Indian Women Clothing Choice 
ದೇಶ

'ಪುರುಷರು ಶಾರ್ಟ್ಸ್ ಹಾಕಬಹುದು, ಮಹಿಳೆಯರು ಬಿಕಿನಿ ಹಾಕಬಾರದೇ?'; ಬಟ್ಟೆ ಬಗ್ಗೆ ಕಾಮೆಂಟ್ ಮಾಡುವವರ ವಿರುದ್ಧ Travel Influencer ಕಿಡಿ

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರು ಹೇಗೆ ಬಟ್ಟೆ ತೊಟ್ಟಿದ್ದರೂ ಪುರುಷರು ನೋಡ್ತಾರೆ
  • ಬಿಕಿನಿ ಪೋಟೋ ಹಂಚಿಕೊಳ್ಳಲು ಭಾರತೀಯರಿಗಿರುವ ಭಯದ ಬಗ್ಗೆ ಬಿಚ್ಚಿಟ್ಟ ಟ್ರಾವೆಲರ್​
  • ಮಹಿಳೆಯರ ಬಟ್ಟೆ ಮೇರೆಗೆ ಅವರನ್ನು ಜಡ್ಜ್​ ಮಾಡೋದು ಬಿಡಬೇಕು ಎಂದ ಟ್ರಾವೆಲರ್​
Indian Women Clothing Choice: ಸಮಾಜ ಏನು ಹೇಳುತ್ತೋ. ಸಂಬಂಧಿಕರ ನಿಂದನೆ ಏನಿರುತ್ತೋ, ಪಕ್ಕದ ಮನೆಯ ಆಂಟಿ ನೋಡಿದರೆ ಕೆಟ್ಟದಾಗಿ ಮಾತನಾಡಬಹುದೇ? ಎನ್ನುವ ಭಯದಿಂದ ಭಾರತೀಯ ಮಹಿಳೆಯರು ಇಂದಿಗೂ ವಿದೇಶಿ ಕಡಲತೀರಗಳಿಗೆ ಪ್ರವಾಸ ಹೋದಾಗ ಬಿಕಿನಿ ಅಥವಾ ಸ್ವಿಮ್‌ಸೂಟ್ ಧರಿಸಿ ಸಾವಿರಾರು ಫೋಟೋ, ವಿಡಿಯೋಗಳನ್ನು ಕ್ಲಿಕ್ಕಿಸಿಕೊಂಡರೂ, ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲ್ಲ. ಆದರೆ, ಈಗ ನಾನು ಪಾಠ ಕಲಿತಿದ್ದೇನೆ ಯಾವುದರ ಬಗ್ಗೆಯೂ ಆಲೋಚಿಸಲ್ಲ ಎನ್ನುವ ಬಗ್ಗೆ ಟ್ರಾವೆಲ್ ಇನ್ಫ್ಲುಯೆನ್ಸರ್ ರೀಟಾ ಎಂಬುವವರು ಹೇಳಿದ್ದಾರೆ.
ಸಮಾಜದ ಕಟ್ಟಳೆಯನ್ನು ಮೀರಿ ಬದುಕಬೇಕು. ವಾತಾವರಣ, ದೇಶ, ಪ್ರದೇಶಕ್ಕೆ ತಕ್ಕಂತೆ ಬಟ್ಟೆ ಧರಿಸಬೇಕು. ಬೀಚ್​ನಲ್ಲಿ ಮೈ ತುಂಬಾ ಬಟ್ಟೆ ಹಾಕೋಕೆ ಸಾಧ್ಯವಿಲ್ಲ. ಹಾಗೆಯೇ ಸಿಟಿಯಲ್ಲಿ ಬಿಕಿನಿ ತೊಡಲು ಆಗಲ್ಲ ಎಂದು ಟ್ರಾವೆಲ್ ಇನ್ಫ್ಲುಯೆನ್ಸರ್ ರೀಟಾ ಎಂಬುವವರು ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೀಚ್​ನಲ್ಲೇ ಬಿಕಿನಿ ಹಾಕ್ಬೇಕು ಸಿಟಿಯಲ್ಲಿ ಅಲ್ಲ

