Tamil Nadu Results | ಸ್ವಕ್ಷೇತ್ರದಲ್ಲಿ ಮಂಕಾದ ಅಪ್ಪ-ಮಗ
Tamil Nadu Results: ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ದ್ರಾವಿಡ ರಾಜಕಾರಣದ ದಿಕ್ಕನ್ನೇ ಬದಲಿಸುವಂತಹ ಮಹತ್ವದ ವಿದ್ಯಮಾನವೊಂದು ನಡೆದಿದ್ದು, ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇಬ್ಬರೂ ತಮ್ಮ ಭದ್ರಕೋಟೆಗಳಲ್ಲಿ ಹಿನ್ನಡೆ ಅನುಭವಿಸುವ ಮೂಲಕ ಡಿಎಂಕೆ ಪಾಳೆಯಕ್ಕೆ ಭಾರೀ ಆಘಾತ ನೀಡಿದ್ದಾರೆ. ನಟ ವಿಜಯ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳು ಈ ಎರಡೂ ಕ್ಷೇತ್ರಗಳಲ್ಲಿ ಅಬ್ಬರಿಸುತ್ತಿದ್ದು, ದ್ರಾವಿಡ ದಿಗ್ಗಜರಿಗೆ ಪ್ರಬಲ ಸವಾಲೊಡ್ಡಿದ್ದಾರೆ.
ಕಳೆದ ಹಲವು ಚುನಾವಣೆಗಳಿಂದ ಡಿಎಂಕೆಯ ಅತ್ಯಂತ ಸುರಕ್ಷಿತ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದ್ದ ಕೊಳತ್ತೂರಿನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಗೆ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ಶಾಕ್ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸ್ಟಾಲಿನ್ 5,454 ಮತಗಳ ಹಿನ್ನಡೆಯಲ್ಲಿದ್ದು, ಬಾಬು ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಚೆಪಾಕ್-ತಿರುವಳ್ಳಿಕೇಣಿ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ಗೂ ಟಿವಿಕೆ ಅಭ್ಯರ್ಥಿ ಸೆಲ್ವಂ ಡಿ. ಕಠಿಣ ಪೈಪೋಟಿ ನೀಡುತ್ತಿದ್ದು, ಸರಿಸುಮಾರು 300 ಮತಗಳ ಅಂತರದಿಂದ ಉದಯನಿಧಿ ಹಿನ್ನಡೆ ಅನುಭವಿಸಿದ್ದಾರೆ.
ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಆಳುತ್ತಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ, ತನ್ನ ಚೊಚ್ಚಲ ಚುನಾವಣೆಯಲ್ಲೇ ಟಿವಿಕೆ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ರಾಜಕೀಯ ವಿಶ್ಲೇಷಕರನ್ನು ಬೆರಗುಗೊಳಿಸಿದೆ. ರಾಜ್ಯದ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಮುನ್ನಡೆ ಸಾಧಿಸುತ್ತಿದ್ದು, ಎಂ.ಕೆ. ಸ್ಟಾಲಿನ್ ಕುಟುಂಬವೇ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಸೋಲಿನ ಭೀತಿ ಎದುರಿಸುತ್ತಿರುವುದು ದ್ರಾವಿಡ ರಾಜಕಾರಣದಲ್ಲಿ ಹೊಸ ಪರ್ವ ಆರಂಭವಾಗಿರುವುದರ ಮುನ್ಸೂಚನೆ ನೀಡುತ್ತಿದೆ. ಹಂತ ಹಂತವಾಗಿ ಮತ ಎಣಿಕೆ ಮುಂದುವರಿಯುತ್ತಿದ್ದು, ಈ ಹೈಪ್ರೊಫೈಲ್ ಕದನದ ಅಂತಿಮ ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ(ಏಜೆನ್ಸೀಸ್).