ದೇಶ

ಉದಯನಿಧಿ ಸ್ಟಾಲಿನ್ ಬರ್ತಡೇ ಬ್ಯಾನರ್ ಕಟ್ಟುವಾಗ ದುರಂತ; ವಿದ್ಯುತ್ ಸ್ಪರ್ಶಿಸಿ ಇಬ್ಬರು ಡಿಎಂಕೆ ಕಾರ್ಯಕರ್ತರು ದುರ್ಮರಣ | DMK workers

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ವಾಣಿಯಚತಿರಂನಲ್ಲಿ ಶುಕ್ರವಾರ(ನ. 27) ಬೆಳಿಗ್ಗೆ ದುರಂತವೊಂದು ಸಂಭವಿಸಿದ್ದು, ಡಿಎಂಕೆ ನಾಯಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಡಿಎಂಕೆ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ವಾಣಿಯಚತಿರಂನಲ್ಲಿ ಶುಕ್ರವಾರ(ನ. 27) ಬೆಳಿಗ್ಗೆ ದುರಂತವೊಂದು ಸಂಭವಿಸಿದ್ದು, ಡಿಎಂಕೆ ನಾಯಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಡಿಎಂಕೆ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ವಾಣಿಯಚತಿರಂನ ಅಣ್ಣಾ ನಗರದ ವಿ. ವೀರೇಂದರ್ (22) ಮತ್ತು ಕರಾಣಿ ಗ್ರಾಮದ ಎಂ. ವೇಲನ್ (30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ವೆಂಗಲ್ ಠಾಣೆಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಉದಯನಿಧಿ ಸ್ಟಾಲಿನ್ ಅವರ ಜನ್ಮದಿನದ ಅಂಗವಾಗಿ ಖಾಸಗಿ ಸಭಾಂಗಣವೊಂದರಲ್ಲಿ ಕಲ್ಯಾಣ ಸಹಾಯ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರ ಬಗ್ಗೆ ವಾಣಿಯಚತಿರಂ ಬಳಿ ರಸ್ತೆ ಬದಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದಾಗ ಸಮೀಪದ ವಿದ್ಯುತ್ ಕಂಬಕ್ಕೆ ಸಂಪರ್ಕ ಹೊಂದಿದ್ದ ತಂತಿಯೊಂದು ತಗಲು ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಮೃತಪಟ್ಟವರು ಡಿಎಂಕೆ ಸದಸ್ಯರಾಗಿದ್ದು, ಸ್ಥಳೀಯ ಡಿಎಂಕೆ ಪದಾಧಿಕಾರಿಗಳ ಸಂಬಂಧಿಕರೂ ಆಗಿದ್ದಾರೆನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನೆ ಕುರಿತು ವೆಂಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).