ಮೂಲೆ ಸೇರಿದ ತೃಣಮೂಲ! ಯಾರನ್ನೂ ಬಲವಂತವಾಗಿ ಹಿಡಿದಿಡಲ್ಲ ಎಂದ ದೀದಿ! ಬಂಗಾಳ ರಾಜಕಾರಣಕ್ಕೆ ಕಾದಿದೆಯೇ ಬಿಗ್ ಟ್ವಿಸ್ಟ್?  
ದೇಶ

ಮೂಲೆ ಸೇರಿದ ತೃಣಮೂಲ! ಯಾರನ್ನೂ ಬಲವಂತವಾಗಿ ಹಿಡಿದಿಡಲ್ಲ ಎಂದ ದೀದಿ! ಬಂಗಾಳ ರಾಜಕಾರಣಕ್ಕೆ ಕಾದಿದೆಯೇ ಬಿಗ್ ಟ್ವಿಸ್ಟ್? Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೀನಾಯವಾಗಿ ಸೋತಿರುವ ತೃಣಮೂಲ ಕಾಂಗ್ರೆಸ್ ಅನ್ನು ಮರುಸಂಘಟಿಸಲು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಮುಂದಾಗಿದ್ದಾರೆ. ಪಕ್ಷದ ಈ ಸೋಲಿಗೆ ನಂತರ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪರಾಜಿತ ಅಭ್ಯರ್ಥಿಗಳು ಮತ್ತು ಹಿರಿಯ ನಾಯಕರ ತುರ್ತು ಸಭೆ ನಡೆಸಿದ ದೀದಿ, ಪಕ್ಷ ತೊರೆದು ಹೋಗುವವರು ತಕ್ಷಣವೇ ಹೋಗಬಹುದು, ನಾನು ಯಾರನ್ನೂ ತಡೆಯುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಉನ್ನತ ಮಟ್ಟದ ಸಭೆಯಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ಉಪಸ್ಥಿತರಿದ್ದು, ಮುಂದಿನ ರಣತಂತ್ರದ ಬಗ್ಗೆ ಚರ್ಚಿಸಿದರು.

ನಾನೇ ಖುದ್ದಾಗಿ ಪಕ್ಷದ ಆಫೀಸ್‌ಗಳಿಗೆ ಪೇಂಟ್ ಮಾಡ್ತೀನಿ!

ಸಭೆಯಲ್ಲಿ ಭಾವುಕರಾಗಿ ಮತ್ತು ಅಷ್ಟೇ ಆಕ್ರಮಣಕಾರಿಯಾಗಿ ಮಾತನಾಡಿದ ಮಮತಾ ಬ್ಯಾನರ್ಜಿ, ಬೇರೆ ಪಕ್ಷಗಳಿಗೆ ಹೋಗಲು ಬಯಸುವವರು ಹೋಗಲಿ, ಅವರನ್ನು ಹೋಗಲು ಬಿಡಿ. ನಾನು ಪಕ್ಷವನ್ನು ಮೊದಲಿನಿಂದ ಹೊಸದಾಗಿ ಕಟ್ಟುತ್ತೇನೆ. ಪಕ್ಷದಲ್ಲೇ ಉಳಿಯುವವರಿಗೆ ನಾನು ಹೇಳುವುದಿಷ್ಟೇ, ಧ್ವಂಸವಾಗಿರುವ ನಮ್ಮ ಪಕ್ಷದ ಕಚೇರಿಗಳನ್ನು ಸರಿಪಡಿಸಿ, ಅವುಗಳಿಗೆ ಬಣ್ಣ ಬಳಿದು ಮತ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸಿ. ಅಗತ್ಯ ಬಿದ್ದರೆ ನಾನೇ ಖುದ್ದಾಗಿ ಬಂದು ಪೇಂಟ್ ಮಾಡುತ್ತೇನೆ. ತೃಣಮೂಲ ಕಾಂಗ್ರೆಸ್ ಎಂದಿಗೂ ಯಾರ ಮುಂದೆಯೂ ತಲೆಬಾಗುವುದಿಲ್ಲ. ಜನರ ಆದೇಶವನ್ನು ಲೂಟಿ ಮಾಡಲಾಗಿದೆ ಎಂದು ಆರೋಸಿದ್ದಾರೆ.

ಮಮತಾಗೆ ಮುಖಭಂಗ!

