H-1B visa | ಟ್ರಂಪ್ ಹೇರಿದ್ದ 1 ಲಕ್ಷ ಡಾಲರ್ ಶುಲ್ಕ ಕಾನೂನುಬಾಹಿರ ಎಂದ ಅಮೆರಿಕ ನ್ಯಾಯಾಲಯ
H-1B visa: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಎಚ್-1ಬಿ (H-1B) ವೀಸಾಗಳ ಮೇಲೆ ವಿಧಿಸಿದ್ದ ಭಾರಿ ಮೊತ್ತದ 100,000 ಡಾಲರ್ ಶುಲ್ಕವನ್ನು ಅಲ್ಲಿನ ಫೆಡರಲ್ ನ್ಯಾಯಾಲಯವು ರದ್ದುಗೊಳಿಸಿದೆ. ಬೋಸ್ಟನ್‌ನ ಯುಎಸ್ ಡಿಸ್ಟ್ರಿಕ್ಟ್ ಜಡ್ಜ್ ಲಿಯೋ ಸೊರೊಕಿನ್ ಈ ಆದೇಶವನ್ನು ಹೊರಡಿಸಿದ್ದು, ಕಾಂಗ್ರೆಸ್ (ಅಮೆರಿಕ ಸಂಸತ್ತು) ಅನುಮೋದನೆ ಇಲ್ಲದೆ ಇಷ್ಟೊಂದು ದೊಡ್ಡ ಮೊತ್ತದ ಶುಲ್ಕವನ್ನು ಹೇರಲು ಅಧ್ಯಕ್ಷರಿಗೆ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ವಿಧಿಸಿದ್ದ ನೀತಿಯನ್ನು ಕಾನೂನುಬಾಹಿರ ಎಂದು ಘೋಷಿಸಿರುವ ನ್ಯಾಯಾಧೀಶರು, ತಕ್ಷಣವೇ ಅಸಿಂಧುಗೊಳಿಸುವಂತೆ ಆದೇಶಿಸಿದ್ದಾರೆ. ಈ ನಿರ್ಧಾರವು ಟ್ರಂಪ್ ಆಡಳಿತವು ಉದ್ಯೋಗ ಆಧಾರಿತ ವಲಸೆ ನಿಯಮಗಳನ್ನು ಬಿಗಿಗೊಳಿಸಲು ಮತ್ತು ಅಮೆರಿಕದ ಕಂಪನಿಗಳು ವಿದೇಶಿ ಪ್ರತಿಭೆಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದನ್ನು ಕಷ್ಟಕರವಾಗಿಸಲು ನಡೆಸುತ್ತಿದ್ದ ಪ್ರಯತ್ನಗಳಿಗೆ ಎದುರಾದ ದೊಡ್ಡ ಹಿನ್ನಡೆಯಾಗಿದೆ.
ಟ್ರಂಪ್ ವಲಸೆ ನಿಯಂತ್ರಣ ಕ್ರಮಗಳ ಭಾಗವಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಈ ಭಾರಿ ಶುಲ್ಕವನ್ನು ಘೋಷಿಸಿದ್ದರು. ಈ ನಿಯಮದಿಂದಾಗಿ ಕಂಪನಿಗಳು ವಿದೇಶಿ ಉದ್ಯೋಗಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ಥಳೀಯ ಅಮೆರಿಕನ್ನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಉತ್ತೇಜನ ಸಿಗುತ್ತದೆ ಎಂದು ಟ್ರಂಪ್ ಸರ್ಕಾರ ವಾದಿಸಿತ್ತು. ಈ ಹೊಸ ನಿಯಮ ಜಾರಿಗೆ ಬರುವ ಮುನ್ನ ಉದ್ಯೋಗದಾತರು ಎಚ್-1ಬಿ ವೀಸಾ ಪ್ರಕ್ರಿಯೆಗಾಗಿ ಸಾಮಾನ್ಯವಾಗಿ ಕೇವಲ 2,000 ದಿಂದ 5,000 ಡಾಲರ್‌ವರೆಗೂ ಶುಲ್ಕ ಪಾವತಿಸುತ್ತಿದ್ದರು.
