ಗಾಯಬ್ ಎಂದು ಟ್ರೋಲ್ ಮಾಡಿದ ಬೆನ್ನಲ್ಲೇ ಸಿಜೆಪಿ ಪ್ರತಿಭಟನೆ ಬಗ್ಗೆ ಕೊನೆಗೂ ಮೌನ ಮುರಿದ ಆರ್. ಮಾಧವನ್! R Madhavan
- ನೀಟ್ ಅಕ್ರಮ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವಿದ್ಯಾರ್ಥಿಗಳ ಹೋರಾಟಕ್ಕೆ ನಟ ಆರ್ ಮಾಧವನ್ ಬಹಿರಂಗ ಬೆಂಬಲ
- ಎಫ್‌ಟಿಐಐ ಕಚೇರಿಯಲ್ಲೇ ಮೀಮ್ಸ್ ಪೋಸ್ಟರ್ ವೈರಲ್ ಮೌನ ಮುರಿದು ವಿದ್ಯಾರ್ಥಿಗಳ ಪರ ನಿಂತ ನಟ ಮಾಧವನ್
- ಪ್ರಶ್ನೆಪತ್ರಿಕೆ ಸೋರಿಕೆ ದೇಶದ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಮಾಧವನ್ ಆಗ್ರಹ
- ಸಲ್ಮಾನ್ ಖಾನ್ ಬೆನ್ನಲ್ಲೇ ನೀಟ್ ಅಕ್ರಮದ ವಿರುದ್ಧ ಧ್ವನಿ ಎತ್ತಿದ ಮಾಧವನ್ ಹೋರಾಟ ಹೈಜಾಕ್ ಆಗದಂತೆ ಎಚ್ಚರಿಕೆ
ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದಲ್ಲಿ ನಡೆಯುತ್ತಿರುವ ದೇಶವ್ಯಾಪಿ ವಿದ್ಯಾರ್ಥಿ ದಂಗೆಗೆ ಬಾಲಿವುಡ್‌ನ ದಿಗ್ಗಜರ ಬೆಂಬಲ ಮುಂದುವರಿದಿದೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬೆನ್ನಲ್ಲೇ, ಇದೀಗ ಖ್ಯಾತ ನಟ ಹಾಗೂ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಅಧ್ಯಕ್ಷ ಆರ್. ಮಾಧವನ್ ( R Madhavan ) ಕೂಡ ಹೋರಾಟಗಾರರ ಪರವಾಗಿ ಬಹಿರಂಗ ಧ್ವನಿ ಎತ್ತಿದ್ದಾರೆ. ನಮ್ಮ ದೇಶದ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಶೈಕ್ಷಣಿಕ ವ್ಯವಸ್ಥೆಯ ಲೋಪಗಳಿಗೆ ತಕ್ಷಣವೇ ಹೊಣೆಗಾರಿಕೆ ನಿಗದಿಯಾಗಬೇಕು ಎಂದು ಆಗ್ರಹಿಸಿರುವ ಮಾಧವನ್, ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಆರ್. ಮಾಧವನ್ ಅವರ ಎಫ್‌ಟಿಐಐ ಕಚೇರಿ ಬಾಗಿಲಿಗೆ 'ಗಾಯಬ್'ಮೀಮ್ಸ್ ಹಾಗೂ “ನೀಟ್ ಫಾರ್ ಸೇಲ್” ಪೋಸ್ಟರ್‌ಗಳನ್ನು ಅಂಟಿಸಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಮಾಧವನ್ ಈ ವಿಷಯವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆಯ ಕುರಿತು ಅವರ ಮೌನವನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಾಧವನ್ ತಮ್ಮ ಪ್ರಕಟಣೆಯ ಮೂಲಕವೇ ಸ್ಪಂದಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಧವನ್, ಭಾರತದ ಯುವಜನತೆಯ ಸಾಮರ್ಥ್ಯವನ್ನು ಸದಾ ನಂಬುವ ವ್ಯಕ್ತಿಯಾಗಿ, ಇಂದು ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪಾಲಕರು ಎದುರಿಸುತ್ತಿರುವ ಆತಂಕ ಮತ್ತು ಅಸಮಾಧಾನವನ್ನು ನಾನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುತ್ತೇನೆ. ಪ್ರತಿಯೊಂದು ಶೈಕ್ಷಣಿಕ ವ್ಯವಸ್ಥೆಯು ಯುವಜನತೆಯಲ್ಲಿ ಆತ್ಮವಿಶ್ವಾಸ, ನ್ಯಾಯಸಮ್ಮತತೆ ಮತ್ತು ಸಮಾನ ಅವಕಾಶಗಳನ್ನು