Sukhendu Sekhar Roy > ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್.
Sukhendu Sekhar Roy: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ (TMC) ಸೋಲಿನ ಬೆನ್ನಲ್ಲೇ, ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದ್ದು, ಇದುವರೆಗೆ ದೀದಿಯ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ವೈಫಲ್ಯಗಳ ವಿರುದ್ಧ ಮೌನವಾಗಿದ್ದ ಆಪ್ತ ನಾಯಕರೇ ಈಗ ಟೀಕಾಕಾರರಾಗಿ ಮಾರ್ಪಟ್ಟಿದ್ದಾರೆ.
ಅದರಲ್ಲೂ ಕೋಲ್ಕತ್ತಾದ ಆರ್‌ಜಿ ಕರ್ (RG Kar) ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸರ್ಕಾರ ನಿರ್ವಹಿಸಿದ ರೀತಿ ಹಾಗೂ ಮಹಿಳೆಯರು ಬೀದಿಗಿಳಿದು ನಡೆಸಿದ ಪ್ರತಿಭಟನೆಯೇ ಪಕ್ಷದ ಪತನಕ್ಕೆ ಪ್ರಮುಖ ಕಾರಣ ಎಂಬ ಧ್ವನಿ ಜೋರಾಗಿದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವುದು ತೃಣಮೂಲ ಕಾಂಗ್ರೆಸ್‌ನ ಹಿರಿಯ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್.
ಎನ್ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸುಖೇಂದು ಶೇಖರ್ ರಾಯ್, ಟಿಎಂಸಿಯ ಹಿರಿಯ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ಕಥೆ ಮುಗಿಯಲಿದೆ. ರಾಷ್ಟ್ರೀಯ ರಾಜಕಾರಣದಲ್ಲೂ ಪಕ್ಷ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದು, ಇನ್ನು ಮುಂದೆ ಯಾವುದೇ ಪಕ್ಷವು ಟಿಎಂಸಿ ಜೊತೆ ಕೈಜೋಡಿಸಲು ಮುಂದೆ ಬರುವುದಿಲ್ಲ ಎಂದು ರಾಯ್ ಭವಿಷ್ಯ ನುಡಿದಿದ್ದಾರೆ.
ಆರ್‌ಜಿ ಕರ್ ಆಸ್ಪತ್ರೆಯ ಘಟನೆಯ ಕುರಿತು ಮಾತನಾಡಿದ ರಾಯ್, ಆರ್‌ಜಿ ಕರ್ ಪ್ರಕರಣವನ್ನು ಸರ್ಕಾರ ಮತ್ತು ಪಕ್ಷ ನಿರ್ವಹಿಸಿದ ರೀತಿ ತೀರಾ ತಪ್ಪು. ಅಪರಾಧಿಗಳನ್ನು ರಕ್ಷಿಸಲು ಅಲ್ಲಿ ಸ್ಪಷ್ಟ ಪ್ರಯತ್ನ ನಡೆದಿತ್ತು ಮತ್ತು ಅದಕ್ಕಾಗಿ ಪೊಲೀಸರನ್ನು ಬಳಸಿಕೊಳ್ಳಲಾಯಿತು. ಈ ಪ್ರತಿಭಟನೆಗಳೇ ಜನರ ಭಾವನೆಗಳು ಪಕ್ಷದ ವಿರುದ್ಧ ಇವೆ ಎಂಬುದಕ್ಕೆ ನನಗೆ ಸಿಕ್ಕ ಮೊದಲ ಮುನ್ಸೂಚನೆಯಾಗಿತ್ತು. ಆದರೆ ಪಕ್ಷ ಅದನ್ನು ಅರ್ಥಮಾಡಿಕೊಳ್ಳಲು ವಿಫಲವಾಯಿತು. ಇದರ ಜೊತೆಗೆ ಪಕ್ಷದ ನಾಯಕರು ಸೃಷ್ಟಿಸಿರುವ ಭ್ರಷ್ಟಾಚಾರದ ಪರ್ವತ ಊಹಿಸಲೂ ಅಸಾಧ್ಯವಾದದ್ದು, ಅದನ್ನು ನಿಯಂತ್ರಿಸುವಲ್ಲಿ ಮಮತಾ ಬ್ಯಾನರ್ಜಿ ಸಂಪೂರ್ಣ ಸೋತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಮತಾ ಬ್ಯಾನರ್ಜಿ ಹಿಂದೂ ಧರ್ಮದ ಕುರಿತು ನೀಡಿದ ಕೆಲವು ಹೇಳಿಕೆಗಳು ಜನರ ಮನಸ್ಸಿಗೆ ನೋವುಂಟು ಮಾಡಿದ್ದು, ಈ ಸೋಲು ಅನಿವಾರ್ಯವಾಗಿತ್ತು. ಇದಕ್ಕೆ ತಳಮಟ್ಟದಿಂದ ಉನ್ನತ ಮಟ್ಟದವರೆಗಿನ ಪ್ರತಿಯೊಬ್ಬ ನಾಯಕನೂ ಹೊಣೆ ಹೊರಬೇಕು ಎಂದು ಅವರು ತಿಳಿಸಿದ್ದಾರೆ.
ಟಿಎಂಸಿ ಹಿನ್ನಡೆಗೆ ಕಾರಣವಾಯ್ತಾ ಐ-ಪ್ಯಾಕ್...?
ಪಕ್ಷದ ಈ ದುರ್ಗತಿಗೆ ಚುನಾವಣಾ ಕಾರ್ಯತಂತ್ರ ರೂಪಿಸುವ ಐ-ಪ್ಯಾಕ್ ಸಂಸ್ಥೆಯೇ ಕಾರಣ ಎಂದು ಹಿರಿಯ ನಾಯಕರು ನೇರ ಆರೋಪ ಮಾಡುತ್ತಿದ್ದು, ದೀದಿ ಅಳಿಯ ಅಭಿಷೇಕ್ ಬ್ಯಾನರ್ಜಿ 2018 ರಲ್ಲಿ ಈ ಸಂಸ್ಥೆಯನ್ನು ನೇಮಿಸಿಕೊಂಡಾಗ ಹಿರಿಯ ನಾಯಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ 2021 ರ ಭರ್ಜರಿ ಗೆಲುವು ಟೀಕಾಕಾರರ ಬಾಯಿ ಮುಚ್ಚಿಸಿತ್ತು. ಮತ್ತೆ ಈಗ ಚುನಾವಣೆ ಸೋತ ಬಳಿಕ ಟೀಕೆಗಳು ಜೋರಾಗಿದ್ದು, ಪಕ್ಷವನ್ನು ಧ್ವಂಸಗೊಳಿಸಲು ಐ-ಪ್ಯಾಕ್‌ಗೆ ಕೆಂಪು ಹಾಸಿನ ಸ್ವಾಗತ ನೀಡಲಾಗಿತ್ತು. ಆ ಸಂಸ್ಥೆಯು ಪಕ್ಷದ ಹುದ್ದೆಗಳನ್ನು ಹಣಕ್ಕೆ ಮಾರಾಟ ಮಾಡಿದ್ದು, ಮಮತಾ ಬ್ಯಾನರ್ಜಿ ಸಾಮಾನ್ಯ ನಾಯಕರಿಗೆ ಸಿಗದಂತಾದರು ಎಂದು ರಾಯ್ ಆರೋಪಿಸಿದ್ದಾರೆ(ಏಜೆನ್ಸೀಸ್).