India-US Ties | ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ದೇಶ

ನಾವಿಬ್ಬರೂ ಕೆಲಸ ಮಾಡಿ ತೋರಿಸುವವರು.. ಪ್ರಧಾನಿ ಮೋದಿಯನ್ನು ರಿಸಲ್ಟ್ ಓರಿಯೆಂಟೆಡ್ ಲೀಡರ್​ ಎಂದು ಶ್ಲಾಘಿಸಿದ ಟ್ರಂಪ್! | India-US Ties

ದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳು (India-US Ties)ಹೊಸ ಎತ್ತರಕ್ಕೆ ಏರುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಭಾರತದೊಂದಿಗಿನ ಸಂಬಂಧವು ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಟ್ರಂಪ್, ಪ್ರಧಾನಿ ಮೋದಿ ಅವರನ್ನು ಫಲಿತಾಂಶ ನೀಡುವ ನಾಯಕ ಎಂದು ಬಣ್ಣಿಸಿದ್ದಾರೆ.
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೂಲಕ ಸಂದೇಶ ಹಂಚಿಕೊಂಡಿರುವ ಟ್ರಂಪ್, ನಾವಿಬ್ಬರೂ ಕೇವಲ ಮಾತುಗಳಿಗಿಂತ ಕೆಲಸ ಮಾಡುವುದರಲ್ಲಿ ನಂಬಿಕೆ ಇರುವ ವ್ಯಕ್ತಿಗಳು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದು, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಗೆ ಇದು ಮತ್ತಷ್ಟು ವೇಗ ನೀಡಿದೆ.
ಮಾರ್ಚ್ 24ರ ಮಂಗಳವಾರ ನಡೆದ ದೂರವಾಣಿ ಸಂಭಾಷಣೆಯಲ್ಲಿ ಉಭಯ ನಾಯಕರು ಮಧ್ಯಪ್ರಾಚ್ಯದಲ್ಲಿ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ವಿಶೇಷವಾಗಿ ಜಾಗತಿಕ ಇಂಧನ ಪೂರೈಕೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯ ಸುರಕ್ಷತೆ ಮತ್ತು ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಅಪಾಯಗಳ ಬಗ್ಗೆ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಈ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪುನಃಸ್ಥಾಪನೆಗೆ ಭಾರತವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯು ಮುಕ್ತ ಮತ್ತು ಸುರಕ್ಷಿತವಾಗಿರುವುದು ಜಗತ್ತಿನ ಹಿತದೃಷ್ಟಿಯಿಂದ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಅಮೆರಿಕದೊಂದಿಗೆ ನಿರಂತರ ಸಂಪರ್ಕದಲ್ಲಿರಲು ಒಪ್ಪಿರುವುದಾಗಿ ಅವರು ಹೇಳಿದ್ದಾರೆ.
ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಈ ಕಾರ್ಯತಂತ್ರದ ಸಂವಾದವನ್ನು ದೃಢಪಡಿಸಿದ್ದು, ವಿಕಸನಗೊಳ್ಳುತ್ತಿರುವ ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಎದುರಿಸಲು ಎರಡೂ ದೇಶಗಳು ಸಂಘಟಿತವಾಗಿ ಕೆಲಸ ಮಾಡಲು ಬದ್ಧವಾಗಿವೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಹತ್ತು ದಿನಗಳವರೆಗೆ, ಅಂದರೆ ಏಪ್ರಿಲ್ 6, 2026ರವರೆಗೆ ಸ್ಥಗಿತಗೊಳಿಸುವುದಾಗಿ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. 
ಇರಾನ್ ಸರ್ಕಾರದ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜತಾಂತ್ರಿಕ ಮಾತುಕತೆಗಳು ಅತ್ಯಂತ ಸಕಾರಾತ್ಮಕವಾಗಿ ನಡೆಯುತ್ತಿವೆ ಎಂದು ಟ್ರಂಪ್​​ ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರಮುಖ ಬೆಳವಣಿಗೆಯ ಮಧ್ಯೆ, ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಅನೇಕ ವರದಿಗಳನ್ನು ಟ್ರಂಪ್ ಟೀಕಿಸಿದ್ದು, ಇರಾನ್ ಜೊತೆಗಿನ ಮಾತುಕತೆಗಳು ಅತ್ಯಂತ ಯಶಸ್ವಿಯಾಗಿ ಸಾಗುತ್ತಿವೆ ಎಂದು ಪುನರುಚ್ಚರಿಸಿದ್ದಾರೆ. ಒಟ್ಟಾರೆಯಾಗಿ, ಜಾಗತಿಕ ಅಸ್ಥಿರತೆಯ ಈ ಕಾಲಘಟ್ಟದಲ್ಲಿ ಭಾರತ ಮತ್ತು ಅಮೆರಿಕದ ಜಂಟಿ ಹೆಜ್ಜೆಗಳು ವಿಶ್ವದ ಗಮನ ಸೆಳೆಯುತ್ತಿವೆ(ಏಜೆನ್ಸೀಸ್​).