ತಿರುಪತಿ ತಿರುಮಲ ದೇವಾಸ್ಥಾನ 
ದೇಶ

ಯೋಜನೆಗಳ ದಾನಿಗಳ ಸೌಲಭ್ಯಗಳಲ್ಲಿ ಟಿಟಿಡಿ ಮಹತ್ವದ ಬದಲಾವಣೆ; ಇಂದು ಮಧ್ಯರಾತ್ರಿಯಿಂದಲೇ ಹೊಸ ನಿಯಮ ಜಾರಿ

ಮೋಹನ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಟಿಟಿಡಿ ಟ್ರಸ್ಟ್‌ಗಳು, ಯೋಜನೆಗಳ ದಾನಿಗಳ ಸೌಲಭ್ಯಗಳಲ್ಲಿ ಬದಲಾವಣೆ
  • ಎಸ್‌ಎಸ್‌ಡಿ ಭಕ್ತರಿಗೆ ಹೊಸ ಶೆಡ್‌ಗಳು, ಕ್ಯೂಲೈನ್‌ಗಳು
  • ಇಂದು ಮಧ್ಯರಾತ್ರಿಯಿಂದಲೇ ನಿಯಮ ಜಾರಿ
ಆಂಧ್ರಪ್ರದೇಶ: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (TTD) ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಸಮ್ಮುಖದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಕ್ತರ ಸೌಕರ್ಯ, ಸುರಕ್ಷತೆ ಮತ್ತು ಹಿಂದೂ ಧರ್ಮ ಪ್ರಚಾರಕ್ಕೆ ಸಂಬಂಧಿಸಿದಂತೆ ಹಲವು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಗ್ರೀನ್​ ಸಿಗ್ನಲ್​ ನೀಡಲಾಗಿದೆ.

ಪಾರದರ್ಶಕತೆಗೆ ಆದ್ಯತೆ

ದೇಣಿಗೆಗಳ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಏಕರೂಪತೆ ತರುವ ನಿಟ್ಟಿನಲ್ಲಿ ವಿವಿಧ ಟ್ರಸ್ಟ್‌ಗಳು ಹಾಗೂ ಯೋಜನೆಗಳಿಗೆ ದೇಣಿಗೆ ನೀಡುವ ದಾನಿಗಳಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹೊಸ ನಿಯಮಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಟಿಟಿಡಿ ತಿಳಿಸಿದೆ. ಈಗಾಗಲೇ ದೇಣಿಗೆ ನೀಡಿರುವ ದಾನಿಗಳ ಹಳೆಯ ಸೌಲಭ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ಮಂಡಳಿಯ ಪ್ರಮುಖ ನಿರ್ಧಾರಗಳು

