ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ 
ದೇಶ

ಭಾರತಕ್ಕೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ; ಇಂದು ಪ್ರಧಾನಿ ಮೋದಿ ಭೇಟಿ | Marco Rubio

ನವದೆಹಲಿ: ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಪ್ತ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ(Marco Rubio) ತಮ್ಮ ನಾಲ್ಕು ದಿನಗಳ ಭಾರತ ಭೇಟಿಯ ಭಾಗವಾಗಿ ಇಂದು(ಮೇ 23) ಬೆಳಗ್ಗೆ ಕೋಲ್ಕತ್ತಾಗೆ ಆಗಮಿಸಿದ್ದು, ಸಂಜೆ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.
ರೂಬಿಯೋ ಕಳೆದ ವರ್ಷ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದಾರೆ. ಇಂದು ಪ್ರಧಾನಿಯಾಗಿ ಚರ್ಚೆ ನಡೆಸಿದ್ರೆ, ನಾಳೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಮಂಗಳವಾರ ದೆಹಲಿಯಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಆಗ್ರಾ ಮತ್ತು ಜೈಪುರಕ್ಕೂ ಭೇಟಿ ನೀಡುವ ನಿರೀಕ್ಷೆಯಿದೆ.
ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಶುಕ್ರವಾರ(ಮೇ 22) ಮಾತನಾಡಿದ್ದ ರೂಬಿಯೋ, ಭಾರತದೊಂದಿಗೆ ಕೆಲಸ ಮಾಡಲು ಬಹಳಷ್ಟಿದೆ, ಅವರು ಉತ್ತಮ ಮಿತ್ರ ಮತ್ತು ಪಾಲುದಾರ. ನಾವು ಅವರೊಂದಿಗೆ ಬಹಳಷ್ಟು ಉತ್ತಮ ಕೆಲಸ ಮಾಡುತ್ತೇವೆ, ಆದ್ದರಿಂದ ಇದು ಒಂದು ಪ್ರಮುಖ ಪ್ರವಾಸವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ-ಇರಾನ್ ಯುದ್ಧ ಮತ್ತು ಇಂಧನ ಪೂರೈಕೆ ಸೇರಿದಂತೆ ಅದರ ಆರ್ಥಿಕ ಪರಿಣಾಮ ಮತ್ತು ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕಗಳಿಂದ ಉಂಟಾದ ಇತ್ತೀಚಿನ ಉದ್ವಿಗ್ನತೆಯ ಕುರಿತು ಎರಡೂ ಕಡೆಯವರು ಮಾತುಕತೆ ನಡೆಸುವ ನಿರೀಕ್ಷೆಯಿದೆ (ಏಜೆನ್ಸೀಸ್).