Saayoni Ghosh | ಮಾಜಿ ಸಿಎಂ ಮಮತಾ ಬ್ಯಾನರ್ಜಿ ಟಿಎಂಸಿ ಸಂಸದೆ ಸಾಯೋನಿ ಘೋಷ್  
ದೇಶ

ಟಿಎಂಸಿ ಆಂತರಿಕ ಬಿಕ್ಕಟ್ಟು ತಾರಕಕ್ಕೆ; ನೇಮಕಗೊಂಡ ಒಂದೇ ವಾರದಲ್ಲಿ ಜಾದವ್‌ಪುರ ಸಂಸದೆ ಸಾಯೋನಿ ಘೋಷ್ ದಿಢೀರ್ ವಜಾ! | Saayoni Ghosh

ಕೋಲ್ಕತ್ತಾ: ತೀವ್ರ ಆಂತರಿಕ ಬಿಕ್ಕಟ್ಟಿಗೆ ಸಿಲುಕಿರುವ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ರಾಜಕೀಯ ಹೈಡ್ರಾಮಾ ತಾರಕಕ್ಕೇರಿದೆ. ಕೇವಲ ಒಂದು ವಾರದ ಹಿಂದಷ್ಟೇ ಪಕ್ಷದ ಯುವ ಘಟಕದ ಅಧ್ಯಕ್ಷೆಯನ್ನಾಗಿ ನೇಮಕವಾಗಿದ್ದ ಜಾದವ್‌ಪುರ ಸಂಸದೆ ಸಾಯೋನಿ ಘೋಷ್ ಅವರನ್ನು ಈಗ ದಿಢೀರ್ ಆಗಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ಇದಷ್ಟೇ ಅಲ್ಲದೆ, ಕೋಲ್ಕತ್ತಾ ದಕ್ಷಿಣ ಸಂಸದೆ ಮಾಲಾ ರಾಯ್ ಅವರನ್ನು ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಅವರ ಜಾಗಕ್ಕೆ ನದಿಯಾ ಜಿಲ್ಲೆಯ ಕಾಲಿಗಂಜ್ ಶಾಸಕಿ ಅಲಿಫಾ ಅಹ್ಮದ್ ಅವರನ್ನು ತರಲಾಗಿದೆ.
ಮಮತಾ ಬ್ಯಾನರ್ಜಿ ಅವರು ಜೂನ್ 5 ರಂದು ಹೊಸ ಸಮಿತಿಯಲ್ಲಿ ಸ್ಥಾನ ನೀಡಿದ್ದ ಸಾಯೋನಿ ಘೋಷ್ ಮತ್ತು ಮಾಲಾ ರಾಯ್ ಇಬ್ಬರೂ ಈಗ ಬಂಡಾಯಗಾರರ ಗುಂಪು ಸೇರಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಟಿಎಂಸಿಯ ಒಟ್ಟು 28 ಲೋಕಸಭಾ ಸಂಸದರ ಪೈಕಿ ಬರೋಬ್ಬರಿ 20 ಸಂಸದರು ಮಮತಾ ಬ್ಯಾನರ್ಜಿ ವಿರುದ್ಧ ತಿರುಗಿಬಿದ್ದಿದ್ದಾರೆ. ಶನಿವಾರವಷ್ಟೇ ಹಿರಿಯ ಸಂಸದ ಸುದೀಪ್ ಬಂದೋಪಾಧ್ಯಾಯ ಕೂಡ ಈ ಬಂಡಾಯಗಾರರ ಕೈಜೋಡಿಸಿದ್ದು, ಈ 20 ಸಂಸದರ ಬಣವು ಸೋಮವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ತಾವೇ ಅಸಲಿ ಟಿಎಂಸಿ ಎಂದು ಮನ್ನಣೆ ನೀಡುವಂತೆ ಪತ್ರ ಸಲ್ಲಿಸಲು ಸಿದ್ಧತೆ ನಡೆಸಿದೆ.

ಎನ್‌ಡಿಎ ಮೈತ್ರಿಕೂಟಕ್ಕೆ ಬಂಡಾಯಗಾರರ ಬೆಂಬಲ

ಬಂಡಾಯಗಾರರ ನೇತೃತ್ವ ವಹಿಸಿರುವ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು, ಲೋಕಸಭೆಯಲ್ಲಿ ನಮ್ಮ ಬಣಕ್ಕೆ ಪ್ರತ್ಯೇಕ ಮನ್ನಣೆ ಸಿಕ್ಕ ತಕ್ಷಣ, ನಾವು ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲಿದ್ದೇವೆ ಎಂದು ಮುಕ್ತವಾಗಿ ಘೋಷಿಸಿದ್ದಾರೆ. ಇದು ದೆಹಲಿ ಮಟ್ಟದಲ್ಲಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಪಕ್ಷದೊಳಗೆ ನಡೆದಿರುವ ಈ ದ್ರೋಹದ ಬಗ್ಗೆ ಟಿಎಂಸಿಯ ಹಿರಿಯ ರಾಜ್ಯಸಭಾ ಸಂಸದರೊಬ್ಬರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮಮತಾ ದೀದಿ ಅವರು ಹಾಲು, ಜೇನು ಉಣಿಸಿ ಸಾಕಿದವರೆಲ್ಲಾ ಕೊನೆಗೆ ಹಾವಾಗಿ ಕಚ್ಚುತ್ತಿದ್ದಾರೆ ಎಂದು ಬಂಡಾಯವೆದ್ದ 20 ಸಂಸದರ ವಿರುದ್ಧ ಮಾರ್ಮಿಕವಾಗಿ ಕಿಡಿಕಾರಿದ್ದಾರೆ. ಸದ್ಯ ಮಮತಾ ಬ್ಯಾನರ್ಜಿ ಕೇವಲ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಕೇವಲ 8 ಸಂಸದರ ಬೆಂಬಲವನ್ನು ಮಾತ್ರ ಉಳಿಸಿಕೊಂಡಿದ್ದಾರೆ.

ನಾಯಕರ ಬದಲಾವಣೆ ಮತ್ತು ಬಂಡಾಯ ಶಮನದ ಕಸರತ್ತು

ಬಿಕ್ಕಟ್ಟು ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಸುದೀಪ್ ಬಂಡೋಪಾಧ್ಯಾಯ ನಿಭಾಯಿಸುತ್ತಿದ್ದ ಉತ್ತರ ಕೋಲ್ಕತ್ತಾ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಬೆಲೆಘಾಟಾ ಸಂಸದ ಕುನಾಲ್ ಘೋಷ್ ಅವರನ್ನು ನೇಮಿಸಲಾಗಿದೆ. ಇನ್ನು ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿ ಉಳಿದಿರುವ ಕೇವಲ 8 ಲೋಕಸಭಾ ಸಂಸದರ ವಿಭಾಗಕ್ಕೆ ಹಿರಿಯ ಸಂಸದ ಸೌಗತ ರಾಯ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿ ಮಮತಾ ಬ್ಯಾನರ್ಜಿ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸುತ್ತಿದ್ದಾರೆ(ಏಜೆನ್ಸೀಸ್​​).