West Bengal Bypolls | ದೀದಿ ಆಫರ್ ರಿಜೆಕ್ಟ್ ಮಾಡಿ ಏಕಾಂಗಿ ಸ್ಪರ್ಧೆಗೆ ಮುಂದಾದ ಕಾಂಗ್ರೆಸ್!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಂಬರುವ ಉಪಚುನಾವಣೆಗೆ (West Bengal Bypolls) ಸಂಬಂಧಿಸಿದಂತೆ ಮೈತ್ರಿ ಮಾಡಿಕೊಳ್ಳಲು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸಿದ ತಂತ್ರ ಕೈಕೊಟ್ಟಿದ್ದು, ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸುವ ಮೂಲಕ ಟಿಎಂಸಿ ಜೊತೆಗಿನ ಮೈತ್ರಿಯಿಂದ ಹೊರಬಂದಿದೆ ಎಂದು ವರದಿಯಾಗಿದೆ.
ಉಭಯ ಪಕ್ಷಗಳಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲವಾದರೂ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮೈತ್ರಿ ಪ್ರಸ್ತಾಪದೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರಿಗೆ ಕರೆ ಮಾಡಿದ್ದರು. ಆದರೆ, ಅವರಿಂದ ಯಾವುದೇ ಸಕಾರಾತ್ಮಕ ಪ್ರತ್ಯುತ್ತರ ಬಂದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಎಲ್ಲರಿಗಿಂತ ಮೊದಲೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದೆ.
ಎನ್‌ಡಿಟಿವಿ ಜೊತೆ ಮಾತನಾಡಿದ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭಂಕರ್ ಸರ್ಕಾರ್, ಬಿಜಿಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಪಕ್ಷಗಳಿಗೆ ಕಾಂಗ್ರೆಸ್ ಬಾಗಿಲು ಮುಚ್ಚಿಲ್ಲ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ತೃಣಮೂಲ ಕಾಂಗ್ರೆಸ್ ಒಂದು ಹೊರೆಯಾಗಿ ಕಾಣುತ್ತಿದ್ದು, ಅದು ಮೈತ್ರಿಯನ್ನೇ ಬುಡಮೇಲು ಮಾಡುವ ಸಾಧ್ಯತೆಯಿದೆ ಎಂದು ಹೇಳಿದರು.
ಟಿಎಂಸಿ ಪಕ್ಷದ ಚಿಹ್ನೆಗಾಗಿ ಆಂತರಿಕ ಹೋರಾಟದಲ್ಲಿ ಸಿಲುಕಿಕೊಂಡಿದೆ. ಶಿವಸೇನೆಯ ಚಿಹ್ನೆ ವಿವಾದವನ್ನು ಗಮನಿಸಿದರೆ, ಚುನಾವಣಾ ಆಯೋಗವು ಬಿಜೆಪಿಯ ನಿರ್ದೇಶನದಂತೆಯೇ ನಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ತೃಣಮೂಲ ತನ್ನ ಚಿಹ್ನೆಯನ್ನು ಕಳೆದುಕೊಂಡರೆ, ಆ ವೇಗ ಕುಸಿದು ಕಾಂಗ್ರೆಸ್ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಅವರು ವಿವರಿಸಿದರು. ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ ನಂತರ, ಬಂಗಾಳ ಕಾಂಗ್ರೆಸ್ ಪಕ್ಷವು ತೃಣಮೂಲ ಕಾಂಗ್ರೆಸ್‌ನ ಕ್ಷಿಪ್ರ ವಿಕಸನ ಮತ್ತು ಆಂತರಿಕ ಕಲಹವನ್ನು ಹತ್ತಿರದಿಂದ ಗಮನಿಸಿದೆ.
ಋತವ್ರತ ಬ್ಯಾನರ್ಜಿ ನೇತೃತ್ವದಲ್ಲಿ ಬಿಜೆಪಿ ನೆರಳಿನಲ್ಲಿ ವಿಪಕ್ಷವನ್ನು ರಚನೆಯಾಗಿದ್ದು, ಮಮತಾ ಬ್ಯಾನರ್ಜಿಗೆ ಉಸಿರಾಡಲು ಆಮ್ಲಜನಕ ಬೇಕಾದರೆ, ಅವರಿಗೆ ಕಾಂಗ್ರೆಸ್ ಬೆಂಬಲ ಅಗತ್ಯವಿದೆ. ನಮ್ಮ ಬಾಗಿಲುಗಳು ತೆರೆದಿವೆ, ಆದರೆ ಅದು ಕಾಂಗ್ರೆಸ್‌ಗೆ ನೀಡುವ ಬೇಷರತ್ ಬೆಂಬಲವಾಗಿರಬೇಕು ಎಂದು ಸರ್ಕಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿರುವ ಮುರ್ಷಿದಾಬಾದ್‌ನ ರೆಜಿನಗರ ಕ್ಷೇತ್ರದ ಬದಲಿಗೆ, ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಪ್ರಸ್ತಾಪಿಸಿದ್ದರು ಎನ್ನಲಾಗಿದೆ.
ಆಡಳಿತಾರೂಢ ಬಿಜೆಪಿ ನಂದಿಗ್ರಾಮದಿಂದ ಹಸಿರಾಣಿ ರಥ್ ಅವರನ್ನು ಕಣಕ್ಕಿಳಿಸಿದೆ. ಇವರು ಇತ್ತೀಚೆಗೆ ಹತ್ಯೆಗೀಡಾದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕರಾಗಿದ್ದ ಚಂದ್ರನಾಥ್ ರಥ್ ಅವರ ತಾಯಿಯಾಗಿದ್ದಾರೆ. ಇನ್ನು ರೆಜಿನಗರ ಕ್ಷೇತ್ರಕ್ಕೆ ಸಖಾರವ್ ಸರ್ಕಾರ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದ್ದು, ಕೋಲ್ಕತ್ತಾದ ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಭವಾನಿಪುರವನ್ನು ಉಳಿಸಿಕೊಂಡು ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ತೆರವಾಗಿದೆ. ರೆಜಿನಗರ ಶಾಸಕ ಹುಮಾಯೂನ್ ಕಬೀರ್ ಅವರ ರಾಜೀನಾಮೆಯಿಂದ ಆ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್).