Tragic Incident 
ದೇಶ

Tragic Incident: ಕಲ್ಲಂಗಡಿ ಹಣ್ಣು ತಿಂದ ಒಂದೇ ಕುಟುಂಬದ ನಾಲ್ವರ ನಿಗೂಢವಾಗಿ ಸಾವು!

ಮುಂಬೈ: ದಕ್ಷಿಣ ಮುಂಬೈನ ಪೈಧೋನಿಯಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು(Tragic Incident) ನಡೆದಿದ್ದು, ಕಲ್ಲಂಗಡಿ ಹಣ್ಣು ಸೇವಿಸಿದ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸೋಮವಾರ ಮುಂಜಾನೆ ಈ ದುರಂತ ಬೆಳಕಿಗೆ ಬಂದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಾಣವಾಗಿದೆ.

ವಿಷಾಹಾರ ಸೇವನೆ ಶಂಕೆ

ಪ್ರಾಥಮಿಕ ವರದಿಗಳ ಪ್ರಕಾರ, ಪೈಧೋನಿಯ ಘಾಟಿ ಗಲ್ಲಿಯ ನಿವಾಸಿಗಳು ಶನಿವಾರ ತಡರಾತ್ರಿ ಮನೆಯಲ್ಲಿ ನಡೆದ ಸಣ್ಣ ಸಮಾರಂಭದ ಬಳಿಕ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಕುಟುಂಬದ ಸದಸ್ಯರಿಗೆ ತೀವ್ರತರದ ವಾಂತಿ, ತಲೆಸುತ್ತು ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ. ಭಾನುವಾರ ಬೆಳಿಗ್ಗೆಯ ವೇಳೆಗೆ ಎಲ್ಲರ ಆರೋಗ್ಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.

ಮೃತರ ವಿವರ

ಮೃತರನ್ನು ಅಬ್ದುಲ್ಲಾ ಡೊಕಾಡಿಯಾ (40), ನಸ್ರೀನ್ ಡೊಕಾಡಿಯಾ (35) ಮತ್ತು ಅವರ ಪುತ್ರಿಯರಾದ ಆಯೇಷಾ (16) ಹಾಗೂ ಜೈನಾಬ್ (13) ಎಂದು ಗುರುತಿಸಲಾಗಿದೆ. ಈ ಕುಟುಂಬವು ಇಲ್ಲಿನ ಮುಘಲ್ ಬಿಲ್ಡಿಂಗ್‌ನಲ್ಲಿ ವಾಸವಾಗಿತ್ತು.

ಘಟನೆಯ ವಿವರ

ಸ್ಥಳೀಯ ಮೂಲಗಳ ಪ್ರಕಾರ, ಭಾನುವಾರ ಬೆಳಿಗ್ಗೆ ಇಬ್ಬರು ಪುತ್ರಿಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಒಬ್ಬರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಪುತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಇಬ್ಬರು ಪೋಷಕರು ಕೂಡ ಮೃತಪಟ್ಟಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.

ತನಿಖೆ ಚುರುಕು

ನೆರೆಹೊರೆಯವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. "ಕಲ್ಲಂಗಡಿ ಹಣ್ಣಿನಲ್ಲಿ ವಿಷಕಾರಿ ಅಂಶವಿತ್ತೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ವಿಧಿವಿಜ್ಞಾನ ವರದಿಯಿಂದ (Forensic Report) ತಿಳಿದುಬರಬೇಕಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಪೊಲೀಸರು ಈ ನಿಗೂಢ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಂದೇ ಕುಟುಂಬದ ನಾಲ್ವರು ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಕಣ್ಣೀರು ಹಾಕಿಸಿದೆ,(ಏಜೆನ್ಸೀಸ್​).