West Bengal Violence | ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಭೀಕರ ಹಿಂಸಾಚಾರ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣ ಕಾವೇರುತ್ತಿದ್ದು, ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೂ ಮುನ್ನ ಭೀಕರ ಹಿಂಸಾಚಾರ (West Bengal Violence) ನಡೆದಿದೆ. ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರು ಗಾಯಗೊಂಡಿದ್ದು, ನಗರದ ಹಲವೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಉತ್ತರ ಕೋಲ್ಕತ್ತಾದ ಗಿರೀಶ್ ಪಾರ್ಕ್ ವ್ಯಾಪ್ತಿಯಲ್ಲಿ ಈ ಸಂಘರ್ಷ ನಡೆದಿದ್ದು, ಬಂಗಾಳದ ಸಚಿವೆ ಶಶಿ ಪಂಜಾ ಕಚೇರಿ ಮತ್ತು ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ಎಸೆದಿದ್ದಾರೆ, ಸಮಾವೇಶ ಸ್ಥಳಕ್ಕೆ ತೆರಳುತ್ತಿದ್ದ ಬಿಜೆಪಿ ಬೆಂಬಲಿಗರು ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ಹೊತ್ತು ತಂದಿದ್ದರು. ಸಚಿವರ ಮನೆಯ ಮುಂದೆ ಹಾದುಹೋಗುವಾಗ ಬಸ್‌ಗಳಿಂದ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಚಿವೆ ಶಶಿ ಪಂಜಾ ದೂರಿದ್ದಾರೆ.
ಬಿಜೆಪಿ ನಾಯಕರು ಹೇಳಿದ್ದೇನು..?
ಟಿಎಂಸಿಯವರ ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ನಾಯಕರು, ತಮ್ಮ ಕಾರ್ಯಕರ್ತರನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಟಿಎಂಸಿ ಗೂಂಡಾಗಳೇ ದಾಳಿ ನಡೆಸಿದ್ದಾರೆ, ಈ ಗದ್ದಲದಲ್ಲಿ ಉತ್ತರ ಕೋಲ್ಕತ್ತಾ ಜಿಲ್ಲಾ ಬಿಜೆಪಿ ಅಧ್ಯಕ್ಷ ತಮೋಘ್ನ ಘೋಷ್ ಗಾಯಗೊಂಡಿದ್ದಾರೆ. ಇದಷ್ಟೆ ಅಲ್ಲದೇ ತಮ್ಮ ಬೆಂಬಲಿಗರಿದ್ದ ಹಲವಾರು ವಾಹನಗಳು ಜಖಂಗೊಂಡಿವೆ ಎಂದು ಕೇಸರಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ಅಧಿಕಾರಿಗೆ ಗಾಯ!
ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಎರಡೂ ಕಡೆಯಿಂದ ಮುಖಾಮುಖಿ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದ ಬೌಬಜಾರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಬಪ್ಪಾಡಿತ್ಯ ನಾಸ್ಕರ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಿರೀಶ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಅಶಾಂತಿಯ ನಡುವೆಯೂ ಬ್ರಿಗೇಡ್ ಮೈದಾನದಲ್ಲಿ ಬಿಜೆಪಿಯ ಪರಿವರ್ತನ ಯಾತ್ರೆಯ ಸಮಾರೋಪ ಸಮಾರಂಭ ನಡೆದಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಂಗಾಳದ ಜನರಲ್ಲಿ ಬದಲಾವಣೆಯ ಸಂಕಲ್ಪ ಮೂಡಿಸುವಲ್ಲಿ ಇದು ಯಶಸ್ವಿಯಾಗಿದೆ ಎಂದು ಹೇಳಿದರು. ಇದೇ ವೇದಿಕೆಯಲ್ಲಿ ಸುಮಾರು 18,680 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಬಂಗಾಳದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದ್ದು, ಕ್ರೂರ ಆಡಳಿತದ ಅಂತ್ಯ ಹತ್ತಿರದಲ್ಲಿದೆ ಎಂದು ಪ್ರಧಾನಿ ಮೋದಿ ಟಿಎಂಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದ ಈ ಹಿಂಸಾಚಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುರಿತಾಗಿ ಕಳವಳಗಳನ್ನು ಹುಟ್ಟುಹಾಕಿದೆ(ಏಜೆನ್ಸೀಸ್).