ಅಮರಾವತಿ: ಆಂಧ್ರ ಪ್ರದೇಶದ ಪೋಲವರಂ ಜಿಲ್ಲೆಯ ಗೋದಾವರಿ ನದಿಯಲ್ಲಿ(Godavari River) ಶನಿವಾರ(ಜು. 18) ಮೀನುಗಾರಿಕೆ ನಡೆಸುತ್ತಿದ್ದಾಗ ಮೂವರು ಮಹಿಳೆಯರು ಸೇರಿ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೋಲವರಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್, ಬೆಳಿಗ್ಗೆ 10 ಗಂಟೆ ಸುಮಾರಿಗೆ ಯೇತಪಾಕ ಮಂಡಲದಲ್ಲಿ ಈ ಘಟನೆ ನಡೆದಿದೆ. ಗುಮ್ಮಾ ಕೊಥಗುಡೆಮ್ ಗ್ರಾಮದ ಗೋದಾವರಿ ನದಿಯಲ್ಲಿ ಮೀನುಗಾರಿಕೆಗೆ ಒಟ್ಟು 10 ಜನರ ಗುಂಪು ಮೀನುಗಾರಿಕೆಗೆ ಹೋಗಿತ್ತು ಎಂದು ತಿಳಿಸಿದ್ದಾರೆ.
10 ಮಂದಿಯಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೀನು ಹಿಡಿಯುವಾಗ ಗುಂಪು ಕೈ ಹಿಡಿದುಕೊಂಡು ಬಟ್ಟೆ ಮತ್ತು ಸೊಳ್ಳೆ ಪರದೆಗಳನ್ನು ಬಳಸಿ ನದಿಗೆ ಇಳಿದಿತ್ತು. ಈ ವೇಳೆ ನೀರಿನ ಮಟ್ಟ ಕಡಿಮೆಯಿದ್ದರೂ, ಅವರು ನೀರಿನ ಆಳಕ್ಕೆ ತೆರಳಿದ್ದು, ಆಗ ಮುಳುಗಿರಬಹುದು ಎಂದಿದ್ದಾರೆ.
ಪೊಲೀಸರಿಗೆ ಘಟನೆಯ ಬಗ್ಗೆ ತಿಳಿಯುವ ಮೊದಲು ಸಾಕಷ್ಟು ಸಮಯ ಕಳೆದಿತ್ತು. ಉಳಿದ ಐವರು ಸಹಾಯಕ್ಕಾಗಿ ತಕ್ಷಣ ಕರೆ ಮಾಡುವ ಬದಲು ಕಾಣೆಯಾದ ವ್ಯಕ್ತಿಗಳನ್ನು ಹುಡುಕುವಲ್ಲಿ ನಿರತರಾಗಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).