ಎಂ.ಕೆ.ಸ್ಟಾಲಿನ್ ಮತ್ತು ಸಿಎಂ ವಿಜಯ್
ಚೆನ್ನೈ: ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್ ಮತ್ತು ಅವರ ಟಿವಿಕೆ ಸರ್ಕಾರದ ವಿರುದ್ಧ ಮೊದಲ ಬಾರಿಗೆ ವಾಗ್ದಾಳಿ ನಡೆಸಿರುವ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್(M K Stalin), ತಮಿಳಗ ವೆಟ್ರಿ ಕಳಗಂ ಆಡಳಿತವು ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಲ್ಲ, ಅದು ಡಿಎಂಕೆಯ ದಯೆಯಿಂದ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಚೆನ್ನೈ ಪಕ್ಷದ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಡಿಎಂಕೆ ಯುವ ಘಟಕದ ಸಭೆಯಲ್ಲಿ ಮಾತನಾಡಿರುವ ಅವರು, ತಮಿಳುನಾಡು ಚುನಾವಣೆಯ ಫಲಿತಾಂಶವನ್ನು ರಾಜಕೀಯ ಅಲೆಯ ಬದಲು ಸಿನಿಮಾ ಸುನಾಮಿ ಎಂದು ಬಣ್ಣಿಸಿದ್ದಾರೆ. ಮತದಾರರು ರಾಜಕೀಯಕ್ಕಿಂತ ಹೆಚ್ಚಾಗಿ ಸಿನಿಮಾ ನಟ ಎಂಬ ಉತ್ಸಾಹದಿಂದ ವಿಜಯ್ಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಜನ ತಮ್ಮ ನೆಚ್ಚಿನ ನಟ ಪಕ್ಷವನ್ನು ಆರಂಭಿಸಿದ್ದರಿಂದ ಉತ್ಸಾಹದಿಂದ ಬೆಂಬಲಿಸಿದ್ದಾರೆ. ಆದರೆ ಕೆಲವೇ ದಿನಗಳಲ್ಲಿ ಅವರು ಈ ಹುಡುಗಾಟಿಕೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಮಗು ತನ್ನ ತಾಯಿಯನ್ನು ಹುಡುಕುವಂತೆಯೇ ಮತದಾರರು ಮತ್ತೆ ಅಂತಿಮವಾಗಿ ಡಿಎಂಕೆಯನ್ನು ಹುಡುಕುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
ಟಿವಿಕೆ ಸ್ವಂತವಾಗಿ 118 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಅವರಿಗೆ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ. ಇಂದು, ನಮ್ಮ ದಯೆಯಿಂದಾಗಿ ಸರ್ಕಾರ ಉಳಿದುಕೊಂಡಿದೆ. ಯಾವುದೇ ಸಮಯದಲ್ಲಿ, ಯಾವುದೇ ದಿನ, ಅದು ಬೀಳಬಹುದು. ಎಐಎಡಿಎಂಕೆಯನ್ನು ವಿಭಜಿಸಲು ಪ್ರಯತ್ನಗಳು ನಡೆದವು ಆದರೆ ಅವು ವಿಫಲವಾಗಿದೆ ಎಂದಿದ್ದಾರೆ.
ಮಿತ್ರ ಪಕ್ಷಗಳಾದ ಕಮ್ಯುನಿಸ್ಟ್ ಪಕ್ಷಗಳು, ವಿದುತಲೈ ಚಿರುತೈಗಲ್ ಕಚ್ಚಿ(ವಿಸಿಕೆ) ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನಂತಹ ಪಕ್ಷಗಳು ಆರಂಭದಲ್ಲಿ ಟಿವಿಕೆ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ಮಾತ್ರ ನೀಡಿದ್ದವು. ಆದರೆ ನಂತರ ಸಂಪುಟಕ್ಕೆ ಸೇರಿವೆ. ಮುಂದೇನಾಗುತ್ತದೋ ಕಾದು ನೋಡೋಣ. ಆದರೆ ಖಂಡಿತವಾಗಿಯೂ ಈ ಸರ್ಕಾರ ಐದು ವರ್ಷ ಇರಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ, ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಂತರ, ಐದು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಡಿಎಂಕೆ ಮೈತ್ರಿಕೂಟದಿಂದ ಹೊರಬಂದು ಟಿವಿಕೆಗೆ ಬೆಂಬಲ ನೀಡಿತು. ಅದೇ ರೀತಿ ಟಿವಿಕೆ ಸರ್ಕಾರ ರಚಿಸಲು ಕಮ್ಯೂನಿಷ್ಟ್ ಪಕ್ಷಗಳು, ವಿಸಿಕೆ ಹಾಗೂ ಐಯುಎಂಎಲ್ ಶಾಸಕರು ಬೆಂಬಲ ನೀಡಿದ್ದಾರೆ (ಏಜೆನ್ಸೀಸ್).