6.31 ಕೋಟಿ ರೂ. ವೆಚ್ಚದಲ್ಲಿ ತಿರುಮಲದಲ್ಲಿ ಎಸ್‌ಎಸ್‌ಡಿ (SSD) ಟೋಕನ್ ಹೊಂದಿರುವ ಭಕ್ತರು ಕಾಯಲು ಆಳ್ವಾರ್ ಟ್ಯಾಂಕ್ ಬಳಿ ಶಾಶ್ವತ ಆಶ್ರಯ ತಾಣಗಳು (ಶೆಲ್ಟರ್‌ಗಳು), ಕ್ಯೂಲೈನ್‌ಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲು ಟೆಂಡರ್‌ಗಳಿಗೆ ಅನುಮೋದನೆ ನೀಡಲಾಗಿದೆ.
ತಿರುಮಲದಲ್ಲಿರುವ ಕುಮಾರಧಾರ ಮತ್ತು ಪಸುಪುಧಾರ ಅಣೆಕಟ್ಟುಗಳು ಮತ್ತಷ್ಟು ಸದೃಢವಾಗಿರಲು ಡಬಲ್ ಲೇನ್ ಸೇತುವೆ ನಿರ್ಮಾಣಕ್ಕಾಗಿ 2.77 ಕೋಟಿ ರೂ. ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ.
ತಿರುಮಲದಲ್ಲಿ ಹಸಿರು ಇಂಧನ (ಗ್ರೀನ್ ಎನರ್ಜಿ) ಅಭಿವೃದ್ಧಿಪಡಿಸುವ ಭಾಗವಾಗಿ ಜಿಎನ್‌ಸಿ (GNC) ಬಳಿ 800 ಕಿಲೋವ್ಯಾಟ್ ಸಾಮರ್ಥ್ಯದ ವಿಂಡ್ ಟರ್ಬೈನ್ ಜನರೇಟರ್ ಅನ್ನು 'ವಿಶ್ ವಿಂಡ್ ಇನ್‌ಫ್ರಾಸ್ಟ್ರಕ್ಚರ್' ಸಂಸ್ಥೆಯು ದೇಣಿಗೆಯಾಗಿ ಸ್ಥಾಪಿಸಲು ಮತ್ತು ಟಿಟಿಡಿಗೆ 25 ವರ್ಷಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಸಲು ಒಪ್ಪಿಗೆ ಸೂಚಿಸಲಾಗಿದೆ. ಎಸ್‌ವಿ ಮ್ಯೂಸಿಯಂನಲ್ಲಿ 12 ವರ್ಷ ಮೇಲ್ಪಟ್ಟ ಸಂದರ್ಶಕರಿಗೆ 50 ರೂ. (ಜಿಎಸ್‌ಟಿ ಸೇರಿ) ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮ್ಯೂಸಿಯಂ ನಿರ್ವಹಣೆಯ ಜವಾಬ್ದಾರಿಯನ್ನು ಟಾಟಾ ಸಂಸ್ಥೆಯ ಮೂಲಕ ನಡೆಸಲು ಆ ಸಂಸ್ಥೆಯನ್ನು ಕೋರಲು ನಿರ್ಧರಿಸಲಾಗಿದೆ.
ತಿರುಮಲ ಕಾಕುಲಮಾನುತಿಪ್ಪ ಬಳಿಯಿರುವ 25 ವರ್ಷಗಳಿಗಿಂತ ಹಳೆಯದಾದ ಘನತ್ಯಾಜ್ಯವನ್ನು ಬಯೋ-ರೆಮಿಡಿಯೇಷನ್ ಮತ್ತು ಬಯೋ-ಮೈನಿಂಗ್ ಮೂಲಕ ವೈಜ್ಞಾನಿಕವಾಗಿ ಸಂಸ್ಕರಿಸಲು 5 ಕೋಟಿ ರೂ. ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ.