ಬಿಕಿನಿ ಧರಿಸಿ ಫೋಟೋ ಹಾಕಿದರೆ ಏನಾಗಬಹುದು ಎಂದು ನಾನು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಆದರೆ ಯಾವ ದೇಶವೋ ಆ ವೇಷ ಎಂಬಂತೆ, ನಾನು ಫರಿದಾಬಾದ್‌ನಲ್ಲಿ ಬಿಕಿನಿ ಧರಿಸಲು ಸಾಧ್ಯವಿಲ್ಲ. ಬೀಚ್‌ಗೆ ಹೋದಾಗ ಪೂರ್ಣ ಬಟ್ಟೆ ಧರಿಸಿ ನೀರಿನಲ್ಲಿ ಇಳಿಯಲು ಆಗುವುದಿಲ್ಲ. ಹಾಗಾಗಿ ನಾನು ಇಲ್ಲೇ ಬಿಕಿನಿ ಧರಿಸುತ್ತೇನೆ ಮತ್ತು ಆ ಫೋಟೋಗಳನ್ನು ಪೋಸ್ಟ್ ಕೂಡ ಮಾಡುತ್ತೇನೆ. ಈಗ ನನಗೆ ನನ್ನ ಬಗ್ಗೆ ಯಾರು ಏನೂ ಆಲೋಚನೆ ಮಾಡ್ತಾರೋ ಎನ್ನುವ ಭಯವಿಲ್ಲ ಎಂದು ಟ್ರಾವೆಲ್ ಇನ್ಫ್ಲುಯೆನ್ಸರ್ ರೀಟಾ ಹಂಚಿಕೊಂಡಿದ್ದಾರೆ.

ಮೈ ತುಂಬಾ ಬಟ್ಟೆ ಹಾಕಿದ್ರು ಬಿಡಲ್ಲ

ಭಾರತದಲ್ಲಿ ಮಹಿಳೆಯರು ಸಂಪೂರ್ಣವಾಗಿ ಮೈತುಂಬಾ ಬಟ್ಟೆ ಹಾಕಿದ್ದರೂ ಅವರನ್ನು ಕೆಕ್ಕರಿಸಿ ನೋಡೋದನ್ನ ನಿಲ್ಲಿಸಲ್ಲ. ಮೊದಲು ತುಂಬಾ ಯೋಚಿಸುತ್ತಿದ್ದೆ. ಈಗ ಅಂತಹ ಆಲೋಚನೆ ಮಾಡೋದಿಲ್ಲ. ಪ್ರತಿಯೊಬ್ಬ ಮಹಿಳೆಯೂ ಇತರರ ಭಯದಿಂದಾಗಿ ತನ್ನ ಸುಂದರ ಅನುಭವಗಳನ್ನು ಮಿಸ್ ಮಾಡಿಕೊಳ್ಳದಿರುವುದರ ಬಗ್ಗೆಯಾಗಿದೆ. 24ವರ್ಷದ ನಂತರ ಪ್ರವಾಸವು ನನಗೆ ಪಾಠವನ್ನು ಕಲಿಸಿದೆ. ಬಿಕಿನಿ ಫೋಟೋಗಳು ಈ ಹಿಂದೆ ತೆಗೆಸಿಕೊಂಡಿದ್ದರು ಪೋಸ್ಟ್ ಮಾಡುತ್ತಿರಲಿಲ್ಲ. ಈಗ ನನಗೆ ಯಾರ ಚಿಂತೆಯೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಪರ-ವಿರೋಧ ಚರ್ಚೆ

ರೀಟಾ ಅವರ ಈ ಪೋಸ್ಟ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರ ಹಾಗೂ ವಿರೋಧದ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ನಿಮ್ಮ ದೇಹ, ನಿಮ್ಮ ಹಣ ಮತ್ತು ನಿಮ್ಮ ಇಷ್ಟ, ನೀವು ತುಂಬಾ ಹಾಟ್ ಆಗಿ ಕಾಣುತ್ತಿದ್ದೀರಾ, ಖಂಡಿತ ಪೋಸ್ಟ್ ಮಾಡಿ ಎಂದಿದ್ದಾರೆ,
ಇನ್ನೂ ಕೆಲವರು ಥಾಯ್ಲೆಂಡ್‌ನಲ್ಲಿ ಯಾರೂ ನಮ್ಮನ್ನು ದಿಟ್ಟಿಸಿ ನೋಡುವುದಿಲ್ಲ, ಅಲ್ಲಿ ಮುಕ್ತ ಸ್ವಾತಂತ್ರ್ಯ ಸಿಗುತ್ತದೆ ಎಂದಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಕುರುಡಾಗಿ ಅನುಕರಿಸುತ್ತಿದ್ದಾರೆ. ಕಾಮೆಂಟ್‌ನಲ್ಲಿ ಈಕೆಯನ್ನು ಬೆಂಬಲಿಸುವ ಮಹಿಳೆಯರಿಂದ ಪುರುಷರು ದೂರವಿರಬೇಕು, ಇವರೆಲ್ಲ ಹಳಿ ತಪ್ಪಿದವರು ಎಂದು ಹೇಳೀದ್ದಾರೆ
ಮಹಿಳೆಯೊಬ್ಬಳು ತನ್ನ ಉಡುಪಿನ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದಾಗ, ಇಂದಿಗೂ ಸಮಾಜ ಅವಳ ಕ್ಯಾರೆಕ್ಟರ್ ಮತ್ತು ಮೌಲ್ಯಗಳನ್ನು ನಿರ್ಧರಿಸಲು ಮುಂದಾಗುತ್ತಿರುವುದು ದುರದೃಷ್ಟಕರ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.