ಅಮರಾವತಿ: ಬುಲ್ಧಾನ ಜಿಲ್ಲೆಯ ಶೆಗಾಂವ್‌ನಿಂದ ವಾರ್ಧಾಗೆ ದುರ್ಗಾ ದೇವಿಯ ಮೂರ್ತಿಯೊಂದಿಗೆ ತೆರಳುತ್ತಿದ್ದ ಭಕ್ತರ ಪಿಕಪ್ ವ್ಯಾನ್‌ಗೆ, ಟ್ರಕ್ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಏಳು ಮಂದಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಈ ಅಪಘಾತದಲ್ಲಿ ಒಟ್ಟು 21 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.
ಅಮರಾವತಿ ಜಿಲ್ಲೆಯ ಧಮಂಗಾಂವ್ ರೈಲ್ವೆ ನಿಲ್ದಾಣದ ಸಮೀಪವಿರುವ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯ ಚಾನೆಲ್ ಬಳಿ ಶುಕ್ರವಾರ (ಅ.2) ಬೆಳಿಗ್ಗೆ ಈ ಅಪಘಾತ ನಡೆದಿದೆ. ಶೆಗಾಂವ್‌ನಿಂದ ದುರ್ಗಾ ದೇವಿಯ ಮೂರ್ತಿಯೊಂದಿಗೆ ವಾರ್ಧಾ ಕಡೆಗೆ ಭಕ್ತರು ಪಿಕಪ್ ವಾಹನದಲ್ಲಿ ಸಾಗುತ್ತಿದ್ದರು.
ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್ ಏಕಾಏಕಿ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಐವರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಈ ದುರ್ಘಟನೆಯಲ್ಲಿ ಒಟ್ಟು 21 ಮಂದಿ ಗಾಯಗೊಂಡಿದ್ದು, ಇವರಲ್ಲಿ ಬಹುತೇಕರಿಗೆ ಚಿಕ್ಕ-ಪುಟ್ಟ ಗಾಯವಾಗಿದ್ದು ಇವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಗಾಯಗೊಂಡವರ ಪೈಕಿ ನಾಲ್ಕರಿಂದ ಐದು ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಧಮಂಗಾಂವ್ ರೈಲ್ವೆ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಪತ್ರಕರ್ತರು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿ, ಗಾಯಾಳುಗಳನ್ನು ತಕ್ಷಣವೇ ಧಮಂಗಾಂವ್ ಗ್ರಾಮೀಣ ಆಸ್ಪತ್ರೆಗೆ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಘಟನೆಯ ಗಂಭೀರತೆಯನ್ನು ಅರಿತು ಅಮರಾವತಿ ಗ್ರಾಮೀಣ ಎಸ್‌ಪಿ ನಿಕೇತನ್ ಕದಮ್ ಹಾಗೂ ಧಮಂಗಾಂವ್ ಪುರಸಭೆ ಅಧ್ಯಕ್ಷೆ ಅರ್ಚನಾ ರೋಥೆ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು ಹಾಗೂ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.
ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಇಂತಹ ಮಾರಣಾಂತಿಕ ಅಪಘಾತಗಳು ಪ್ರಯಾಣಿಕರಲ್ಲಿ ಆತಂಕ ಮೂಡಿಸಿವೆ. ಟ್ರಕ್ ಚಾಲಕನ ನಿರ್ಲಕ್ಷ್ಯ ಅಥವಾ ಅತಿ ವೇಗವೇ ಈ ದುರಂತಕ್ಕೆ ಕಾರಣ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ, (ಏಜೆನ್ಸೀಸ್).