- ಯುಕ್ರೇನ್-ರಷ್ಯಾ ಯುದ್ಧಕ್ಕೆ ಅಂತ್ಯವಾಡಲು ಟ್ರಂಪ್ ನಿರ್ಧಾರ
- 28 ವಿಷಯಗಳನ್ನು ಒಳಗೊಂಡಿರುವ ಪ್ಲ್ಯಾನ್ಗೆ ಝೆಲೆನ್ಸ್ಕಿ ನಕಾರ
- ಯುಕ್ರೇನಿಯನ್ ಅಧ್ಯಕ್ಷನಿಗೆ ಟ್ರಂಪ್ ಎಚ್ಚರಿಕೆ ಸಂದೇಶ
ಅಮೆರಿಕ: ದೀರ್ಘಕಾಲದಿಂದ ನಡೆಯುತ್ತಿರುವ ಯುಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಅಂತ್ಯವಾಡಲು ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
ಹೊಸ 28 ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಪ್ಲ್ಯಾನ್ ಅನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮುಂದಿಟ್ಟಿರುವ ಟ್ರಂಪ್, ಮುಂದಿನ ಗುರುವಾರದೊಳಗೆ ಒಪ್ಪಿಗೆ ಸೂಚಿಸಿದರೆ ಒಳಿತು. ಇಲ್ಲವೇ, ಭಾರವಾದ ಹೃದಯದಿಂದ ಯುದ್ಧಭೂಮಿಯಲ್ಲಿ ನೀವು ಹೋರಾಡಬೇಕಿದೆ ಎಂದು ಎಚ್ಚರಿಸಿದ್ದಾರೆ.
ರಷ್ಯಾ ವಿರುದ್ಧದ ಯುದ್ಧದಲ್ಲಿ ಮುಂದುವರಿಯಲು ನಿಮ್ಮ ಬಳಿ ಯಾವುದೇ "ಕಾರ್ಡ್‌ಗಳು ಇಲ್ಲ" ಮತ್ತು ಶೀಘ್ರವೇ ಇತ್ಯರ್ಥಕ್ಕೆ ಮುಂದಾಗಬೇಕು ಎಂಬ ತಮ್ಮ ವಾದವನ್ನು ಪುನರುಚ್ಚರಿಸಿದ್ದಾರೆ. ಈ ಖಡಕ್ ನುಡಿ ಮೂಲಕ ಪುಟಿನ್ ರಾಷ್ಟ್ರ ಪರ ಬ್ಯಾಟ್ ಬೀಸಿರುವ ಟ್ರಂಪ್, ಉಭಯ ದೇಶಗಳ ನಡುವಿನ ಸಮರಕ್ಕೆ ಪುಲ್ ಸ್ಟಾಪ್ ಇಡುವುದರ ಜತೆಗೆ ಝೆಲೆನ್ಸ್ಕಿಗೆ ಎಚ್ಚರಿಕೆಯ ಸಂದೇಶ ನೀಡಿರುವುದು ಕೊಂಚ ಗೊಂದಲಮಯವಾಗಿದೆ.
ಈ ಸಂದರ್ಭದಲ್ಲಿ, ಟ್ರಂಪ್ ಇತ್ತೀಚೆಗೆ ಶ್ವೇತಭವನದಲ್ಲಿ ಸುದ್ದಿಗಾರರಿಗೆ ರಷ್ಯಾ-ಉಕ್ರೇನ್ ಸಮಸ್ಯೆಗೆ ಇದು ಅವರ ಅಂತಿಮ ಪ್ರಸ್ತಾಪವಲ್ಲ ಎಂದು ಹೇಳಿದ್ದರು. ಆದರೀಗ, ನವೆಂಬರ್ 27ರೊಳಗೆ ಯುದ್ಧ ನಿಲ್ಲಿಸುವ ಕುರಿತು ಹೊಸದಾಗಿ ನೀಡಿರುವ ಅಂಶಗಳನ್ನು ಗಮನಿಸಿ, ಅದಕ್ಕೆ ಒಪ್ಪಿಗೆ ಸೂಚಿಸುವುದು ಸೂಕ್ತ ಎಂದು ಯುಕ್ರೇನ್ ಮೇಲೆ ಟ್ರಂಪ್ ತೀವ್ರ ಒತ್ತಡ ಹೇರಿದ್ದಾರೆ.
ಯುಎಸ್ ಪ್ರಸ್ತಾಪ ರಷ್ಯಾದಿಂದ ಬಂದಿದೆ!
ಈ ಮಧ್ಯೆ, ರಷ್ಯಾ-ಯುಕ್ರೇನ್ ಯುದ್ಧ ಅಂತ್ಯ ಯೋಜನೆಯ ಬಗ್ಗೆ ಮತ್ತೊಂದು ಗಂಭೀರ ಆರೋಪ ಹೊರಬಿದ್ದಿದೆ. ಈ 28 ಅಂಶಗಳ ದಾಖಲೆ ವಾಸ್ತವವಾಗಿ ರಷ್ಯಾದಿಂದ ಬಂದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸೆನೆಟರ್‌ಗಳಿಗೆ ಹೇಳಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಮೈಕ್ ರೌಂಡ್ಸ್ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ವಿದೇಶಾಂಗ ಇಲಾಖೆ ಈ ವಿಚಾರಕ್ಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ. ಇದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ,(ಏಜೆನ್ಸೀಸ್).