ಕೋದಂಡರಾಮಸ್ವಾಮಿ ದೇವಾಲಯದ ಅಭಿವೃದ್ಧಿ

ಒಂಟಿಮಿಟ್ಟ ದೇವಾಲಯದ ಬಳಿ ಯಾತ್ರಿಕರ ಸೌಕರ್ಯಕ್ಕಾಗಿ 17.84 ಕೋಟಿ ರೂ. ವೆಚ್ಚದಲ್ಲಿ 100 ಕೊಠಡಿಗಳ ಬೃಹತ್ ವಿಶ್ರಾಂತಿ ಗೃಹ ನಿರ್ಮಾಣದ ಟೆಂಡರ್ ಅಂಗೀಕರಿಸಲಾಗಿದೆ. ದೇವಾಲಯದ ಈಶಾನ್ಯ ಮಾಡವೀಧಿಯ ವಿಸ್ತರಣೆಗಾಗಿ 6,103 ಚದರ ಅಡಿ ಭೂಮಿ ಸ್ವಾಧೀನಕ್ಕೆ 2.11 ಕೋಟಿ ರೂ. ಹಣವನ್ನು ಜಿಲ್ಲಾಡಳಿತಕ್ಕೆ ಪಾವತಿಸಲು ಒಪ್ಪಿಗೆ ನೀಡಲಾಗಿದೆ.
ಒಂಟಿಮಿಟ್ಟ ಸೀತಾ ಲಕ್ಷ್ಮಣ ಸಮೇತ ಕೋದಂಡರಾಮಸ್ವಾಮಿ ವಾರಿಯ ಮೂಲ ಮೂರ್ತಿಗಳಿಗೆ ಚಿನ್ನದ ಕವಚ ತಯಾರಿಸಲು ಟಿಟಿಡಿ ಖಜಾನೆಯಿಂದ 1,000 ಗ್ರಾಂ ಚಿನ್ನ ಬಳಸಲು ಅಸ್ತು ಎನ್ನಲಾಗಿದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ತಿರುಮಲ ಮತ್ತು ತಿರುಪತಿಯಲ್ಲಿರುವ ಟಿಟಿಡಿ ದೇವಾಲಯಗಳು ಹಾಗೂ ವಿಶ್ರಾಂತಿ ಗೃಹಗಳಲ್ಲಿ ಅಗ್ನಿಶಾಮಕ ವ್ಯವಸ್ಥೆಗಳ ಸಮಗ್ರ ನಿರ್ವಹಣೆಗಾಗಿ 2.35 ಕೋಟಿ ರೂ. ವೆಚ್ಚದಲ್ಲಿ ನಿರ್ವಹಣಾ ಕಾಮಗಾರಿಗಳನ್ನು ನಿರಂತರವಾಗಿ ಮುಂದುವರಿಸಲು ನಿರ್ಧರಿಸಲಾಗಿದೆ.
ತಿರುಮಲದ ಟಿಬಿಸಿ ಮತ್ತು ಎಟಿಸಿ ವಿಶ್ರಾಂತಿ ಗೃಹಗಳ ಬಳಿಯಿರುವ 12 ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಅವುಗಳ ಜಾಗದಲ್ಲಿ ದಾನಿಗಳ ಸಹಕಾರದೊಂದಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. 2027ನೇ ವರ್ಷಕ್ಕೆ ಸಂಬಂಧಿಸಿದಂತೆ ಶ್ರೀವಾರಿಯವರ ಕ್ಯಾಲೆಂಡರ್‌ಗಳು ಮತ್ತು ಡೈರಿಗಳನ್ನು ಮುದ್ರಿಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ. ಇದರಲ್ಲಿ 10 ಲಕ್ಷ ಡೈರಿಗಳು, 13.50 ಲಕ್ಷ ಸಂಖ್ಯೆಯ 12 ಪುಟಗಳ ಕ್ಯಾಲೆಂಡರ್‌ಗಳು ಮತ್ತು 75 ಸಾವಿರ ಸಂಖ್ಯೆಯ 6 ಪುಟಗಳ ಕ್ಯಾಲೆಂಡರ್‌ಗಳನ್ನು ಮುದ್ರಿಸಲು ಅನುಮೋದನೆ ನೀಡಲಾಗಿದೆ.
ತಿರುಮಲ ಆಕ್ಟೋಪಸ್ ಬೇಸ್ ಕ್ಯಾಂಪ್‌ನಲ್ಲಿ ಹೆಚ್ಚುವರಿ ಮೂಲಸೌಕರ್ಯಗಳ ಕಲ್ಪನೆಗೆ ಮತ್ತು ಎಫ್‌ಎಮ್‌ಎಸ್ (FMS) ಸೇವೆಗಳಿಗಾಗಿ 2.91 ಕೋಟಿ ರೂ. ಮಂಜೂರು ಮಾಡಲಾಗಿದೆ. ಒಂಟಿಮಿಟ್ಟ ಶ್ರೀ ಸೀತಾ ಲಕ್ಷ್ಮಣ ಸಮೇತ ಕೋದಂಡರಾಮಸ್ವಾಮಿ ವಾರಿಯ ಮೂಲವಿರಾಟುಗಳಿಗೆ (ಮೂಲ ಮೂರ್ತಿಗಳಿಗೆ) ಚಿನ್ನದ ಕವಚ ತಯಾರಿಸಲು ಟಿಟಿಡಿ ಖಜಾನೆಯಲ್ಲಿರುವ 1,000 ಗ್ರಾಂ ಚಿನ್ನವನ್ನು ಬಳಸಿಕೊಳ್ಳಲು ಅನುಮೋದನೆ ನೀಡಲಾಗಿದೆ.
