ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬುಧವಾರ (ಜೂ.3) ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಭಾರಿ ಬಿರುಕು ಉಂಟಾಗಿದೆ. ಉಚ್ಚಾಟಿತ ಶಾಸಕ ರಿತಬ್ರತಾ ಬ್ಯಾನರ್ಜಿ ನೂತನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಇದು ಮಮತಾ ಬ್ಯಾನರ್ಜಿಗೆ ದೊಡ್ಡ ರಾಜಕೀಯ ಹಿನ್ನಡೆಯಾಗಿದೆ.
ಟಿಎಂಸಿ ಪಕ್ಷದ ಚಿಹ್ನೆಯಡಿ ಗೆದ್ದಿರುವ 58 ಶಾಸಕರ ಬೆಂಬಲ ತಮ್ಮ ತಂಡಕ್ಕಿದೆ ಮತ್ತು ಶೀಘ್ರದಲ್ಲೇ ಮತ್ತಿಬ್ಬರು ಶಾಸಕರು ತಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ರಿತಬ್ರತಾ ಬ್ಯಾನರ್ಜಿ ತಿಳಿಸಿದ್ದು, ಇದರೊಂದಿಗೆ ಜಾವೇದ್ ಅಹಮದ್ ಖಾನ್, ಸಂದೀಪನ್ ಸಹಾ, ಸಬೀನಾ ಯಾಸ್ಮಿನ್ ಮತ್ತು ಸಿಯುಲಿ ಸಹಾ ಅವರನ್ನು ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ಘೋಷಿಸಲಾಗಿದೆ. ರಘುನಾಥ್‌ಗಂಜ್ ಕ್ಷೇತ್ರದ ಶಾಸಕ ಅಖ್ರುಜ್ಜಮಾನ್ರನ್ನು ರೆಬೆಲ್ ಬಣದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ವಿರೋಧಿಸುವುದೇ ಕೆಲಸವಲ್ಲ!..
ಬಂಗಾಳ ಸರ್ಕಾರದ ತಪ್ಪು ನೀತಿಗಳನ್ನು ಮಾತ್ರ ತಾವು ವಿರೋಧಿಸುವುದಾಗಿ ಸ್ಪಷ್ಟಪಡಿಸಿರುವ ರಿತಬ್ರತಾ ಬ್ಯಾನರ್ಜಿ, ಕೇವಲ ವಿರೋಧಕ್ಕಾಗಿಯೇ ವಿರೋಧ ಮಾಡುವುದಿಲ್ಲ ಎಂದಿದ್ದಾರೆ. ಸಂಸದೀಯ ನಿಯಮಗಳ ಪ್ರಕಾರ ತಾವೇ ಪಶ್ಚಿಮ ಬಂಗಾಳ ವಿಧಾನಸಭೆಯ ನಿಜವಾದ ಮತ್ತು ಪ್ರಮುಖ ವಿರೋಧ ಪಕ್ಷವಾಗಿದ್ದು, ಮಮತಾ ಬ್ಯಾನರ್ಜಿ ಅವರು ನಮ್ಮ ಶಾಸಕಾಂಗ ಪಕ್ಷದ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಮೂರನೇ ಎರಡರಷ್ಟು ಶಾಸಕರು ತಮ್ಮೊಂದಿಗಿರುವುದರಿಂದ, ಇವರ ಬಣವೇ ಅಸಲಿ ತೃಣಮೂಲ ಕಾಂಗ್ರೆಸ್ ಎಂದು ಪ್ರತಿಪಾದಿಸಿರುವ ರಿತಬ್ರತಾ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ತಮಗೆ ಈಗಾಗಲೇ ಕೊಠಡಿಯನ್ನು ಅಧಿಕೃತವಾಗಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ತಾವು ಜವಾಬ್ದಾರಿಯುತವಾಗಿ ಕೆಲಸ ಮಾಡಲಿದ್ದು, ಬಿಜೆಪಿಗೆ ಒಂದಿಂಚೂ ರಾಜಕೀಯ ಜಾಗ ಬಿಟ್ಟುಕೊಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ವಿರುದ್ಧ ಆಕ್ರೋಶ
