Turkish plane 
ದೇಶ

ಆಕಾಶದಲ್ಲೇ ಟರ್ಕಿಶ್ ವಿಮಾನದ ಇಂಜಿನ್​ಗೆ ಬೆಂಕಿ! 236 ಜೀವಗಳು ಕೂದಲೆಳೆ ಅಂತರದಲ್ಲಿ ಬಚಾವ್.. | Turkish plane

ಕೋಲ್ಕತ್ತಾ/ಕಾಠ್ಮಂಡು: ನೇಪಾಳದ ಕಾಠ್ಮಂಡುವಿನಿಂದ ಇಸ್ತಾನ್ಬುಲ್‌ಗೆ ಹೊರಟಿದ್ದ ಟರ್ಕಿಶ್ ಏರ್‌ಲೈನ್ಸ್ (Flight THY-727) ವಿಮಾನದ ಬಲ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಬುಧವಾರ ಮಧ್ಯಾಹ್ನ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಫುಲ್ ಎಮರ್ಜೆನ್ಸಿ ಲ್ಯಾಂಡಿಂಗ್' ಮಾಡಲಾಗಿದೆ.
ವಿಮಾನದಲ್ಲಿದ್ದ 225 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಸೇರಿದಂತೆ ಒಟ್ಟು 236 ಜನರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಇಳಿದಿರುವುದು ದೊಡ್ಡ ಸಮಾಧಾನ ತಂದಿದೆ ಎಂದು ವರದಿಯಾಗಿದೆ.

ನಡೆದಿದ್ದೇನು?

ಏರ್‌ಬಸ್ A330-300 ವಿಮಾನವು ಮಧ್ಯಾಹ್ನ 1:29ಕ್ಕೆ ಕಾಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಹಾರಾಟ ಆರಂಭಿಸಿದ ಕೇವಲ 4 ನಿಮಿಷಗಳಲ್ಲಿ ಬಲ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಪೈಲಟ್ ಇಂಜಿನ್ ಅನ್ನು ಸ್ಥಗಿತಗೊಳಿಸಿ (Shut down), ಕಾಠ್ಮಂಡು ಟವರ್‌ಗೆ ಮಾಹಿತಿ ನೀಡಿದರು.
ನೇಪಾಳದ ಧಾದಿಂಗ್ ಜಿಲ್ಲೆಯ ಮೇಲೆ ಸುಮಾರು 10 ನಿಮಿಷಗಳ ಕಾಲ ವಿಮಾನವು ಹಾರಾಟ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿತು. ಕಾಠ್ಮಂಡುವಿಗೆ ಮರಳುವ ಅವಕಾಶವಿದ್ದರೂ, ಲಾಂಗ್-ಹಾಲ್ ಪ್ರಯಾಣಕ್ಕೆ ವಿಮಾನ ಸುರಕ್ಷಿತವಲ್ಲ ಎಂದು ಅರಿತ ಪೈಲಟ್‌ಗಳು ಹತ್ತಿರದ ಕೋಲ್ಕತ್ತಾ ನಿಲ್ದಾಣಕ್ಕೆ ವಿಮಾನವನ್ನು ತಿರುಗಿಸಿ, ಮಧ್ಯಾಹ್ನ 3:03ಕ್ಕೆ ಸುರಕ್ಷಿತವಾಗಿ ಕೆಳಗಿಳಿಸಿದರು.ಟರ್ಕಿಶ್ ವಿಮಾನ ಬೆಂಕಿಗೆ ಆಹುತಿಯಾಗುವ ಹಂತದಿಂದ ಪಾರಾಗಿರುವುದು ವಿಮಾನಯಾನ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸದ್ಯ ಈ ವಿಮಾನವನ್ನು ಕೋಲ್ಕತ್ತಾದಲ್ಲಿ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ,(ಏಜೆನ್ಸೀಸ್​).