17.84 ಕೋಟಿ ರೂ. ವೆಚ್ಚದಲ್ಲಿ ಒಂಟಿಮಿಟ್ಟ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಬಳಿ ಯಾತ್ರಿಕರ ಸೌಕರ್ಯಕ್ಕಾಗಿ 100 ಕೊಠಡಿಗಳ ವಿಶ್ರಾಂತಿ ಗೃಹದ ನಿರ್ಮಾಣಕ್ಕೆ ಟೆಂಡರ್‌ಗಳನ್ನು ಅಂಗೀಕರಿಸಲಾಗಿದೆ. ದೇವಾಲಯದ ಈಶಾನ್ಯ ಮಾಡವೀಧಿಯ ವಿಸ್ತರಣೆ ಮತ್ತು ಯಾತ್ರಿಕರ ಸೌಕರ್ಯಗಳ ಅಭಿವೃದ್ಧಿಗಾಗಿ 6,103 ಚದರ ಅಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತಕ್ಕೆ 2.11 ಕೋಟಿ ರೂ. ಪಾವತಿಸಲು ಟಿಟಿಡಿ ಮಂಡಳಿ ಅನುಮೋದನೆ ನೀಡಿದೆ.
ತಿರುಪತಿಯ ಶ್ರೀ ತಾತಯ್ಯಗುಂಟ ಗಂಗಮ್ಮ ಅಮ್ಮನವರ ದೇವಸ್ಥಾನದ ಮುಖಮಂಟಪದ ಮೇಲೆ "ಸಾಲಹಾರಂ" ನಿರ್ಮಾಣ ಮತ್ತು ಉಳಿದ ಪ್ರಾಕಾರದ ಗೋಡೆ ನಿರ್ಮಾಣಕ್ಕಾಗಿ 2.50 ಕೋಟಿ ರೂ. ವೆಚ್ಚದ ಟೆಂಡರ್‌ಗೆ ಅನುಮೋದನೆ ಮತ್ತು ಟಿಟಿಡಿಯಂತಹ ಧಾರ್ಮಿಕ ಸಂಸ್ಥೆಯಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳ ನಿರಂತರ ಪಾರಾಯಣ ನಡೆಯುವಂತೆ ಕ್ರಮಕೈಗೊಳ್ಳಲಾಗಿದೆ. ಇದರ ಭಾಗವಾಗಿ ರಾಜ್ಯದ ಪ್ರಮುಖ ದೇವಾಲಯಗಳಲ್ಲೂ ನಿತ್ಯ ಪಾರಾಯಣ ಹಾಗೂ ಲೋಕ ಕಲ್ಯಾಣ ನಡೆಯುವಂತೆ 'ವೇದ ಪಾರಾಯಣ ಯೋಜನೆ'ಯ ಮೂಲಕ 791 ಜನರನ್ನು ಸಂಭಾವನೆ ವೇದ ಪಂಡಿತರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ.
ಹಿಂದೂ ಧರ್ಮ ಪ್ರಚಾರ ಪರಿಷತ್, ದಾಸ ಸಾಹಿತ್ಯ ಪ್ರಾಜೆಕ್ಟ್, ಅನ್ನಮಾಚಾರ್ಯ ಪ್ರಾಜೆಕ್ಟ್, ಎಸ್‌ವಿ ಸಂಗೀತ ಮತ್ತು ನೃತ್ಯ ಕಾಲೇಜು ಮುಂತಾದ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಸಂಭಾವನೆಯನ್ನು ಆಯಾ ಕಲಾವಿದರ ನೈಪುಣ್ಯಕ್ಕೆ ಅನುಗುಣವಾಗಿ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಟಿಟಿಡಿ ಕ್ಯಾಂಟೀನ್ ವಿಭಾಗದಲ್ಲಿರುವ 65 ಸರ್ವರ್ ಹುದ್ದೆಗಳನ್ನು ಕ್ಯಾಟರಿಂಗ್ ಸೂಪರ್‌ವೈಸರ್ ಹುದ್ದೆಗಳಾಗಿ ಮೇಲ್ದರ್ಜೆಗೇರಿಸಲು (UP GRADE) ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ.
ಈ ಸಭೆಯಲ್ಲಿ ಹಲವು ಮಂಡಳಿ ಸದಸ್ಯರು, ಹೆಚ್ಚುವರಿ ಇಒ ಶ್ರೀ ಸಿ.ಎಚ್. ವೆಂಕಯ್ಯ ಚೌಧರಿ, ಜೆಇಒ ಡಾ. ಎ. ಶರತ್, ಸಿವಿಎಸ್‌ಒ ಶ್ರೀ ಮುರಳಿ ಕೃಷ್ಣ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.