Protocol Row 
ದೇಶ

ದೀಪ ಹಚ್ಚೋಕೆ ಕ್ಯಾಂಡಲ್ ಕೊಡ್ಲಿಲ್ಲ ಅಂತ ವೇದಿಕೆಯಿಂದಲೇ ಹೊರ ನಡೆದ ಟಿವಿಕೆ ಶಾಸಕಿ!...ವಿಡಿಯೋ ವೈರಲ್ | Protocol Row

ಚೆನ್ನೈ: ಚೆನ್ನೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮೇಯರ್ ತಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಟಿವಿಕೆ (TVK) ಶಾಸಕಿ ಎಂ.ಆರ್. ಪಲ್ಲವಿ ಅವರು ವೇದಿಕೆಯಿಂದ ಹೊರನಡೆದ ಘಟನೆ ತಮಿಳುನಾಡಿನಲ್ಲಿ ದೊಡ್ಡ ರಾಜಕೀಯ ವಿವಾದವನ್ನು ಸೃಷ್ಟಿಸಿದೆ.
ಪುಳಿಯಂತೋಪಿನಲ್ಲಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಹೊಸ ಶಾಲಾ ಕೊಠಡಿ ಕಟ್ಟಡವನ್ನು ಉದ್ಘಾಟಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ದೀಪ ಬೆಳಗಿಸುವ ವೇಳೆ ಚೆನ್ನೈ ಮೇಯರ್ ಆರ್. ಪ್ರಿಯಾ ಅವರು ತಮಗೆ ಮೇಣದಬತ್ತಿಯನ್ನು ನೀಡದೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ತಿರು ವಿ ಕ ನಗರ ಕ್ಷೇತ್ರದ ಶಾಸಕಿ ಪಲ್ಲವಿ ಅಲ್ಲಿಂದ ನಿರ್ಗಮಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಪರ-ವಿರೋಧದ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ರಿಬ್ಬನ್ ಕತ್ತರಿಸುವಾಗ ಶುರುವಾದ ಜಟಾಪಟಿ!

ಹೊಸ ಕಟ್ಟಡವನ್ನು ಮೇಯರ್ ಮತ್ತು ಶಾಸಕಿ ಇಬ್ಬರೂ ಜಂಟಿಯಾಗಿ ಉದ್ಘಾಟಿಸಬೇಕಾಗಿತ್ತು. ರಿಬ್ಬನ್ ಕತ್ತರಿಸುವ ಸಂದರ್ಭದಲ್ಲಿ ಪಲ್ಲವಿ ಅವರು ಆರಂಭದಲ್ಲಿ ಮೇಯರ್ ಪ್ರಿಯಾ ಅವರ ಹಿಂದೆ ನಿಂತಿದ್ದರು. ಆದರೆ ಆ ನಂತರ ತಾವೇ ಮುಂದೆ ಬಂದು ರಿಬ್ಬನ್ ಕತ್ತರಿಸಿದರು. ಅಸಲಿ ವಿವಾದ ಶುರುವಾಗಿದ್ದು ದೀಪ ಬೆಳಗುವ ಕಾರ್ಯಕ್ರಮದ ವೇಳೆ. ವೈರಲ್ ಆದ ವಿಡಿಯೋದಲ್ಲಿ, ಶಾಸಕಿ ಪಲ್ಲವಿ ಅವರು ದೀಪ ಹಚ್ಚಲು ಮೇಣದಬತ್ತಿಯನ್ನು ಪಡೆಯಲು ಕೈ ಚಾಚುತ್ತಿರುವುದು ಕಾಣಿಸುತ್ತದೆ. ಆದರೆ ಮೇಯರ್ ಪ್ರಿಯಾ ಅವರು ಶಾಸಕಿಗೆ ಮೇಣದಬತ್ತಿ ನೀಡದೆ ತಾವೇ ಮುಂದೆ ಹೋಗುತ್ತಾರೆ. ಇದರಿಂದ ತೀವ್ರ ಬೇಸರಗೊಂಡ ಪಲ್ಲವಿ ತಕ್ಷಣವೇ ಕಾರ್ಯಕ್ರಮದಿಂದ ಹೊರನಡೆಯುತ್ತಾರೆ.

ಪ್ರೋಟೋಕಾಲ್ ಎಂದ ಮೇಯರ್; ಅಹಂಕಾರ ಎಂದ ಶಾಸಕಿ!

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಚೆನ್ನೈ ಮೇಯರ್ ಪ್ರಿಯಾ, ತಾವು ಶಾಸಕಿಯವರನ್ನು ನಿರ್ಲಕ್ಷಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಮತ್ತು ನಿಗದಿತ ಪ್ರೋಟೋಕಾಲ್ ಮಾತ್ರ ಪಾಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಮೇಯರ್ ದೀಪ ಬೆಳಗಿದ ನಂತರ ಐಎಎಸ್ ಅಧಿಕಾರಿಗಳು ದೀಪ ಬೆಳಗಿಸುವುದು ವಾಡಿಕೆಯಾಗಿದೆ ಎಂದಿದ್ದಾರೆ. ಆದರೆ ಮೇಯರ್ ನಡವಳಿಕೆಯನ್ನು ಅಹಂಕಾರ ಎಂದು ಕರೆದಿರುವ ಶಾಸಕಿ ಪಲ್ಲವಿ, ಇಂತಹ ನಡವಳಿಕೆಗಳು ಹೆಚ್ಚು ದಿನ ನಡೆಯುವುದಿಲ್ಲ. ಪಕ್ಷದ ನಾಯಕ ಜೋಸೆಫ್ ವಿಜಯ್ ಅವರಂತೆಯೇ ನಾನು ಕ್ಷಮಾ ಗುಣವನ್ನು ಹೊಂದಿದ್ದು, ಈ ಘಟನೆಯನ್ನು ಇಲ್ಲಗೇ ಬಿಡುತ್ತಿದ್ದೇನೆ ಎಂದರು.
ತಾವು ಕೇವಲ ಅಧಿಕಾರಿಗಳ ಆಹ್ವಾನದ ಮೇರೆಗೆ ಸೌಜನ್ಯಕ್ಕಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆಯೇ ಹೊರತು, ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ತಮಗೆ ಯಾವುದೇ ವೈಯಕ್ತಿಕ ಆಸಕ್ತಿ ಇರಲಿಲ್ಲ ಎಂದೂ ಟಿವಿಕೆ ಶಾಸಕಿ ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).