Train Murder ಸಾಂದರ್ಭಿಕ ಚಿತ್ರ
ಲಕ್ನೋ: ಬಿಹಾರದ ಛಪ್ರಾದಿಂದ ಹೊರಟು ಲಕ್ನೋಗೆ ತಲುಪಿದ 'ಗೋಮ್ತಿನಗರ ಎಕ್ಸ್‌ಪ್ರೆಸ್' ರೈಲಿನ ಸ್ಲೀಪರ್ ಬೋಗಿಯೊಳಗೆ (Train Murder) ಮಹಿಳೆಯೊಬ್ಬರ ಶಿರಚ್ಛೇದಿತ (ತಲೆ ಇಲ್ಲದ) ಮೃತದೇಹ ಪತ್ತೆಯಾಗಿದ್ದು, ಈ ಕೃತ್ಯ ರೈಲ್ವೆ ಇಲಾಖೆ ಮತ್ತು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.
ಘಟನೆ ವಿವರ
ರೈಲು ತನ್ನ ಕೊನೆಯ ನಿಲ್ದಾಣವಾದ ಲಕ್ನೋದ ಗೋಮ್ತಿನಗರಕ್ಕೆ ತಲುಪಿದಾಗ ನೈರ್ಮಲ್ಯ ಕಾರ್ಮಿಕರೊಬ್ಬರು ಎಸ್-1 ಸ್ಲೀಪರ್ ಕೋಚ್ನ್ನು ಸ್ವಚ್ಛಗೊಳಿಸಲು ಒಳಪ್ರವೇಶಿಸಿದ್ದರು. ಈ ವೇಳೆ ಸೀಟು ಒಂದರ ಅಡಿಯಲ್ಲಿ ಅನುಮಾನಾಸ್ಪದ ಪೆಟ್ಟಿಗೆ ಮತ್ತು ಚೀಲವನ್ನು ಗಮನಿಸಿ, ತಕ್ಷಣವೇ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ಪಡೆದ ಕೂಡಲೇ ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ರೈಲ್ವೆ ರಕ್ಷಣಾ ಪಡೆ ತಂಡ ಸ್ಥಳಕ್ಕೆ ತಲುಪಿ, ಬೋಗಿಯೊಳಗೆ ಪತ್ತೆಯಾದ ಪೆಟ್ಟಿಗೆಯನ್ನು ತೆರೆದಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಬಲಿಪಶುವಿನ ವಯಸ್ಸು ಸುಮಾರು 30-35 ವರ್ಷ ಎಂದು ಅಂದಾಜಿಸಿದ್ದಾರೆ. ಆದಾಗ್ಯೂ, ಚೀಲದಲ್ಲಿ ಮಹಿಳೆಯ ಕೈ ಕಾಲುಗಳು ಇದ್ದು, ಎಲ್ಲಾ ತುಂಡು ದೇಹವನ್ನು ಪಾಲಿಥಿನ್ ಹಾಳೆಯಲ್ಲಿ ಸುತ್ತುವರಿಯಲ್ಪಟ್ಟಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ದೃಢಪಡದ ಮಹಿಳೆಯ ಗುರುತು
ಜಿಆರ್‌ಪಿಯ ಅಧಿಕೃತ ಹೇಳಿಕೆಯ ಪ್ರಕಾರ, ಭಾನುವಾರ (ಮೇ 17) ಗೋಮ್ತಿನಗರ ಎಕ್ಸ್‌ಪ್ರೆಸ್ ರೈಲಿನಲ್ಲಿ ಬ್ಯಾಗ್ ಮತ್ತು ಬಾಕ್ಸ್ ಪತ್ತೆಯಾಗಿದೆ ಎಂದು ಮಾಹಿತಿ ಬಂದ ಹಿನ್ನಲೆ ಆರ್ಪಿಎಫ್ ಮತ್ತು ಜಿಆರ್ಪಿ ತಂಡಗಳು ಕಂಟೇನರ್ಗಳನ್ನು ತೆರೆದಾಗ ಮಹಿಳೆಯ ಶವ ಪತ್ತೆಯಾಗಿದೆ ಎಂದಿದ್ದಾರೆ.
ಆದಾಗ್ಯೂ, ಅಪರಿಚಿತ ಮೃತ ಮಹಿಳೆಯನ್ನು ಗುರುತಿಸಲು ವಿವಿಧ ಮಾರ್ಗಗಳ ಮೂಲಕ ಪ್ರಯತ್ನಿಸಲಾಯಿತು. ಆದರೆ, ಗುರುತಿಸಲು ಸಾಧ್ಯವಾಗದ ಕಾರಣ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಮಹಿಳೆಯ ಗುರುತನ್ನು ಪತ್ತೆಹಚ್ಚಲು ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಪ್ರಯಾಣಿಕರ ಚಲನವಲನಗಳನ್ನು ಪತ್ತೆಹಚ್ಚುತ್ತಿದ್ದಾರೆ. ಆದಾಗ್ಯೂ, ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಕಾಣೆಯಾದ ವ್ಯಕ್ತಿಗಳ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).