ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಯುವಕನೊರ್ವ ಮನೆಯಲ್ಲಿಯೇ ತನ್ನ ಮಲತಾಯಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿದ್ದಾನೆ ಎಂದು ಗುರುವಾರ(ಅ. 22) ವರದಿಯಾಗಿದೆ.
ಕಾಶ್ಮೀರದ ಉಧಂಪುರದಲ್ಲಿ ನಡೆದ ಈ ಅಮಾನವೀಯ ಘಟನೆ ನಡೆದಿದೆ. ವಸತಿ ಕಾಲೋನಿಯ ಸುಷ್ಮಾ ದೇವಿ(40) ಎಂಬ ಮಹಿಳೆಯನ್ನು ಆಕೆಯ ಮಲಮಗ ಮೋಕ್ಷ ವರ್ಮಾ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕೇಶವ್ ವರ್ಮಾ ಮತ್ತು ಸುಷ್ಮಾ ದೇವಿ ಎಂಬ ದಂಪತಿಗಳು ಉಧಮ್‌ಪುರದ ವಸತಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಸಂಜೆ ಸುಷ್ಮಾ ಅವರ ಮಲಮಗ ಮೋಕ್ಷ ವರ್ಮಾ ಯಾವುದೇ ಕಾರಣವಿಲ್ಲದೆ ಆಕೆಯ ಮೇಲೆ ಹಲ್ಲೆ ನಡೆಸಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತಕ್ಷಣ ಕುಟುಂಬಸ್ಥರು ಅವರನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿ ಮೋಕ್ಷ ವರ್ಮಾನನ್ನು ಬಂಧಿಸಿದ್ದಾರೆ. ಮತ್ತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಕೊಲೆಯ ಹಿಂದಿನ ನಿಜವಾದ ಕಾರಣಗಳನ್ನು ಕಂಡುಹಿಡಿಯಲು ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ (ಏಜೆನ್ಸೀಸ್).