Trinamool suspends MLA Humayun Kabir
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಿಸುವುದಾಗಿ ಪ್ರತಿಜ್ಞೆ ಮಾಡಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಹುಮಾಯೂನ್ ಕಬೀರ್ರನ್ನು ಟಿಎಂಸಿ ಗುರುವಾರ (ಡಿ.4) ಉಚ್ಚಾಟಿಸಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡದಂತೆ ಕಬೀರ್ಗೆ ಎಚ್ಚರಿಕೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮೂಲ ಮಸೀದಿಯನ್ನು ಕೆಡವಲಾದ ಡಿಸೆಂಬರ್ 6 ರಂದು ಮುರ್ಷಿದಾಬಾದ್‌ನ ಬೆಲ್ದಂಗಾದಲ್ಲಿ ಬಾಬರಿ ಮಸೀದಿಯ ತರಹದ ಕಟ್ಟಡಕ್ಕೆ ಶಿಲನ್ಯಾಸ ಮಾಡುವುದಾಗಿ ಕಬೀರ್ ಹೇಳಿಕೆ ನೀಡಿದ್ದರು ಮತ್ತು ಈ ಮಸೀದಿ ಪೂರ್ಣಗೊಳ್ಳಲು ಮೂರು ತಿಂಗಳು ತೆಗೆದುಕೊಳ್ಳಬಹುದು ಎಂದಿದ್ದರು.
ಇದೇ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್, ಮುರ್ಷಿದಾಬಾದ್‌ನ ನಮ್ಮ ಶಾಸಕರೊಬ್ಬರು ಬಾಬರಿ ಮಸೀದಿ ನಿರ್ಮಿಸುವುದಾಗಿ ಘೋಷಿಸಿದ್ದನ್ನು ನಾವು ಗಮನಿಸಿದ್ದೇವೆ. ಇದ್ದಕ್ಕಿದ್ದಂತೆ ಬಾಬರಿ ಮಸೀದಿ ಏಕೆ? ನಾವು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಪಕ್ಷದ ನಿರ್ಧಾರದಂತೆ ಶಾಸಕ ಹುಮಾಯೂನ್ ಕಬೀರ್ರನ್ನು ಅಮಾನತುಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಹುಮಾಯೂನ್ ಕಬೀರ್ ಪ್ರತಿಕ್ರಿಯೆ...
ಟಿಎಂಸಿಯಿಂದ ಅಮಾನತುಗೊಂಡ ಬಳಿಕ ತಮ್ಮ ಮೊದಲ ಪ್ರತಿಕ್ರಿಯೆ ನೀಡಿರುವ ಶಾಸಕ ಕಬೀರ್, ಮುಂದಿನ ತಿಂಗಳು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದರು. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತೇನೆ ಎಂದರು. ನಾಳೆ ಟಿಎಂಸಿಗೆ ರಾಜೀನಾಮೆ ನೀಡುತ್ತೇನೆ ಎಂದಿರುವ ಕಬೀರ್, ಡಿಸೆಂಬರ್ 22 ರಂದು ಹೊಸ ಪಕ್ಷ ಸ್ಥಾಪಿಸುವ ಕುರಿತು ಮಾಹಿತಿ ನೀಡಿದರು.
ಕಬೀರ್ ನೀಡಿರುವ ಹೇಳಿಕೆ 2026 ರ ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಟಿಎಂಸಿ ಮೇಲೆ ವಾಗ್ದಾಳಿ ನಡೆಸಲು ಪ್ರತಿಪಕ್ಷ ಬಿಜೆಪಿಗೆ ವರದಾನವಾಗಿದ್ದು, ತೃಣಮೂಲ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿತು. ಟಿಎಂಸಿ ಬಾಂಗ್ಲಾದೇಶಿ ನುಸುಳುಕೋರರನ್ನು ಬೆಂಬಲಿಸುತ್ತಿದೆ ಎಂದು ಕೇಸರಿ ಪಾಳಯ ಆರೋಪಿಸಿದ್ದು. ಕಬೀರ್ ಹೇಳಿಕೆ ಆಡಳಿತಪಕ್ಷ ಮತ್ತು ಮಮತಾ ಬ್ಯಾನರ್ಜಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇರುವುದರಿಂದಲೇ ಅವರನ್ನು ಪಕ್ಷದಿಂದ ಹೊರ ಹಾಕಿದೆ.
ಎಚ್ಚರಿಕೆ ನೀಡಿದ್ದ ರಾಜ್ಯಪಾಲರು...
ಹುಮಾಯೂನ್ ಕಬೀರ್ ಹೇಳಿಕೆಗಳು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ, ಆದರೂ ಕೂಡ ಸರ್ಕಾರ ಶಾಸಕರನ್ನು ಏಕೆ ಬಂಧಿಸುತ್ತಿಲ್ಲ ಎಂದು ಬಂಗಾಳ ರಾಜ್ಯಪಾಲ ಆನಂದ ಬೋಸ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಕ್ಷೇತ್ರ, ಗುಪ್ತಚರ ಸಂಸ್ಥೆಗಳು ಮತ್ತು ಸ್ಥಳೀಯ ನಾಯಕರಿಂದ ನನಗೆ ಬಂದಿರುವ ವರದಿಗಳು, ಮುರ್ಷಿದಾಬಾದ್ನ್ನು ಯಾರೋ ಉದ್ದೇಶಪೂರ್ವಕವಾಗಿ ಹಗರಣದ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದರು. ಇದು ಕೇವಲ ಪೂಜಾ ಸ್ಥಳ ನಿರ್ಮಾಣದ ವಿಷಯವಲ್ಲ ಎಂದಿರುವ ರಾಜ್ಯಪಾಲರು, ಕೋಮು ಭಾವನೆಗಳನ್ನು ಕೆರಳಿಸಿದರೆ, ಕಬೀರ್ರನ್ನು ಮುಂಚಿತವಾಗಿ ಬಂಧಿಸಬೇಕಾಗುತ್ತದೆ. ಸರ್ಕಾರ ಕ್ರಮಕ್ಕೆ ಮುಂದಾಗದಿದ್ದರೆ, ರಾಜ್ಯಪಾಲರಾಗಿ ನಾನೇ ನನ್ನ ಅಧಿಕಾರ ಚಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು(ಏಜೆನ್ಸೀಸ್).