TMC | ಸ್ವಂತ ವಿಮಾನಕ್ಕೇ ಕೋಟಿ ಕೋಟಿ ಬಾಡಿಗೆ ಕೊಟ್ಟ ಟಿಎಂಸಿ!...440 ಕೋಟಿ ಫ್ರೀಜ್ ಮಾಡಿ 'ಫ್ಲೈಟ್ ರಹಸ್ಯ' ಬಿಚ್ಚಿಟ್ಟ ಇಡಿ  
ದೇಶ

ಸ್ವಂತ ವಿಮಾನಕ್ಕೇ ಕೋಟಿ ಕೋಟಿ ಬಾಡಿಗೆ ಕೊಟ್ಟ ಟಿಎಂಸಿ!...440 ಕೋಟಿ ಫ್ರೀಜ್ ಮಾಡಿ 'ಫ್ಲೈಟ್ ರಹಸ್ಯ' ಬಿಚ್ಚಿಟ್ಟ ಇಡಿ | TMC

ಕೋಲ್ಕತ್ತಾ: ಹಣ ಅಕ್ರಮ ವರ್ಗಾವಣೆ ನಿಗ್ರಹ ಕಾಯ್ದೆ ಅಡಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ (TMC) 440 ಕೋಟಿ ರೂಪಾಯಿಗೂ ಅಧಿಕ ಠೇವಣಿ ಹೊಂದಿದ್ದ ಮೂರು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಟಿಎಂಸಿಗೆ ಸೇರಿದ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಮೂರು ಖಾತೆಗಳಲ್ಲಿದ್ದ ಒಟ್ಟು 440.42 ಕೋಟಿ ರೂಪಾಯಿಗಳನ್ನು ಅಮಾನತಿನಲ್ಲಿಡಲಾಗಿದೆ ಎಂದು ಇಡಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪಕ್ಷದ ನಿಧಿಯಿಂದ ಭಾರಿ ಪ್ರಮಾಣದ ಅನುಮಾನಾಸ್ಪದ ಹಣಕಾಸು ವಹಿವಾಟುಗಳು ನಡೆದಿವೆ ಎಂದು ಆರೋಪಿಸಿರುವ ತನಿಖಾ ಸಂಸ್ಥೆಯು, ಹಣ ಅಕ್ರಮ ವರ್ಗಾವಣೆ ಮತ್ತು ಪಕ್ಷದ ನಿಧಿಯ ದುರ್ಬಳಕೆ ಕುರಿತು ತನಿಖೆ ತೀವ್ರಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ-ಎನ್‌ಸಿಆರ್‌ನ ಐದು ವಿಭಿನ್ನ ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಈ ಎಲ್ಲ ಸ್ಥಳಗಳು ವಿಮಾನಯಾನ ವಲಯದಲ್ಲಿ ಕಾರ್ಯನಿರ್ವಹಿಸುವ ಕೇರ್‌ವೆಲ್ ಗ್ರೂಪ್ ಆಫ್ ಕಂಪನೀಸ್​ಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.
2023 ಏಪ್ರಿಲ್​ನಿಂದ, ಈ ವರ್ಷದ ಜೂನ್ ನಡುವೆ ತೃಣಮೂಲ ಕಾಂಗ್ರೆಸ್ ಖಾತೆಗಳಿಂದ ಕೇರ್‌ವೆಲ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅದಕ್ಕೆ ಸಂಬಂಧಿಸಿದ ಮತ್ತೊಂದು ಸಂಸ್ಥೆಗೆ ಸುಮಾರು 160 ಕೋಟಿ ರೂಪಾಯಿ ವರ್ಗಾವಣೆಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದಾದ ಬಳಿಕ ಕೇರ್‌ವೆಲ್ ಏವಿಯೇಷನ್ ಸಂಸ್ಥೆಯು ಹೊಸದಾಗಿ ಸ್ಥಾಪಿಸಲಾದ ತನ್ನ ಸಹವರ್ತಿ ಕಂಪನಿಯ ಖಾತೆಗಳಿಗೆ ಸುಮಾರು 82.96 ಕೋಟಿ ರೂಪಾಯಿಗಳನ್ನು ರವಾನಿಸಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ವಿಮಾನ, ಹೆಲಿಕಾಪ್ಟರ್ ಖರೀದಿ ಹಾಗೂ ವಿದೇಶಿ ಅನುದಾನದ ಶಂಕೆ

