ದಳಪತಿ ವಿಜಯ್ 
ದೇಶ

ಕಾಂಗ್ರೆಸ್, ಎಡಪಕ್ಷಗಳ ಜೊತೆ ಸಮ್ಮಿಶ್ರ ಸರ್ಕಾರ ರಚಿಸಲು ಟಿವಿಕೆ ಒಲವು; ಮಾತುಕತೆಗೆ ಮುಂದಾಗಿರುವ ವಿಜಯ್ | Thalapathy Vijay

ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲ ಬಾರಿಗೆ ರಾಜಕಾರಣದಲ್ಲಿ ಭಾರಿ ಯಶಸ್ಸು ಸಾಧಿಸಿರುವ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್, ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಲು ಒಲವು ತೋರಿದ್ದು, ಅವರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ವಿಧಾನಸಭೆಯ ಮ್ಯಾಜಿಕ್ ನಂಬರ್ 118 ಆಗಿದ್ದು, ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆದ್ದಿದೆ. ಅದರಲ್ಲಿ ವಿಜಯ್ ಎರಡು ಸ್ಥಾನಗಳಲ್ಲಿ ಗೆದ್ದಿದ್ದು ಒಂದಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಜೊತೆಗೆ ಮತ್ತೊಂದು ಸ್ಪೀಕರ್ ಸ್ಥಾನಕ್ಕೆ ಹೋದರೆ, 106 ಸಂಖ್ಯೆ ಕುಸಿಯಲಿದೆ.
ಈ ಹಿನ್ನೆಲೆ ದಳಪತಿ ವಿಜಯ್ ವಿರೋಧಿ ಬಣದಲ್ಲಿರುವ ಸಣ್ಣಪುಟ್ಟ ಬಣಗಳೊಂದಿಗೆ ಕೈಜೋಡಿಸಲು ಮುಂದಾಗಿದ್ದು, ಡಿಎಂಕೆಯ ಮಿತ್ರ ಪಕ್ಷಗಳಾದ ಕಾಂಗ್ರೆಸ್, ವಿದುತಲೈ ಚಿರುತೈಗಲ್ ಕಚ್ಚಿ, ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜೊತೆ ಮಾತುಕತೆ ನಡೆಸಲು ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ 5, ಐಯುಎಂಎಲ್, ಸಿಪಿಐ, ಸಿಪಿಐ(ಎಂ) ಹಾಗೂ ವಿಸಿಕೆ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದು, ಒಟ್ಟು 13 ಸಂಖ್ಯೆಗಳಾಗುತ್ತವೆ. ಟಿವಿಕೆ ಜೊತೆ ಮೈತ್ರಿಗೆ ಒಪ್ಪಿದ್ರೆ ಈ ಸಂಖ್ಯೆಯ ಬೆಂಬಲದಿಂದ ಸುಲಭವಾಗಿ ವಿಜಯ್ ಸರ್ಕಾರವನ್ನು ರಚಿಸಬಹುದು. ಡಿಎಂಕೆ ವಿಪಕ್ಷವಾಗಿ ಕಾರ್ಯನಿರ್ವಹಿಸಲಿದ್ದು, ಎಐಎಡಿಎಂಕೆ ಮೂರನೇ ಸ್ಥಾನಕ್ಕೆ ಕುಳಿತುಕೊಳ್ಳಲಿದೆ.

ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಣೆ ಸಾಧ್ಯತೆ

ಸಂಭಾವ್ಯ ಟಿವಿಕೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಊಹಾಪೋಹಗಳ ನಡುವೆ, ಇಂಡಿಯಾ ಟುಡೇ ಜೊತೆ ಮಾತನಾಡಿರುಚ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್, ತಮಿಳುನಾಡಿನ ಹಿತಾಸಕ್ತಿಗಳನ್ನು ಮುಖ್ಯವಾಗಿಟ್ಟುಕೊಂಡು ಪಕ್ಷವು ಸಾಮೂಹಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ತಮಿಳುನಾಡಿನ ಹಿತಾಸಕ್ತಿಗಾಗಿ ಇರುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).