ಟ್ರೆಕ್ಕಿಂಗ್​​​ನಲ್ಲಿ ಮಿಸ್​ ಆದ ಯುವತಿ ಬಬಿತಾ (23) 
ದೇಶ

10 ದಿನಗಳು ಕಳೆದರೂ ಪತ್ತೆಯಾಗದ ಯುವತಿ! ಟ್ರೆಕ್ಕಿಂಗ್​ನಲ್ಲಿ ಕಣ್ಮರೆಯಾದ ಬಬಿತಾ ಶೋಧಕ್ಕೆ 120 ಜನರು, ಡ್ರೋನ್​ಗಳು

ಪ್ರಮುಖ ಮುಖ್ಯಾಂಶಗಳು

  • ಮೇ.29ರಂದು ಸ್ನೇಹಿತರ ಜೊತೆಗೆ ಟ್ರೆಕ್ಕಿಂಗ್​ಗೆ ಹೋಗಿದ್ದ ಬಬಿತಾ ಪಾಂಡೆ
  • 10 ದಿನಗಳು ಕಳೆದರೂ ಇನ್ನೂ ಸಿಗದ ಯುವತಿ
  • ಅರಣ್ಯ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ತೀವ್ರ
ಉತ್ತರಾಖಂಡ: ಮೇ.29ರಂದು ಸ್ನೇಹಿತರ ಜೊತೆಗೆ ಟ್ರೆಕ್ಕಿಂಗ್​ಗೆ ಹೋಗಿದ್ದ ಬಬಿತಾ ಪಾಂಡೆ (23) ಎಂಬ ಯುವತಿ ನಾಪತ್ತೆಯಾಗಿದ್ದು, ಇಂದಿಗೆ 10 ದಿನಗಳು ಕಳೆದರೂ ಸಿಗದಿರುವುದು ಸದ್ಯ ಕುಟುಂಬಸ್ಥರಲ್ಲಿ ತೀರ ಆತಂಕ ಸೃಷ್ಟಿಸಿದೆ.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಟ್ರೆಕ್ಕಿಂಗ್​ಗೆಂದು ಸ್ನೇಹಿತರೊಡೆನೆ ಬಂದಿದ್ದ ಬಬಿತಾ ಪಾಂಡೆ ಆರಂಭದ ಹಂತದಲ್ಲಿರುವ ಬೇಸ್​ ಕ್ಯಾಂಪ್​ನಿಂದ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಂದ ಆಕೆಗಾಗಿ ಹುಡುಕಾಟ ತೀವ್ರಗೊಂಡಿದ್ದು, ಅಧಿಕಾರಿಗಳು ಈ ಪ್ರದೇಶದಾದ್ಯಂತ ವಿವಿಧ ಸಂಸ್ಥೆಗಳಿಂದ 120ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಹಲವಾರು ಡ್ರೋನ್​ಗಳು ಯುವತಿಯ ಪತ್ತೆಗಾಗಿ ಕಾರ್ಯನಿರ್ವಹಿಸುತ್ತಿದ್ದು, 10 ದಿನಗಳೇ ಕಳೆದರೂ ಒಂದು ಸಣ್ಣ ಸುಳಿವು ಸಿಗದಿರುವುದು ಆತಂಕ ಹುಟ್ಟುಹಾಕಿದೆ.
ಪೊಲೀಸರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ, ಅರಣ್ಯ ಇಲಾಖೆ, ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್, ವಿಪತ್ತು ನಿರ್ವಹಣಾ ಕ್ಯೂಆರ್‌ಟಿ, ಶ್ವಾನ ದಳ, ಎಸ್‌ಒಜಿ, ಸ್ಥಳೀಯ ನಿವಾಸಿಗಳು ಮತ್ತು ಮಾರ್ಗದರ್ಶಕರನ್ನು ಒಳಗೊಂಡ ಜಂಟಿ ಶೋಧ ಕಾರ್ಯಾಚರಣೆ ಪ್ರಸ್ತುತ ಹುಡುಕಾಟದಲ್ಲಿ ನಿರತವಾಗಿದೆ. ಪ್ರತ್ಯೇಕ ಮಾರ್ಗಗಳಲ್ಲಿ ಮೂರು ಶೋಧ ತಂಡಗಳನ್ನು ನಿಯೋಜಿಸಲಾಗಿದ್ದು, ಡ್ರೋನ್ ತಂಡಗಳು ಪಕ್ಷಿ ನೋಟ ನೀಡುವ ಮೂಲಕ ಕಾರ್ಯಾಚರಣೆಗೆ ಸಹಾಯ ಮಾಡುತ್ತಿವೆ.

