಸ್ ಆಗಿದ್ದಂತು ಹೌದು.
ಈಗ ಈ ಅವಳಿ ಜೋಡಿಗಳ ಮದುವೆ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಫೋಟೊಗಳನ್ನು ನೋಡಿ ಖುಷಿಯ ಜತೆಗೆ ಕನ್ಪ್ಯೂಸ್ ಆಗಿದ್ದಾರೆ. ಈ ರೀತಿಯ ಅವಳಿ ಗಂಡಿಗೆ ಅವಳಿ ಹೆಂಡತಿಯರು ಸಿಕ್ಕುರುವುದು ಅಪರೂಪ ಎಂದು ಒಬ್ಬರು ಬರೆದರೆ, ಮದುವೆ ನಂತರ ಯಾರ ಗಂಡ ಯಾರು? ಅಥವಾ ಯಾರ ಹೆಂಡತಿ ಯಾರು? ಎಂದು ಅವರಿಗೆ ಗೊಂದಲವಾಗದಿದ್ದರೆ ಸಾಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಅವಳಿ ಜೋಡಿಗಳಿಗೂ ಅವಳಿ ಮಕ್ಕಳೇ ಜನಿಸಿದರೆ ಎಂತಹ ಅದ್ಭುತವಾಗಬಹುದು ಎಂದು ಕಮೆಂಟ್ ಮಾಡಿದ್ದಾರೆ, (ಏಜನ್ಸೀಸ್).