ಸಿಎಂ ದಳಪತಿ ವಿಜಯ್ 
ದೇಶ

ಇಂದು ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ; ಬಹುಮತ ಪರೀಕ್ಷೆಯಲ್ಲಿ ಗೆಲ್ತಾರಾ? ಸಿಎಂ ದಳಪತಿ ವಿಜಯ್ | Thalapathy Vijay

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ(ಮೇ 13) ಸೂಪರ್ ಸ್ಟಾರ್ ಮತ್ತು ಸಿಎಂ ದಳಪತಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವೂ ವಿಶ್ವಾಸಮತಯಾಚನೆ ಮಾಡಲಿದ್ದು, ಟಿವಿಕೆ ಬಲವು 107 ಶಾಸಕರಾಗಿದ್ದು, ಮಿತ್ರ ಪಕ್ಷಗಳೊಂದಿಗೆ ಬಹುಮತ ಪರೀಕ್ಷೆಯನ್ನು ಎದುರಿಸಲಿದೆ.
ಒಟ್ಟು 108 ಶಾಸಕರನ್ನು ಗೆದ್ದಿದ್ದ ಟಿವಿಕೆ, ಎರಡು ಸ್ಥಾನಗಳಲ್ಲಿ ಗೆದ್ದ ವಿಜಯ್ ತಿರುಚಿ ಪೂರ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಮತ್ತು ಮಂಗಳವಾರ ಮದ್ರಾಸ್ ಹೈಕೋರ್ಟ್ ಒಂದೇ ಮತದಿಂದ ಗೆದ್ದ ಟಿವಿಕೆ ತಿರುಪತ್ತೂರು ಶಾಸಕ ಶ್ರೀನಿವಾಸ ಸೇತುಪತಿ ವಿಧಾನಸಭೆಯಲ್ಲಿ ಮತದಾನದಲ್ಲಿ ಭಾಗವಹಿಸಬಾರದು ಎಂದು ಆದೇಶಿಸಿದೆ. ಈಗ ಟಿವಿಕೆಯ ಬಲಾ-ಬಲ 106ಕ್ಕೆ ಕುಸಿದಿದೆ. 
ಟಿವಿಕೆಯ 106 ಶಾಸಕರ ಜೊತೆಗೆ ಕಾಂಗ್ರೆಸ್​ನ (5), ಕಮ್ಯುನಿಸ್ಟರು (4), ವಿಸಿಕೆ (2), ಐಯುಎಂಎಲ್ (2) ಹಾಗೂ ಎಎಂಎಂಕೆ (1) ಬೆಂಬಲದೊಂದಿಗೆ ವಿಜಯ್ ಸರ್ಕಾರವು ಪ್ರಸ್ತುತ 120 ಸದಸ್ಯರ ಬಲವನ್ನು ಹೊಂದಿದೆ. ಜೊತೆಗೆ ನಿನ್ನೆ ಎಐಡಿಎಂಕೆಯಿಂದ ಒಡೆದು ಬಂದಿರುವ ಷಣ್ಮುಗಂ ಬಣದ 30 ಶಾಸಕರ ಬೆಂಬಲವು ಸರ್ಕಾರಕ್ಕಿದ್ದು, ಬಹಳ ಸುಲಭವಾಗಿ ವಿಜಯ್ ಬಹುಮತ ಸಾಬೀತುಪಡಿಸಲಿದ್ದಾರೆ.

ವಿಜಯ್​ಗೆ ಬೆಂಬಲ ನೀಡಿದ ಷಣ್ಮುಗಂ ಬಣ 

ಚುನಾವಣೆಯ ಫಲಿತಾಂಶದ ಬಳಿಕ ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ ವಿರುದ್ಧ ಬಂಡಾಯ ಬಾವುಟ ಹಾರಿಸಿರುವ ಹಿರಿಯ ಶಾಸಕ ಸಿವಿ ಷಣ್ಮುಗಂ ನೇತೃತ್ವದ 30 ಶಾಸಕರು ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಹಾಗೆಯೇ ಸ್ಪೀಕರ್ ಭೇಟಿ ಮಾಡಿ ಎಸ್‌ಪಿ ವೇಲುಮಣಿ ಅವರನ್ನು ತಮ್ಮ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿವಿ ಷಣ್ಮುಗಂ, ಎಐಎಡಿಎಂಕೆ, ಡಿಎಂಕೆಗೆ ವಿರುದ್ಧವಾಗಿ ಹುಟ್ಟಿಕೊಂಡಿರುವ ಪಕ್ಷ.  ಡಿಎಂಕೆ ಇಪಿಎಸ್ ಅವರನ್ನು ಸಿಎಂ ಆಗಿ ಬೆಂಬಲಿಸಲು ಒಪ್ಪಿಕೊಂಡಿದ್ದು ನಮಗೆ ಆಶ್ಚರ್ಯವಾಯಿತು. ಈ ಪ್ರಸ್ತಾವನೆಯನ್ನು ಸ್ವೀಕರಿಸಲು ಇಪಿಎಸ್ ಮಾಡಿದ ಮನವಿಯನ್ನು ಪಕ್ಷದ ಶಾಸಕರು ತಿರಸ್ಕರಿಸಿದ್ದಾರೆ. ಪ್ರಸ್ತುತ, ಎಐಎಡಿಎಂಕೆ ಎನ್‌ಡಿಎಯಿಂದ ಹೊರ ಬಂದಿದೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಟಿವಿಕೆ ಗೆಲುವು ಸಾಧಿಸಿಲ್ಲ, ಆದರೆ ರಾಜ್ಯದ ಜನ ದಳಪತಿ ವಿಜಯ್ ಸಿಎಂ ಮಾಡಲು ಮತ ನೀಡಿದ್ದಾರೆ. ಈ ಹಿನ್ನೆಲೆ ಪಕ್ಷವನ್ನು ಉಳಿಸಲು ಮತ್ತು ಟಿವಿಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸಲು ಹೆಚ್ಚಿನ ಶಾಸಕರು ನಿರ್ಧರಿಸಿದ್ದಾರೆ ಎಂದಿದ್ದಾರೆ (ಏಜೆನ್ಸೀಸ್).