TVK MLA R Pallavi | ವಿಧಾನಸಭೆಗೆ ಮಗುವಿನೊಂದಿಗೆ ಬಂದು ಟ್ರೋಲ್ ಆದ ಟಿವಿಕೆ ಶಾಸಕಿ 
ದೇಶ

ವಿಧಾನಸಭೆಗೆ ಮಗುವಿನೊಂದಿಗೆ ಬಂದು ಟ್ರೋಲ್ ಆದ ಟಿವಿಕೆ ಶಾಸಕಿ: ತಾಯಿಯ ನೋವು ಅರ್ಥ ಮಾಡಿಕೊಳ್ಳಿ ಎಂದು ಪಲ್ಲವಿ ತಿರುಗೇಟು! | TVK MLA R Pallavi

ತಮಿಳುನಾಡು ವಿಧಾನಸಭಾ ಅಧಿವೇಶನಕ್ಕೆ ತಮ್ಮ ನವಜಾತ ಮಗುವಿನೊಂದಿಗೆ ಆಗಮಿಸಿದ ಟಿವಿಕೆ ಶಾಸಕಿ ಆರ್. ಪಲ್ಲವಿ (TVK MLA R Pallavi) ಅವರ ನಡೆ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಲ್ಲವಿ ತಮ್ಮ ಮಗುವನ್ನು ತಮಿಳುನಾಡು ವಿಧಾನಸಭೆಯ ಆವರಣಕ್ಕೆ ಕರೆತರುತ್ತಿದ್ದು, ಅಧಿವೇಶನದ ಮುಖ್ಯ ಸಭಾಂಗಣಕ್ಕೆ ಪ್ರವೇಶಿಸುವಾಗ ಮಗುವನ್ನು ಆರೈಕೆದಾರರ ಉಸ್ತುವಾರಿಗೆ ಒಪ್ಪಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಶಾಸಕಿ ಪಲ್ಲವಿ ಸಭಾಂಗಣದಿಂದ ಹಿಂತಿರುಗುವವರೆಗೆ, ಸಭಾಂಗಣದ ಬಳಿಯ ಕೊಠಡಿಯಲ್ಲಿ ಆರೈಕೆದಾರರು ಮಗುವಿನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ, ಪಲ್ಲವಿ ಅವರು ವಿಧಾನಸಭಾ ಆವರಣದಲ್ಲಿ ತಮ್ಮ ಮಗುವನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಬಳಿಗೆ ಕರೆದೊಯ್ದಿದ್ದರು. ಈ ವೇಳೆ ಮುಖ್ಯಮಂತ್ರಿಗಳು ಮಗುವಿಗೆ ಶುಭಹಾರೈಸಿ ಆಶೀರ್ವಾದ ಮಾಡಿದ್ದರು.

ಸೀನ್ ಕ್ರಿಯೇಟ್ ಆರೋಪ!

ತಾವು ಮಗುವನ್ನು ಎಲ್ಲೆಂದರಲ್ಲಿ ಕರೆದೊಯ್ಯುವ ಮೂಲಕ ಡ್ರಾಮಾ, ಸೀನ್ ಕ್ರಿಯೇಟ್ ಮಾಡುತ್ತಿದ್ದಾರೆ ಎಂಬ ಸೋಶಿಯಲ್ ಮೀಡಿಯಾದ ಟೀಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಪಲ್ಲವಿ, ಈ ಆರೋಪ ಸಂಪೂರ್ಣ ಅನ್ಯಾಯದ್ದು ಎಂದಿದ್ದಾರೆ. ಅಲ್ಲದೆ, ತಾವು ನವಜಾತ ಮಗುವನ್ನು ಮನೆಯಲ್ಲಿ ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಸೀನ್ ಕ್ರಿಯೇಟ್ ಮಾಡಲು ಏನಿದೆ..? ನವಜಾತ ಮಗುವನ್ನು ಮನೆಯಲ್ಲಿ ಬಿಟ್ಟು ಬರಲು ಹೇಗೆ ಸಾಧ್ಯ..? ದಯವಿಟ್ಟು ಯೋಚಿಸಿ ನಂತರ ಕಮೆಂಟ್ ಮಾಡಿ. ಇತರರ ನೋವು ನಿಮಗೆ ಅರ್ಥವಾಗದಿದ್ದರೂ ಪರವಾಗಿಲ್ಲ, ಆದರೆ ಟ್ರೋಲ್ ಮಾಡಬೇಡಿ ಎಂದು ಯುಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ ಏಪ್ರಿಲ್​​ನಲ್ಲಿ ನಡೆದ ಚುನಾವಣೆಯಲ್ಲಿ ಪಲ್ಲವಿ ಅವರು ಚೆನ್ನೈನ ತಿರು ವಿ ಕ ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವಿಧಾನಸಭೆಯ ಪ್ರಸ್ತುತ ಅಧಿವೇಶನವು ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ.