ಇತ್ತೀಚೆಗೆ ಪ್ರಕಟವಾದ ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳ ಪೈಕಿ ಟಿಎಂಸಿ ಕೇವಲ 80 ಸ್ಥಾನಗಳಲ್ಲಿ ಮಾತ್ರ ಜಯಗಳಿಸಲು ಶಕ್ತವಾಗಿದೆ. ಉಳಿದಂತೆ ಬಹುತೇಕ ಕಡೆಗಳಲ್ಲಿ ಹೀನಾಯ ಸೋಲು ಕಂಡಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಭವಾನಿಪುರ ಕ್ಷೇತ್ರದಲ್ಲೇ ಸ್ವತಃ ಮಮತಾ ಬ್ಯಾನರ್ಜಿ ಪರಾಭವಗೊಂಡಿದ್ದಾರೆ. ಪಕ್ಷದ 211 ಅಭ್ಯರ್ಥಿಗಳು ಸೋಲು ಕಂಡಿದ್ದು, ಅದರಲ್ಲಿ ಹಲವು ಪ್ರಭಾವಿ ಸಚಿವರು ಮತ್ತು ಹಿರಿಯ ನಾಯಕರು ಸೇರಿದ್ದಾರೆ.

ಪಕ್ಷಾಂತರದ ತಲ್ಲಣದಲ್ಲಿ ಟಿಎಂಸಿ

ಚುನಾವಣಾ ಫಲಿತಾಂಶ ಪ್ರಕಟವಾದ ಮೇ 4 ರಂದೇ ಮಮತಾ ಬ್ಯಾನರ್ಜಿ ಅವರಿಗೆ ಪಕ್ಷ ಒಡೆಯುವ ಮುನ್ಸೂಚನೆ ಸಿಕ್ಕಿತ್ತು. ಅಧಿಕಾರ ಕೈತಪ್ಪಿರುವುದರಿಂದ ನಮ್ಮ ಪಕ್ಷದ ಹಲವರು ಬೇರೆ ಪಕ್ಷ ಸೇರಲಿದ್ದಾರೆ ಎಂಬುದು ನನಗೆ ಗೊತ್ತು. ಅವರದ್ದೇ ಆದ ಅನಿವಾರ್ಯತೆಗಳು ಇರಬಹುದು. ಅದರ ಬಗ್ಗೆ ನಾನೇನೂ ಹೇಳಲ್ಲ. ಹೋಗುವವರನ್ನು ಬಲವಂತವಾಗಿ ಹಿಡಿದಿಡುವ ನಂಬಿಕೆ ನನಗಿಲ್ಲ ಎಂದು ದೀದಿ ಅಂದೇ ಅಸಹಾಯಕತೆ ವ್ಯಕ್ತಪಡಿಸಿದ್ದರು. ಸದ್ಯ ಕಾಳಿಘಾಟ್ ಸಭೆಯು ಈ ಪಕ್ಷಾಂತರದ ಭೀತಿಯ ನಡುವೆಯೇ ನಡೆದಿದ್ದು, ನಾಯಕರಲ್ಲಿ ಧೈರ್ಯ ತುಂಬುವ ಪ್ರಯತ್ನ ನಡೆಸಲಾಗಿದೆ.

ಜನಾದೇಶದ ಲೂಟಿ": ಟ್ವಿಟರ್‌ನಲ್ಲಿ ಆಕ್ರೋಶ

ಸಭೆಯ ನಂತರ ಟಿಎಂಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ನಮ್ಮ ನಾಯಕರು ದಬ್ಬಾಳಿಕೆ ಮತ್ತು ಬೆದರಿಕೆಗಳ ನಡುವೆಯೂ ಧೈರ್ಯದಿಂದ ಹೋರಾಡಿದ್ದಾರೆ. ಟಿಎಂಸಿ ಒಂದೇ ಕುಟುಂಬವಾಗಿ ಒಗ್ಗಟ್ಟಿನಿಂದ ನಿಲ್ಲಲಿದೆ. ಜನರ ತೀರ್ಪನ್ನು ಲೂಟಿ ಮಾಡಿದವರ ಮುಂದೆ ನಾವು ಮಂಡಿಯೂರುವುದಿಲ್ಲ. ಸತ್ಯಕ್ಕೆ ಜಯ ಸಿಗಲಿದೆ ಎಂದು ಬರೆದುಕೊಂಡಿದೆ. ಆದರೆ, ಇಷ್ಟೊಂದು ದೊಡ್ಡ ಮಟ್ಟದ ಸೋಲಿಗೆ ಇವಿಎಂ ಹ್ಯಾಕಿಂಗ್ ಅಥವಾ ಕೇಂದ್ರದ ಒತ್ತಡವೇ ಕಾರಣ ಎಂಬ ಪಕ್ಷದ ವಾದವನ್ನು ಸಾರ್ವಜನಿಕರು ಎಷ್ಟು ಒಪ್ಪುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ,(ಏಜೆನ್ಸೀಸ್​).