ಪಕ್ಷದಿಂದ ಉಚ್ಚಾಟನೆಗೊಂಡಿರುವ ಮತ್ತೊಬ್ಬ ಶಾಸಕ ಸಂದೀಪನ್ ಸಹಾ ಪ್ರತಿಕ್ರಿಯೆ ನೀಡಿದ್ದು, ಈ ಬಿಕ್ಕಟ್ಟಿಗೆ ತೃಣಮೂಲ ಕಾಂಗ್ರೆಸ್‌ನ ನಂ 2 ಲೀಡರ್ ಎಂದು ಹೇಳಿಕೊಳ್ಳುವ ಅಭಿಷೇಕ್ ಬ್ಯಾನರ್ಜಿ ಅವರೇ ಕಾರಣ ಎಂದಿದ್ದಾರೆ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿರುವಾಗ ಕ್ರೆಡಿಟ್ ತೆಗೆದುಕೊಳ್ಳುವವರು, ಪಕ್ಷದ ಇಂದಿನ ಹೀನಾಯ ಸ್ಥಿತಿಗೂ ತಾವೇ ಜವಾಬ್ದಾರಿ ಹೊರಬೇಕು ಎಂದು ಸಹಾ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಟಿಎಂಸಿ ನಾಯಕ ಪ್ರಸನ್ ಬ್ಯಾನರ್ಜಿ ಮಾತನಾಡಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ, ಬಹುಮತ ಇರುವ ಶಾಸಕರು ಒಟ್ಟಾಗಿ ಸೇರಿ ಸದನವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಲು ನಾಯಕರನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಯ ಸೈದ್ಧಾಂತಿಕ ಹೋರಾಟದ ಜೊತೆಗೆ, ಸರ್ಕಾರದ ಜೊತೆ ರಚನಾತ್ಮಕವಾಗಿ ಚರ್ಚೆ ನಡೆಸುವ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ತಾವು ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಹೊಸ ರಾಜಕೀಯ ಬೆಳವಣಿಗೆಯಿಂದಾಗಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ತನ್ನದೇ ಶಾಸಕಾಂಗ ಪಕ್ಷದ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆದರೆ, ಬಂಡಾಯ ಎದ್ದಿರುವ ಶಾಸಕರು ಮಮತಾ ಬ್ಯಾನರ್ಜಿ ನಾಯಕತ್ವಕ್ಕೆ ನೇರ ಸವಾಲು ಹಾಕದೆ ಜಾಣ್ಮೆ ಪ್ರದರ್ಶಿಸಿದ್ದಾರೆ. ವಿಧಾನಸಭಾ ಸ್ಪೀಕರ್ ಅವರಿಗೆ ಸಲ್ಲಿಸಿರುವ ಅಧಿಕೃತ ಪತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷರಾಗಿಯೇ ಸಂಬೋಧಿಸಿದ್ದಾರೆ.
ಇದಕ್ಕೂ ಮುನ್ನ ದಿನದ ಆರಂಭದಲ್ಲಿ ಮಾತನಾಡಿದ್ದ ನಾಯಕ ರಿತಬ್ರತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಪಕ್ಷವು ತಮ್ಮನ್ನು ಉಚ್ಚಾಟಿಸಿರಬಹುದು, ಆದರೆ ತಾವು ಇಂದಿಗೂ ಸೈದ್ಧಾಂತಿಕವಾಗಿ ಪಕ್ಷದೊಂದಿಗೇ ಇರುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಬಹುಪಾಲು ಶಾಸಕರು ತಮ್ಮ ಮಾತು ಕೇಳುತ್ತಿರುವುದರಿಂದ ರಾಜಕೀಯವಾಗಿ ತಾವೇ ಹೆಚ್ಚು ಶಕ್ತಿಶಾಲಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಇತ್ತ ಬಂಡಾಯ ಬಣದ ಈ ದಿಢೀರ್ ನಡೆಯಿಂದ ಎಚ್ಚೆತ್ತುಕೊಂಡಿರುವ ಟಿಎಂಸಿ ನಾಯಕತ್ವ, ಪರಿಸ್ಥಿತಿಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳದ ತನ್ನೆಲ್ಲಾ ಸಾಂಸ್ಥಿಕ ಸಮಿತಿಗಳನ್ನು ಹಾಗೂ ಪಕ್ಷದ ಎಲ್ಲಾ ಪ್ರಮುಖ ಅಂಗಸಂಸ್ಥೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಿ ಆದೇಶ ಹೊರಡಿಸಿದೆ(ಏಜೆನ್ಸೀಸ್).