- ಭಾರತದ ಅಕ್ಕಿ ಮೇಲೆ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷರ ನಿರ್ಧಾರ
- ಸ್ಥಳೀಯ ರೈತರ ಸಮಸ್ಯೆ ಆಲಿಸಿದ ಬಳಿಕ ಈ ಮಾತು
- ತಮ್ಮ ರೈತರಿಗೆ ಉತ್ತೇಜನ ನೀಡಲು ಸುಂಕ ವಿಧಿಸಬೇಕು ಎಂಬ ಮಾತು
ನವದೆಹಲಿ: ಭಾರತದ ಮೇಲೆ ಮತ್ತೊಮ್ಮೆ ಸುಂಕ ಸಮರ ಸಾರಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ದೇಶದ ರೈತರ ಕೂಗಿಗೆ ಸ್ಪಂದಿಸಿರುವುದು ಸದ್ಯ ಸುಂಕದಾಟಕ್ಕೆ ಹೊಸ ದಾರಿಯನ್ನು ಮಾಡಿಕೊಟ್ಟಂತಿದೆ.
ಇತ್ತೀಚೆಗಷ್ಟೇ, ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ಕೊಟ್ಟು, ಅಮೆರಿಕ ವಿರುದ್ಧ ಒಂದಷ್ಟು ವಿಚಾರಗಳನ್ನು ಪ್ರಸ್ತಾಪಿಸಿದ ಕೆಲವೇ ದಿನಗಳಲ್ಲಿ ಟ್ರಂಪ್ನ ಈ ಮಾತುಗಳು ಮುನ್ನೆಲೆಗೆ ಬಂದಿರುವುದು ಸದ್ಯ ಕುತೂಹಲ ಕೆರಳಿಸಿದೆ. ದೇಶಿಯ ಉತ್ಪಾದಕರನ್ನು ಅಗ್ಗದ ವಿದೇಶಿ ಸರಕುಗಳ ಕಡಿತಗೊಳಿಸುತ್ತಿರುವ ಸಮಸ್ಯೆ ಬಗ್ಗೆ ಯುಎಸ್ ರೈತರು ಟ್ರಂಪ್ ಆಡಳಿತಕ್ಕೆ ದೂರಿದ ಬೆನ್ನಲ್ಲೇ ಟ್ರಂಫ್ ಭಾರತೀಯ ಅಕ್ಕಿ ಮತ್ತು ಕೆನಡಾದ ರಸಗೊಬ್ಬರಗಳು ಸೇರಿ ಕೃಷಿ ಆಮದುಗಳ ಮೇಲೆ ಹೊಸ ಸುಂಕಗಳನ್ನು ವಿಧಿಸುವ ಸಾಧ್ಯತೆಗಳು ಹೆಚ್ಚಿವೆ.
ಶ್ವೇತಭವನದಲ್ಲಿ ದೇಶಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸುತ್ತಿದ್ದ ಟ್ರಂಪ್, ಅಮೆರಿಕದ ರೈತರಿಗೆ 12 ಬಿಲಿಯನ್ ಡಾಲರ್‌ಗಳ ಹೊಸ ಬೆಂಬಲವನ್ನು ಬಹಿರಂಗಪಡಿಸಿದರು. ಇದೇ ವೇಳೆ ಆಮದುಗಳು ದೇಶೀಯ ಉತ್ಪಾದಕರಿಗೆ ಸವಾಲು ಹಾಕುತ್ತಿವೆ ಎಂಬ ರೈತರ ಸಮಸ್ಯೆಯನ್ನು ಗಂಭೀರವಾಗಿ ಆಲಿಸಿದರು. ನಂತರದಲ್ಲಿ, ಇದನ್ನು ಪರಿಹರಿಸುವ ಭರವಸೆಯನ್ನು ಗಟ್ಟಿಯಾಗಿ ಪುನರುಚ್ಚರಿಸಿದರು.
ಭಾರತ ಏಕೆ ತನ್ನ ಅಕ್ಕಿಯನ್ನು ಅಮೆರಿಕಕ್ಕೆ ತಂದು ಸುರಿಯುತ್ತಿದೆ? ಇದು ನಿಲ್ಲಿಗೆ ನಿಲ್ಲಬೇಕು ಎಂದು ಟ್ರಂಪ್ ಸಭೆಯಲ್ಲಿ ತಿಳಿಸಿದ್ದಾರೆ. ಭಾರತ, ವಿಯೆಟ್ನಾಂ ಮತ್ತು ಥೈಲ್ಯಾಂಡ್‌ನಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಅಕ್ಕಿಯ ಬೆಲೆಗಳು ತಮ್ಮ ಬೆಳೆಗಳಿಗೆ ಕುತ್ತು ತರುತ್ತಿವೆ ಎಂದು ಯುಎಸ್ ರೈತರು ಅಳಲು ತೋಡಿಕೊಂಡಿದ್ದಾರೆ. ಅಕ್ಕಿ ಬೆಲೆಗಳು ಕುಸಿಯುತ್ತಿರುವುದನ್ನು ಒತ್ತಿ ಹೇಳಿದ್ದಾರೆ. ಈ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಗಟ್ಟಿಯಾಗಿ ಪ್ರತಿಕ್ರಿಯಿಸಿದ ಟ್ರಂಪ್, ಅಲ್ಲಿಂದ ತಂದು ಇಲ್ಲಿ ಹಾಕೋದು ಬೇಡ. ಹೀಗೆ ಮಾಡುತ್ತಿರುವ ರಾಷ್ಟ್ರಗಳು ಯಾವುವು ಎಂಬುದರ ಪಟ್ಟಿ ನನಗೆ ಕಳುಹಿಸಿ ಕೂಡಲೇ ಎಂದಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ, ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದರು. ಈ ಕ್ರಮವು, ಭಾರತ ವ್ಯಾಪಾರ ಅಡೆತಡೆಗಳು ಮತ್ತು ಎಚ್ಚರಿಕೆ ನೀಡಿದ ಮೇಲೂ ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಹಾಕಿದ್ದರು. ಇದು ಟ್ರಂಪ್ ವಿರುದ್ಧ ಭಾರತ ಸಿಡಿಮಿಡಿಗೊಳ್ಳಲು ಕಾರಣವಾಯಿತು,(ಏಜೆನ್ಸೀಸ್).