ವೇದಿಕೆಯಿಂದಲೇ ಹೊರ ನಡೆದಿದ್ದ ಶಾಸಕಿ!

ಪುಳಿಯಂತೋಪಿನಲ್ಲಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಹೊಸ ಶಾಲಾ ಕೊಠಡಿ ಕಟ್ಟಡವನ್ನು ಉದ್ಘಾಟಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ದೀಪ ಬೆಳಗಿಸುವ ವೇಳೆ ಚೆನ್ನೈ ಮೇಯರ್ ಆರ್. ಪ್ರಿಯಾ ಅವರು ತಮಗೆ ಮೇಣದಬತ್ತಿಯನ್ನು ನೀಡದೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಶಾಸಕಿ ಪಲ್ಲವಿ ಅಲ್ಲಿಂದ ನಿರ್ಗಮಿಸಿದ್ದರು.

ರಿಬ್ಬನ್ ಕತ್ತರಿಸುವಾಗ ಶುರುವಾದ ಜಟಾಪಟಿ!

ಹೊಸ ಕಟ್ಟಡವನ್ನು ಮೇಯರ್ ಮತ್ತು ಶಾಸಕಿ ಇಬ್ಬರೂ ಜಂಟಿಯಾಗಿ ಉದ್ಘಾಟಿಸಬೇಕಾಗಿತ್ತು. ರಿಬ್ಬನ್ ಕತ್ತರಿಸುವ ಸಂದರ್ಭದಲ್ಲಿ ಪಲ್ಲವಿ ಅವರು ಆರಂಭದಲ್ಲಿ ಮೇಯರ್ ಪ್ರಿಯಾ ಅವರ ಹಿಂದೆ ನಿಂತಿದ್ದರು. ಆದರೆ ಆ ನಂತರ ತಾವೇ ಮುಂದೆ ಬಂದು ರಿಬ್ಬನ್ ಕತ್ತರಿಸಿದರು. ಅಸಲಿ ವಿವಾದ ಶುರುವಾಗಿದ್ದು ದೀಪ ಬೆಳಗುವ ಕಾರ್ಯಕ್ರಮದ ವೇಳೆ. ವೈರಲ್ ಆದ ವಿಡಿಯೋದಲ್ಲಿ, ಶಾಸಕಿ ಪಲ್ಲವಿ ಅವರು ದೀಪ ಹಚ್ಚಲು ಮೇಣದಬತ್ತಿಯನ್ನು ಪಡೆಯಲು ಕೈ ಚಾಚುತ್ತಿರುವುದು ಕಾಣಿಸುತ್ತದೆ. ಆದರೆ ಮೇಯರ್ ಪ್ರಿಯಾ ಅವರು ಶಾಸಕಿಗೆ ಮೇಣದಬತ್ತಿ ನೀಡದೆ ತಾವೇ ಮುಂದೆ ಹೋಗುತ್ತಾರೆ. ಇದರಿಂದ ತೀವ್ರ ಬೇಸರಗೊಂಡ ಪಲ್ಲವಿ ತಕ್ಷಣವೇ ಕಾರ್ಯಕ್ರಮದಿಂದ ಹೊರನಡೆಯುತ್ತಾರೆ(ಏಜೆನ್ಸೀಸ್​).