ಮೂಡಿಸಬೇಕು, ಆದರೆ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ಆ ನಂಬಿಕೆಯನ್ನೇ ಬುಡಮೇಲು ಮಾಡುತ್ತವೆ. ಭಾರತದಂತಹ ದೇಶದಲ್ಲಿ ಶಿಕ್ಷಣವು ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಇಂತಹ ಘಟನೆಗಳು ಯುವಜನತೆಯ ಕನಸುಗಳು ಮತ್ತು ಪರಿಶ್ರಮದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಮಾಧವನ್, ಈ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ತಪ್ಪಿತಸ್ಥನಿಗೂ ಸರ್ಕಾರವು ತಕ್ಷಣವೇ ಮತ್ತು ಕಠಿಣವಾಗಿ ಶಿಕ್ಷೆ ವಿಧಿಸಬೇಕು. ಈ ಶಿಕ್ಷೆಯ ಪರಿಣಾಮ ಎಷ್ಟರಮಟ್ಟಿಗೆ ಇರಬೇಕೆಂದರೆ, ಭವಿಷ್ಯದಲ್ಲಿ ಇನ್ಯಾರೂ ಸಹ ನಮ್ಮ ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಧೈರ್ಯ ಮಾಡಬಾರದು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದೇ ವೇಳೆ ವ್ಯವಸ್ಥೆಯ ಸುಧಾರಣೆಯ ಕುರಿತು ಆಶಾವಾದ ವ್ಯಕ್ತಪಡಿಸಿದ ಮಾಧವನ್, ಈ ಹಿಂದೆ ನಡೆದಿರುವ ಲೋಪದೋಷಗಳನ್ನು ಒಪ್ಪಿಕೊಂಡಿರುವ ನಮ್ಮ ಸರ್ಕಾರವು, ತಕ್ಷಣವೇ ಸೂಕ್ತ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುತ್ತದೆ. ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸಿ, ಮುಂಬರುವ ಪೀಳಿಗೆಗೆ ಶಿಕ್ಷಣದ ಪವಿತ್ರತೆಯನ್ನು ಕಾಯ್ದುಕೊಳ್ಳುತ್ತದೆ ಎಂಬ ನಂಬಿಕೆ ನನಗಿದೆ ಎಂದು ಮಾಧವನ್ ಹೇಳಿದ್ದಾರೆ.
ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಪ್ರತಿಭೆ, ಸತತ ಪ್ರಯತ್ನ ಹಾಗೂ ಚಾರಿತ್ರ್ಯವು ಈ ವ್ಯವಸ್ಥೆಯ ಯಾವುದೇ ಕುಂದುಕೊರತೆಗಳಿಗಿಂತ ಅತ್ಯಂತ ದೊಡ್ಡದು. ಯಾವುದೇ ತಾತ್ಕಾಲಿಕ ಹಿನ್ನಡೆಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಬೇಡಿ, ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದೆ ನಿರಂತರವಾಗಿ ಶ್ರಮಿಸಿ, ಸಂಯಮದಿಂದ ಪಾರದರ್ಶಕತೆಗಾಗಿ ಆಗ್ರಹಿಸುತ್ತಿರುವವರ ಹೋರಾಟದ ಮನೋಭಾವಕ್ಕೆ ನನ್ನ ಮೆಚ್ಚುಗೆಯಿದೆ. ಆದರೆ, ನಿಮ್ಮ ಈ ನ್ಯಾಯಯುತ ಹೋರಾಟದ ಹಾದಿಯನ್ನು ತಪ್ಪಿಸಿ, ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯತ್ನಿಸುವ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಮಾಧವನ್ ಎಚ್ಚರಿಸಿದ್ದಾರೆ.
ಇದಕ್ಕೂ ಮೊದಲು ಸಲ್ಮಾನ್ ಖಾನ್ ಸಹ ಪತ್ರಿಕೆ ಸೋರಿಕೆಯನ್ನು ಗಂಭೀರ ವಿಷಯವೆಂದು ಕರೆದು ರಾಜಕೀಯ ದುರ್ಬಳಕೆಯಾಗದಂತೆ ಎಚ್ಚರಿಸಿದ್ದರು. ಪ್ರಸ್ತುತ ನಸೀರುದ್ದೀನ್ ಶಾ, ರತ್ನ ಪಾಠಕ್ ಶಾ, ಅಭಯ್ ಡಿಯೋಲ್, ಸೊನಾಕ್ಷಿ ಸಿನ್ಹಾ ಹಾಗೂ ರಿತೇಶ್ ದೇಶ್‌ಮುಖ್ ಕೂಡ ಈ ವಿದ್ಯಾರ್ಥಿ ಚಳವಳಿಗೆ ಬಹಿರಂಗ ಬೆಂಬಲ ಸೂಚಿಸಿದ್ದಾರೆ, (ಏಜೆನ್ಸೀಸ್).