ಚೆನ್ನೈ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇರಳ ಮೂಲದ ರ‍್ಯಾಪರ್ ವೇದನ್ಗೆ ತಮ್ಮ ವೇದಿಕೆಗಳಲ್ಲಿ ಸನ್ಮಾನ ಮಾಡಿದ್ದಕ್ಕೆ ಜನಪ್ರಿಯ ಗಾಯಕಿ ಚಿನ್ಮಯಿ ಶ್ರೀಪಾದ(Singer Chinmayi) ಆಡಳಿತರೂಢ ಟಿವಿಕೆ ಮತ್ತು ವಿಪಕ್ಷ ಡಿಎಂಕೆ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಹಲವಾರು ಮಹಿಳೆಯರು ವೇದನ್ ವಿರುದ್ಧ ಲೈಂಗಿಕ ಆರೋಪಗಳನ್ನು ಮಾಡಿದ್ದನ್ನು ಉಲ್ಲೇಖಿಸಿ, ಪ್ರಮುಖ ರಾಜಕೀಯ ಪಕ್ಷಗಳು ಅಂತಹ ವ್ಯಕ್ತಿಗೆ ವೇದಿಕೆ ನೀಡುವುದರಿಂದ ಬಲಿಪಶುಗಳು ಮತ್ತಷ್ಟು ಅವಮಾನಕ್ಕೊಳಗಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಪಕ್ಷಗಳು ಆರೋಪಗಳನ್ನು ಎದುರಿಸುತ್ತಿರುವ ಜನರಿಂದ ದೂರವಿರಬೇಕು. ಇಲ್ಲದಿದ್ದರೆ ಅದು ತಪ್ಪು ಸಂಕೇತಗಳನ್ನು ಕಳುಹಿಸುತ್ತದೆ. ಹಿಂದೆ ಅವರ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ರಾಜಕೀಯ ಸಭೆಗಳಲ್ಲಿ ವೇದನ್ ಅವರನ್ನು ಸನ್ಮಾನಿಸುವುದು ತಪ್ಪು ಎಂದು ಕಿಡಿಕಾರಿದ್ದಾರೆ.
ತಮ್ಮ ಕಚೇರಿಗಳಲ್ಲಿ ವೇದನ್ ಅವರನ್ನು ಸನ್ಮಾನಿಸಿದ್ದಕ್ಕೆ ಟಿವಿಕೆ ಮತ್ತು ಡಿಎಂಕೆ ಪಕ್ಷಗಳು ಸ್ಪಷ್ಟಪಡಿಸಬೇಕು. ಮತ್ತು ಬಲಿಪಶುಗಳ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿನ್ಮಯಿ ಟ್ವೀಟ್ ವೈರಲ್ ಆಗಿದ್ದು, ಚರ್ಚೆಯನ್ನು ಹುಟ್ಟು ಹಾಕಿದೆ (ಏಜೆನ್ಸೀಸ್).