ಖಾತೆಗೆ ಬಂದ ಹಣದ ಬಹುಭಾಗವನ್ನು ಎಂಬ್ರೇರ್ ಲೆಗಸಿ 600 (Embraer Legacy 600) ವಿಮಾನ ಹಾಗೂ ಅಗಸ್ಟಾ 109 ಎಸ್‌ಪಿ (Agusta 109 SP) ಹೆಲಿಕಾಪ್ಟರ್ ಖರೀದಿಸಲು ಬಳಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಇವೆರಡರ ಖರೀದಿಗೆ ಒಟ್ಟು 112 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಗಸ್ಟಾ ಹೆಲಿಕಾಪ್ಟರ್ ಖರೀದಿಯಲ್ಲಿ ಕೆಲ ವಿದೇಶಿ ಅನುದಾನದ ಹಣವನ್ನೂ ಬಳಸಲಾಗಿದೆ, ಇನ್ನುಳಿದ ಹೆಚ್ಚಿನ ಹಣ ನೇರವಾಗಿ ತೃಣಮೂಲ ಕಾಂಗ್ರೆಸ್ ಖಾತೆಗಳಿಂದ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಈ ವಿದೇಶಿ ಹಣಕಾಸಿನ ಮೂಲ ಯಾವುದು ಹಾಗೂ ಇದರಲ್ಲಿ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದರ ಕುರಿತು ಇಡಿ ತನಿಖೆ ನಡೆಸುತ್ತಿದೆ.

ಖರೀದಿಸಿದ ವಿಮಾನವನ್ನೇ ಪಕ್ಷಕ್ಕೆ ಬಾಡಿಗೆಗೆ ನೀಡಿದ್ದ ಕಂಪನಿ!

ಅಚ್ಚರಿಯ ವಿಚಾರವೆಂದರೆ, ಈ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಖರೀದಿಸಿದ ನಂತರ, ಅವುಗಳನ್ನು ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಬಾಡಿಗೆಗೆ ನೀಡಲಾಗಿತ್ತು. ಅವುಗಳ ಬಳಕೆಗಾಗಿ ಪಕ್ಷದ ಖಾತೆಯಿಂದ ಮತ್ತೆ ಭಾರಿ ಮೊತ್ತದ ಹಣವನ್ನು ಕಂಪನಿಗೆ ರವಾನಿಸಲಾಗುತ್ತಿತ್ತು. ಇದು ಅನುಮಾನಾಸ್ಪದ ನಡೆಯಾಗಿದ್ದು, ನೈಜ ವಹಿವಾಟು ಮತ್ತು ಅದರ ನಿಜವಾದ ಫಲಾನುಭವಿಗಳನ್ನು ಮರೆಮಾಚಲು ಹೀಗೆ ಯೋಜಿಸಲಾಗಿರಬಹುದು ಎಂದು ಇಡಿ ಅಭಿಪ್ರಾಯಪಟ್ಟಿದೆ.
ಸದ್ಯ ಇಡಿ ಅಧಿಕಾರಿಗಳು ಹಣದ ಮೂಲ, ನಿಧಿಯ ಬಳಕೆ, ವಿದೇಶಿ ಹೂಡಿಕೆ ಹಾಗೂ ಎಲ್ಲ ಸಂಬಂಧಿತ ಕಂಪನಿಗಳ ನಡುವಿನ ವಹಿವಾಟಿನ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ(ಏಜೆನ್ಸೀಸ್​).