ಕ್ಲಾಸ್ರೂಮ್ ಒಳಗೆ ವಿದ್ಯಾರ್ಥಿನಿಗೆ ಗುಂಡಿಟ್ಟು ತಾನೂ ಸಾವಿಗೆ ಶರಣಾದ ಸಹಪಾಠಿ!
- ಯುವಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ನಡೆದಿದೆ
- ಪಂಜಾಬ್‌ನ ತರಣ್ ತರಣ್ ಸಾಹೀಬ್ ಜಿಲ್ಲೆಯ ಉಸ್ಮಾ ಗ್ರಾಮದಲ್ಲಿ ನಡೆದಿದೆ
- ವಿದ್ಯಾರ್ಥಿನಿಗೆ ಗುಂಡಿಟ್ಟು ಕೊಂದ ಬೆನ್ನಲ್ಲೇ ಯುವಕನು ಕೂಡ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದಾನೆ
ಚಂಡೀಗಢ: ಯುವಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ( Student ) ಗುಂಡು ಹಾರಿಸಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಪಂಜಾಬ್‌ನ ತರಣ್ ತರಣ್ ಸಾಹೀಬ್ ಜಿಲ್ಲೆಯ ಉಸ್ಮಾ ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ನೌಶೇರಾ ಪನುವಾ ಗ್ರಾಮದ ಸಂದೀಪ್ ಕೌರ್ ಎಂದು ಗುರುತಿಸಲಾಗಿದೆ. ಕೌರ್ಗೆ ಗುಂಡಿಟ್ಟು ಕೊಂದ ಬೆನ್ನಲ್ಲೇ ಮಾಲಿಯಾ ಗ್ರಾಮದ ಯುವಕ ಪ್ರಿನ್ಸ್ ರಾಜ್ ಸಿಂಗ್ ಕೂಡ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಇಬ್ಬರು ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಾಗಿದ್ದರು.
ಇಂದು (ಫೆ.09) ಬೆಳಗ್ಗೆ ತರಗತಿ ಆರಂಭವಾಗುವ ಮೊದಲು ಆರೋಪಿ ರಾಜ್ ಸಿಂಗ್ ಕ್ಲಾಸ್ರೂಮ್ಗೆ ಬಂದು, ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಸಂದೀಪ್ ಕೌರ್ ತಲೆಗೆ ಗುರಿಯಿಟ್ಟು ಗುಂಡಿಟ್ಟಿದ್ದಾನೆ. ಇದರಿಂದ ಕೌರ್ ಸ್ಥಳದಲ್ಲೇ ಮೃತಪಟ್ಟಳು. ಇದಾದ ಬಳಿಕ ರಾಜಾ ಸಿಂಗ್, ತಾನೂ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದಾನೆ. ಇಡೀ ಘಟನೆ ಕ್ಲಾಸ್‌ರೂಮ್‌ನ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರಣ ಏನು?
ಈ ಘಟನೆಗೆ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಕೆಲವು ವರದಿಗಳ ಪ್ರಕಾರ, ರಾಜಾ ಸಿಂಗ್ನದ್ದು ಒನ್ ಸೈಡ್ ಲವ್ ಆಗಿತ್ತು ಎನ್ನಲಾಗಿದೆ. ಆತ ಸಂದೀಪ್ಗೆ ಹಿಂಸೆ ನೀಡುತ್ತಿದ್ದ ಎಂಬ ಆರೋಪಗಳಿವೆ. ಆತ ಬಹು ದಿನಗಳಿಂದ ಸಂದೀಪ್ಗೆ ತೊಂದರೆ ಕೊಡುತ್ತಿದ್ದ. ಈ ಬಗ್ಗೆ ಕಾಲೇಜು ಅಧಿಕಾರಿಗಳಿ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಸಹ ಆರೋಪ ಮಾಡಿದ್ದಾರೆ.
ಈ ಘಟನೆಯ ಸುದ್ದಿ ಕ್ಯಾಂಪಸ್‌ನಲ್ಲಿ ಹರಡಿದ ಕೂಡಲೇ, ಮಾಹಿತಿ ತಿಳಿದು ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತು. ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿ, ಶವಗಳನ್ನು ಹೊರತೆಗೆದು ಮರಣೋತ್ತರ ವರದಿಗಾಗಿ ಆಸ್ಪತ್ರಗೆ ರವಾನಿಸಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತರಣ್ ತರಣ್ ಸಾಹೀಬ್ ಎಸ್‌ಎಸ್‌ಪಿ ಸುರೇಂದ್ರ ಲಂಬಾ ತಿಳಿಸಿದ್ದಾರೆ, (ಏಜೆನ್ಸೀಸ್).