ಎಸ್‌ಪಿ ವೇಲುಮಣಿ 
ದೇಶ

ಟಿವಿಕೆ ಸರ್ಕಾರದಲ್ಲಿ ಸಿಗದ ಮಂತ್ರಿ ಸ್ಥಾನ; ಉಲ್ಟಾ ಹೊಡೆದ ಎಐಎಡಿಎಂಕೆ ಬಂಡಾಯ ನಾಯಕರು; ಪಳನಿಸ್ವಾಮಿಯೇ ನಮ್ಮ ನಾಯಕ ಅಂದ್ರು | AIADMK Rebels

ಚೆನ್ನೈ: ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧವೇ ವಿರೋಧದ ಬಾವುಟ ಹಾರಿಸಿ ಟಿವಿಕೆ ಸರ್ಕಾರವನ್ನು ಬೆಂಬಲಿಸಿದ್ದ ಎಐಎಡಿಎಂಕೆ ಭಿನ್ನಮತೀಯ ಶಾಸಕರು(AIADMK Rebels), ಸಚಿವ ಸ್ಥಾನ ಸಿಗದ ಹಿನ್ನೆಲೆ ಶುಕ್ರವಾರ(ಮೇ 22) ಬಿಗ್ ಯೂಟರ್ನ್ ತೆಗೆದುಕೊಂಡಿದ್ದು, ಎಡಪ್ಪಾಡಿ ಪಳನಿಸ್ವಾಮಿಯೇ ನಮ್ಮ ನಾಯಕರು ಎಂದಿದ್ದಾರೆ.
ಭಿನ್ನಮತೀಯರ ನೇತೃತ್ವ ವಹಿಸಿದ್ದ ಹಿರಿಯ ನಾಯಕ ಎಸ್‌ಪಿ ವೇಲುಮಣಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಪಕ್ಷವನ್ನು ಎರಡು ಭಾಗಗಳಾಗಿ ವಿಭಜಿಸುವ ಯಾವುದೇ ಯೋಜನೆ ನಮ್ಮ ಬಣಕ್ಕೆ ಇಲ್ಲ. ಮತ್ತು ಎಲ್ಲಾ ಎಐಎಡಿಎಂಕೆ ನಾಯಕರ ಏಕೈಕ ಗುರಿ ರಾಜ್ಯದಲ್ಲಿ ಜಯಾ ಅವರ ಆಡಳಿತವನ್ನು ಪುನಃ ಸ್ಥಾಪಿಸುವುದು ಎಂದು ಹೇಳಿದ್ದಾರೆ
ಟಿವಿಕೆ ಸರ್ಕಾರವನ್ನು ಬೆಂಬಲಿಸುವುದಿಲ್ಲ ಮತ್ತು ಸಚಿವ ಸ್ಥಾನಗಳ ಬಗ್ಗೆ ಟಿವಿಕೆ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿರುವ ಅವರು, ತಮ್ಮ ನಾಯಕ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಮಾತ್ರ ಎಂದಿದ್ದಾರೆ. ಪಕ್ಷದಲ್ಲಿ ಯಾವುದೇ ಬಿರುಕುಗಳಿಲ್ಲ, ಕೇವಲ ಭಿನ್ನಾಭಿಪ್ರಾಯಗಳಿವೆ. ಪಕ್ಷವನ್ನು ಬಲಪಡಿಸುವುದು ಹೊರತುಪಡಿಸಿ ಬಂಡಾಯವೇಳಲು ನಮಗೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆಗೆ ಜನರು ಸಕಾರಾತ್ಮಕ ತೀರ್ಪು ನೀಡಿದ್ದಾರೆ. ಮತ್ತು ಎಐಎಡಿಎಂಕೆ ಯಾವಾಗಲೂ ಡಿಎಂಕೆ ವಿರೋಧಿಸುವ ಪಕ್ಷವಾಗಿದೆ. ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ಚರ್ಚಿಸಲು ಸಾಮಾನ್ಯ ಮಂಡಳಿಯನ್ನು ಕರೆಯಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಬಹುಮತ ಪರೀಕ್ಷೆಯ ವೇಳೆ ವೇಲುಮಣಿ ಮತ್ತು ಇತರ 24 ಬಂಡಾಯ ಶಾಸಕರು ಟಿವಿಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರು. ಚುನಾವಣೆಯಲ್ಲಿ ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದುಕೊಂಡಿತು, ಟಿವಿಕೆ 108 ಮತ್ತು ಡಿಎಂಕೆ 59 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ (ಏಜೆನ್ಸೀಸ್).