ಭೂಲೇಶ್ವರ್ ಚಾ ರಾಜಾ ದುರಂತ; ಮಂಡಳಿ ಅಧ್ಯಕ್ಷ ಸಂಕೇತ್ ನೆವ್ಶೆ ಅಂತ್ಯಕ್ರಿಯೆ ಮೆರವಣಿಗೆ ವಿಡಿಯೋ ವೈರಲ್
- 22 ಅಡಿ ಎತ್ತರದ ಗಣೇಶ ಮೂರ್ತಿ ಕುಸಿದು ಘೋರ ದುರಂತ
- ಭುಲೆಶ್ವರ್ ರಾಜಾ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಸೇರಿ ಇಬ್ಬರು ಸಾವು
- ಅಂತಿಮಯಾತ್ರೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮುಂಬೈ: ಗಣೇಶೋತ್ಸವದ ಸಂಭ್ರಮದ ನಡುವೆ ಮುಂಬೈನಲ್ಲಿ ನಡೆದ ಭೀಕರ ದುರಂತ ಇಡೀ ಭುಲೆಶ್ವರ್ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. 22 ಅಡಿ ಎತ್ತರದ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕುಸಿದು ಭುಲೆಶ್ವರ್ ಚಾ ರಾಜಾ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಸಂಕೇತ್ ನೆವ್ಶೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಇನ್ನು, ಸಂಕೇತ್ ನೆವ್ಶೆಯ ಅಂತಿಮಯಾತ್ರೆಯ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಹೂಗಳಿಂದ ಅಲಂಕರಿಸಿದ ವಾಹನದಲ್ಲಿ ಮೃತದೇಹವನ್ನು ಮೆರವಣಿಗೆ ಮಾಡಲಾಯಿತು. ವೇಳೆ ಮಹಿಳೆಯರು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿದೆ.
ಮೆರವಣಿಗೆಯಲ್ಲಿ ನಡೆದ ದುರಂತ
ಭುಲೆಶ್ವರ್‌ನ ಬಲರಾಮ್ ಮರ್ಚೆಂಟ್ ರಸ್ತೆಯ ಜಯ ಅಂಬೆ ಚೌಕ್ ಹತ್ತಿರ ಶನಿವಾರ ರಾತ್ರಿ ಸುಮಾರು 9.50ರ ವೇಳೆಗೆ ಕಬೂತರ್ ಖಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೆರವಣಿಗೆ ಹೊರಟಿದ್ದ 22 ಅಡಿ ಎತ್ತರದ ಗಣೇಶ ಮೂರ್ತಿ ಏಕಾಏಕಿ ಬ್ಯಾಲೆನ್ಸ್ ತಪ್ಪಿ ಜನಗಳ ಮೇಲೆ ಕುಸಿದಿದೆ.
ಇಬ್ಬರು ಸಾವು, ಹಲವರಿಗೆ ಗಾಯ
ಈ ದುರ್ಘಟನೆಯಲ್ಲಿ ಸಂಕೇತ್ ನೆವ್ಶೆ(33) ಹಾಗೂ ಬ್ರಿಜೇಶ್ ಹೆಮಂತ್ ಜೋಶಿ (30) ಮೃತಪಟ್ಟಿದ್ದಾರೆ. ಗಾಯಗೊಂಡ ಐವರಲ್ಲಿ ಇಬ್ಬರು ಬಾಲಕಿಯರಿದ್ದಾರೆ. ಗಾಯಾಳುಗಳನ್ನು ಜಿಟಿ ಹಾಗೂ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ದುರಂತಕ್ಕೆ ಕಾರಣವೇನು?
ಘಟನೆ ಬಗ್ಗೆ ವಿ.ಪಿ. ರೋಡ್ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮೂರ್ತಿ ಸಾಗಿಸುವ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಆಗಿರಬಹುದು ಎಂದು ಶಂಕಿಸಲಾಗಿದೆ. ಮೂರ್ತಿ ನಿರ್ಮಾಣ, ಸಾಗಣೆ ಹಾಗೂ ಸುರಕ್ಷತಾ ಕ್ರಮದಲ್ಲಿ ನಿರ್ಲಕ್ಷ್ಯ ಆಗಿದೆಯೇ ಅನ್ನೋದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗಣೇಶೋತ್ಸವದ ಸಂಭ್ರಮದಲ್ಲೇ ನಡೆದ ಈ ದುರಂತ ಭುಲೆಶ್ವರ್ ನಿವಾಸಿಗಳು ಹಾಗೂ ಭಕ್ತರಿಗೆ ಆಘಾತ ತಂದಿದೆ,(ಏಜೆನ್ಸೀಸ್).