ಮಿಸ್​ ಆಗಿದ್ಹೇಗೆ?

ದಯಾರಾ ಬುಗ್ಯಾಲ್‌ ಟ್ರೆಕ್ಕಿಂಗ್​ ಸಮಯದಲ್ಲಿ ಬಬಿತಾ ಬೇಸ್ ಕ್ಯಾಂಪ್‌ನಿಂದ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಹಲವಾರು ದಿನಗಳ ವ್ಯಾಪಕ ಶೋಧ ಪ್ರಯತ್ನಗಳ ಹೊರತಾಗಿಯೂ, ಇಲ್ಲಿಯವರೆಗೆ ಆಕೆಯ ಯಾವುದೇ ಸುಳಿವು ಸಿಕ್ಕಿಲ್ಲ. ಯುವತಿ ಈ ಮಾರ್ಗಗಳಲ್ಲಿ ಸಾಗಿರಬಹುದು ಎಂದು ಊಹಿಸಲಾದ ಕಾಡುಗಳು, ಕಂದರಗಳು, ಹೊಳೆಗಳು, ದಟ್ಟವಾದ ಪೊದೆಗಳು ಮತ್ತು ಇತರ ಕಷ್ಟಕರ ಭೂಪ್ರದೇಶಗಳಲ್ಲಿ ಶೋಧ ತಂಡಗಳು ತೀವ್ರ ಹುಡುಕಾಟ ನಡೆಸುತ್ತಿವೆ.

ಕೊನೆಯದಾಗಿ ಕಾಣಿಸಿದ್ದು ಸಿಸಿಟಿವಿಯಲ್ಲಿ!

ಪೊಲೀಸರ ಪ್ರಕಾರ, ಬಬಿತಾ ತನ್ನ ಸ್ನೇಹಿತರಾದ ಹರ್ಮನ್‌ಪಾಲ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಅವರೊಂದಿಗೆ ಉತ್ತರಕಾಶಿಗೆ ಆಗಮಿಸಿದ್ದರು. ಹರ್ಸಿಲ್, ಗಂಗೋತ್ರಿ ಮತ್ತು ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನಂತರ, ಮೇ.28ರಂದು ರೈಥಾಲ್ ಗ್ರಾಮದಲ್ಲಿ ಉಳಿದುಕೊಂಡಿದ್ದರು. ಕೊನೆಯದಾಗಿ ಬಬಿತಾ ತನ್ನ ಸ್ನೇಹಿತರೊಂದಿಗೆ ಹಳ್ಳಿಯಲ್ಲಿ ಓಡಾಡಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಯಾವುದೇ ಅಧಿಕೃತ ಬುಕ್ಕಿಂಗ್​ಗಳು ಆಗಿಲ್ಲ!

ಈ ಮಧ್ಯೆ, ಬಬಿತಾ ಮತ್ತು ಆಕೆಯ ಸ್ನೇಹಿತರು, ಅಧಿಕೃತ ಎಕ್ಸ್‌ಪ್ಲೋರ್ ಉತ್ತರಕಾಶಿ ಪೋರ್ಟಲ್ ಮೂಲಕ ಚಾರಣಕ್ಕೆ ಪ್ರವೇಶ ಪಡೆದಿಲ್ಲ ಎನ್ನಲಾಗಿದೆ. ರೈಥಲ್ ಮೂಲದ ಟ್ರೆಕ್ಕಿಂಗ್ ಏಜೆನ್ಸಿ ಪ್ರೊ ಮೌಂಟೇನ್ ನಕಲಿ ಪರವಾನಗಿಯನ್ನು ಬಳಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಆರೋಪಿಸಿದೆ. ಇಷ್ಟು ದಿನಗಳಾದರೂ ಬಬಿತಾಳ ಸಣ್ಣ ಸುಳಿವು ಸಿಗದಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು, ಯುವತಿಯ ಪತ್ತೆಗೆ ಸಹಾಯ ಮಾಡುವಂತ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).