Narendra Modi | ಪ್ರಧಾನಿ ನರೇಂದ್ರ ಮೋದಿ
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಳೆದ 15 ವರ್ಷಗಳಿಂದ ದುರಾಡಳಿತ ನಡೆಯುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ಮತ್ತು ಹಿಂಸಾಚಾರದ ಮೂಲಕ ಜನರಲ್ಲಿ ಭಯ ಹುಟ್ಟಿಸುವ ರಾಜಕೀಯ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ( Narendra Modi) ಆರೋಪಿಸಿದ್ದಾರೆ.
ಸಿಲಿಗುರಿಯಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ವಿರೋಧ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ಕ್ಷಮಿಸಲು ಸಾಧ್ಯವಿಲ್ಲ, ಬಂಗಾಳದ ಜನತೆ ಇನ್ನು ಮುಂದೆ ಇಂತಹ ದೌರ್ಜನ್ಯಗಳನ್ನು ಸಹಿಸುವುದಿಲ್ಲ ಎಂದು ಗುಡುಗಿದರು.
ಮೇ 4ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದ್ದು, ಅಧಿಕಾರಕ್ಕೆ ಬಂದ ತಕ್ಷಣವೇ ಟಿಎಂಸಿ ಸರ್ಕಾರದ ಕಳೆದ 15 ವರ್ಷಗಳ ಪ್ರತಿ ಕ್ಷಣದ ಮತ್ತು ಪ್ರತಿ ಪೈಸೆಯ ಲೆಕ್ಕವನ್ನು ಪಡೆಯಲಾಗುವುದು, ಉತ್ತರ ಬಂಗಾಳದ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ಟಿಎಂಸಿ, ಕೇವಲ ಬೆದರಿಕೆ ತಂತ್ರಗಳನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ ಎಂದು ದೂರಿದರು. ಬಿಜೆಪಿಯ ಮಂತ್ರವು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಆಗಿದ್ದರೂ, ಬಂಗಾಳದ ಮಟ್ಟಿಗೆ ಲೂಟಿಕೋರರನ್ನು ಕಾನೂನಿನ ಅಡಿಯಲ್ಲಿ ತಂದು ಅವರಿಗೆ ಸಂಪೂರ್ಣ ಹೊಣೆಗಾರಿಕೆ ನಿಗದಿಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಭದ್ರತೆಯ ವಿಚಾರವಾಗಿಯೂ ಮಾತನಾಡಿದ ಮೋದಿ, ದೇಶವನ್ನು ವಿಭಜಿಸಲು ಸಂಚು ರೂಪಿಸುವ ತುಕ್ಡೆ-ತುಕ್ಡೆ ಗ್ಯಾಂಗ್ ಅನ್ನು ಟಿಎಂಸಿ ಉತ್ತೇಜಿಸುತ್ತಿದೆ ಎಂದು ಆರೋಪಿಸಿದ ಮೋದಿ, ದೇಶದ ಆಯಕಟ್ಟಿನ ಪ್ರದೇಶವಾದ ಸಿಲಿಗುರಿ ಕಾರಿಡಾರ್‌ಗೆ ಬೆದರಿಕೆ ಹಾಕುವವರನ್ನು ಟಿಎಂಸಿ ಸಂಸತ್ತಿಗೆ ಕಳುಹಿಸುವ ಮೂಲಕ ಗೌರವಿಸುತ್ತಿದೆ ಎಂದು ಆರೋಪಿಸುತ್ತಾ, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳಾ ಕೇಂದ್ರಿತ ಪೊಲೀಸ್ ಬೆಂಬಲ ವ್ಯವಸ್ಥೆಗಳನ್ನು ಜಾರಿಗೆ ತರುವುದಾಗಿ ಮತ್ತು ರಾಜಕೀಯ ಹಿಂಸಾಚಾರದ ತನಿಖೆಗಾಗಿ ವಿಶೇಷ ಆಯೋಗವನ್ನು ರಚಿಸಿ, ಮಾಫಿಯಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು.
ಭದ್ರತೆಯ ದೃಷ್ಟಿಯಿಂದ ಬಿಜೆಪಿ ಅನಿವಾರ್ಯ
ನಿನ್ನೆ ಪುರ್ಬಾ ಬರ್ಧಮಾನ್‌ನಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯದ ಅಭಿವೃದ್ಧಿ ಮತ್ತು ಭದ್ರತೆಯ ದೃಷ್ಟಿಯಿಂದ ಬಿಜೆಪಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ .ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದಿನೇ ದಿನೇ ಜನಬೆಂಬಲ ಹೆಚ್ಚುತ್ತಿರುವುದನ್ನು ಕಂಡು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈಗ ತೀವ್ರ ಆತಂಕಕ್ಕೆ ಒಳಗಾಗಿ ಪ್ಯಾನಿಕ್ ಮೂಡ್‌ನಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು.
ಅಕ್ರಮ ನುಸುಳುವಿಕೆಯ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಿಂದ ಪ್ರತಿಯೊಬ್ಬ ನುಸುಳುಕೋರರನ್ನು ಹೊರಹಾಕಲು ಬಿಜೆಪಿ ಬದ್ಧವಾಗಿದ್ದು, ಅಕ್ರಮವಾಗಿ ನೆಲೆಸಲು ನೆರವು ಮತ್ತು ರಾಜಕೀಯ ಆಶ್ರಯ ನೀಡಿದವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಇಂತಹ ಅಕ್ರಮ ನುಸುಳುವಿಕೆಯನ್ನು ವಿರೋಧಿಸುತ್ತವೆ ಎಂಬುದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು(ಏಜೆನ್ಸೀಸ್).