MOTN Survey | ಇಂಡಿಯಾ ಟುಡೇ–ಸಿವೋಟರ್ ಮೂಡ್ ಆಫ್ ದಿ ನೇಷನ್ 
ದೇಶ

ಬಂಗಾಳಕ್ಕೆ ದೀದಿನೇ ಸುಪ್ರಿಂ..? ರಾಜ್ಯದ ಜನರ ನಾಡಿಮಿಡಿತ ಬಿಚ್ಚಿಟ್ಟ ಮೂಡ್ ಆಫ್ ದಿ ನೇಷನ್..ವೋಟ್ ಶೇರ್ ಹೆಚ್ಚಿಸಿಕೊಂಡ ಕೇಸರಿ ಪಡೆ | MOTN Survey

ಕೊಲ್ಕತ್ತಾ: ರಾಷ್ಟ್ರದ ರಾಜಕಾರಣದಲ್ಲಿ ಪಶ್ಚಿಮ ಬಂಗಾಳ ಸದಾ ಒಂದು ಕುತೂಹಲದ ಕೇಂದ್ರಬಿಂದು. ಮುಂಬರುವ ಎರಡ್ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈಗ ಹೊರಬಿದ್ದಿರುವ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಬಂಗಾಳದ ನಾಡಿಮಿಡಿತವನ್ನು ಬಿಚ್ಚಿಟ್ಟಿದೆ.
ಇಂಡಿಯಾ ಟುಡೇ–ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ, ತೃಣಮೂಲ ಕಾಂಗ್ರೆಸ್ 2024 ರ ಸಾಧನೆಯನ್ನು ಪುನರಾವರ್ತಿಸುವ ಮತ್ತು ತಾನು ಗೆದ್ದ ಬಹುತೇಕ ಎಲ್ಲಾ ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ, ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ 2019 ರ ತನ್ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿತು, ಬಿಜೆಪಿ 12 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು.
2026 ರ ಸಮೀಕ್ಷೆಯಲ್ಲಿ, ತೃಣಮೂಲ ಕಾಂಗ್ರೆಸ್‌ನ ಸ್ಥಾನಗಳು 28 ಸ್ಥಾನಗಳಿಗೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆ ಇದ್ದು, ಬಿಜೆಪಿ 14 ಸ್ಥಾನ ಪಡೆಯುವ ಸಾಧ್ಯತೆ ಇದೆ. ಕಳೆದ ಆಗಸ್ಟ್ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ 11 ಸ್ಥಾನಕ್ಕಿಳಿಯಬಹುದು ಎನ್ನಲಾಗಿತ್ತು. ಇದಕ್ಕೆ ವ್ಯತಿರಿಕ್ತ ಎಂಬಂತೆ ಟಿಎಂಸಿ ತನ್ನ ಸ್ಥಾನಗಳನ್ನು 31 ಕ್ಕೆ ಹೆಚ್ಚಿಸಿಕೊಳ್ಳಲಿದೆ ಎಂದು ಅಂದಾಜಿಸಿತ್ತು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ ಎರಡು ತಿಂಗಳು ಬಾಕಿ ಇರುವಾಗ ಈ ಸಮೀಕ್ಷೆ ಹೊರಬಿದ್ದಿದ್ದು, ಚುನಾವಣೆ ನಡೆಯಲಿರುವ ರಾಜ್ಯದ ಮತದಾರರ ಪ್ರಸ್ತುತ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಇದು ಸೂಚಕವಾಗಿದೆ. 2026 ರ ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್​ಡಿಎ ತನ್ನ ಮತ ಹಂಚಿಕೆಯಲ್ಲಿ ಶೇಕಡಾ ಮೂರು ಪಾಯಿಂಟ್ ಏರಿಕೆಯನ್ನು ದಾಖಲಿಸುವ ನಿರೀಕ್ಷೆಯಿದೆ, ( ಕಳೆದ ಬಾರಿಯ ಮತಪ್ರಮಾಣ 39).
ಚುನಾವಣೆ ಹೊಸ್ತಿಲಲ್ಲಿ ಮತದಾರರ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಈ ಸಮೀಕ್ಷೆ ಪೂರಕವಾಗಲಿದೆ ಎನ್ನಲಾಗಿದ್ದು, ಆದರೂ ಕೂಡ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಮನಾರ್ಹ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಮತ್ತು ಪ್ರಾದೇಶಿಕ ಪಕ್ಷದ ಪ್ರಸ್ತುತತೆ ಮುಂದುವರೆಯುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ.
ದೇಶವ್ಯಾಪಿ ನಡೆದ ಈ ಸಮೀಕ್ಷೆಯಲ್ಲಿ ಕಳೆದ ಎಂಟು ವಾರಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎನ್ನಲಾಗಿದೆ. 2023 ರ ಆಗಸ್ಟ್ ಸಮೀಕ್ಷೆಯ ಫಲಿತಾಂಶಗಳು ತೃಣಮೂಲ ಕಾಂಗ್ರೆಸ್‌ಗೆ 32, ಬಿಜೆಪಿಗೆ ಎಂಟು ಮತ್ತು ಕಾಂಗ್ರೆಸ್‌ಗೆ ಎರಡು ಸ್ಥಾನಗಳನ್ನು ಲಭ್ಯವಾಗುತ್ತವೆ ಎಂದರೆ, ಇತ್ತ 2024 ರ ಫೆಬ್ರವರಿ ಸಮೀಕ್ಷೆ ಟಿಎಂಸಿ ಮತ್ತು ಬಿಜೆಪಿ ಕ್ರಮವಾಗಿ 22 ಮತ್ತು 19 ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಭವಿಷ್ಯ ನುಡಿದಿದ್ದವು.
ಈ ಸಮೀಕ್ಷೆಯ ಅಂಕಿ-ಅಂಶಗಳನ್ನು ಪ್ರಕಾರ ಬಂಗಾಳದಲ್ಲಿ ಸದ್ಯಕ್ಕೆ ದೀದಿಯೇ ಬಾಸ್ ಆಗಿದ್ದು, ಆದರೆ ಆಡಳಿತರೂಢ ಟಿಎಂಸಿಗೆ ಶಾಕ್​ ನೀಡುವ ವಿಷಯವೂ ಸಹ ಇದರಲ್ಲಿ ಅಡಗಿದ್ದು, ಪ್ರತಿಪಕ್ಷ ಬಿಜೆಪಿ ಸದ್ದಿಲ್ಲದೆ ತನ್ನ ಮತ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದೆ, ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೋಚಕ ಹಣಾಹಣಿಗೆ ಸಾಕ್ಷಿಯಾಗುವುದರಲ್ಲಿ ಸಂಶಯವಿಲ್ಲ (ಏಜೆನ್ಸೀಸ್​).