ಟ್ರಂಪ್ ಅವರ ಈ ನೀತಿಯನ್ನು ವಿರೋಧಿಸಿ ಕ್ಯಾಲಿಫೋರ್ನಿಯಾ ಸೇರಿದಂತೆ ಡೆಮಾಕ್ರಾಟ್ ನೇತೃತ್ವದ 20 ರಾಜ್ಯಗಳು ನ್ಯಾಯಾಲಯದಲ್ಲಿ ಸವಾಲು ಹಾಕಿದ್ದವು. ಅಧ್ಯಕ್ಷರು ತಮ್ಮ ಸ್ವಂತ ಅಧಿಕಾರದ ಮೇಲೆ ಇಂತಹ ದೊಡ್ಡ ಮೊತ್ತದ ಶುಲ್ಕವನ್ನು ಸೃಷ್ಟಿಸಲು ಕಾನೂನುಬದ್ಧ ಅರ್ಹತೆ ಹೊಂದಿಲ್ಲ ಎಂದು ರಾಜ್ಯಗಳು ವಾದಿಸಿದ್ದವು. ನ್ಯಾಯಾಧೀಶ ಸೊರೊಕಿನ್ ಅವರು ಈ ರಾಜ್ಯಗಳ ವಾದವನ್ನು ಪುರಸ್ಕರಿಸಿದ್ದು, ಟ್ರಂಪ್ ನೀತಿಗೆ ಎದುರಾಗಿರುವ ಹಲವು ಕಾನೂನು ಹಿನ್ನಡೆಗಳಲ್ಲಿ ಈ ತೀರ್ಪು ಕೂಡ ಒಂದಾಗಿದೆ. ವಿದೇಶಿ ಉದ್ಯೋಗಿಗಳನ್ನು ಹೆಚ್ಚಾಗಿ ಅವಲಂಬಿಸಿರುವ ಯುಎಸ್ ಚೇಂಬರ್ ಆಫ್ ಕಾಮರ್ಸ್, ವಿವಿಧ ಉದ್ಯಮ ಸಂಸ್ಥೆಗಳು ಮತ್ತು ಉದ್ಯೋಗದಾತರು ಪ್ರತ್ಯೇಕ ಮೊಕದ್ದಮೆಗಳನ್ನು ಹೂಡಿದ್ದಾರೆ. ಈ ತೀರ್ಪಿನ ವಿರುದ್ಧ ಡೊನಾಲ್ಡ್ ಟ್ರಂಪ್ ಸರ್ಕಾರ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ.
ಉನ್ನತ ಕೌಶಲ್ಯ ಹೊಂದಿರುವ ಭಾರತೀಯರು ಅಮೆರಿಕದಲ್ಲಿ ಕೆಲಸ ಮಾಡಲು ಎಚ್-1ಬಿ ಕಾರ್ಯಕ್ರಮವು ಅತ್ಯಂತ ಪ್ರಮುಖ ಮಾರ್ಗವಾಗಿದೆ. ಇದು ತಂತ್ರಜ್ಞಾನ, ಇಂಜಿನಿಯರಿಂಗ್, ಆರೋಗ್ಯ ಮತ್ತು ಹಣಕಾಸು ವಲಯದಲ್ಲಿ ಪರಿಣತಿ ಹೊಂದಿರುವ ವಿದೇಶಿ ವೃತ್ತಿಪರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅವಕಾಶ ನೀಡುತ್ತದೆ. ಪ್ರತಿ ವರ್ಷ ವಿತರಿಸಲಾಗುವ ಎಚ್-1ಬಿ ವೀಸಾಗಳಲ್ಲಿ ಭಾರತೀಯ ಪ್ರಜೆಗಳೇ ನಿರಂತರವಾಗಿ ಸಿಂಹ ಪಾಲನ್ನು ಪಡೆಯುತ್ತಿದ್ದಾರೆ. ಅಮೆರಿಕದ ವಲಸೆ ವ್ಯವಸ್ಥೆಯಲ್ಲಿ ಪ್ರಮುಖವಾಗಿರುವ ಈ ಕಾರ್ಯಕ್ರಮದ ಅಡಿಯಲ್ಲಿ ವಾರ್ಷಿಕವಾಗಿ 65,000 ವೀಸಾಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಪದವಿ ಪಡೆದ ಅರ್ಜಿದಾರರಿಗೆ ಹೆಚ್ಚುವರಿಯಾಗಿ 20,000 ವೀಸಾಗಳನ್ನು ಮೀಸಲಿಡಲಾಗುತ್ತದೆ.
ವಲಸೆ ವಕಾಲತ್ತು ಸಂಸ್ಥೆಯಾದ ಎಫ್‌ಡಬ್ಲ್ಯೂಡಿ ಡಾಟ್ ಯುಎಸ್ (FWD.us) ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಸುಮಾರು 730,000 ಎಚ್-1ಬಿ ವೀಸಾ ಹೊಂದಿರುವವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರೊಂದಿಗೆ ಸಂಗಾತಿಗಳು ಮತ್ತು ಮಕ್ಕಳು ಸೇರಿದಂತೆ ಸುಮಾರು 550,000 ಆಶ್ರಿತರು ಕೂಡ ಅಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಈ ತೀರ್ಪು ಉದ್ಯಮಗಳು, ವಿಶ್ವವಿದ್ಯಾಲಯಗಳು ಮತ್ತು ಸಾವಿರಾರು ವಿದೇಶಿ ಉದ್ಯೋಗಿಗಳಿಗೆ, ವಿಶೇಷವಾಗಿ ಭಾರತೀಯರಿಗೆ ಸಿಕ್ಕ ಬಹುದೊಡ್ಡ ಯಶಸ್ಸಾಗಿದೆ(ಏಜೆನ್ಸೀಸ್).