ತಿರುವನಂತಪುರಂ: ಸಂಚಾರ ನಿಯಮ ಉಲ್ಲಂಘಿಸುವವರನ್ನು ( Traffic Challan ) ಪತ್ತೆಹಚ್ಚಲು ಅಳವಡಿಸಲಾದ ಹೈಟೆಕ್ ಕ್ಯಾಮೆರಾಗಳೇ ಈಗ ಎಡವಟ್ಟು ಮಾಡುತ್ತಿವೆಯೇ? ಹೌದು, ಕೇರಳದ ತ್ರಿಶೂರ್‌ನಲ್ಲಿ ಇಂತಹದ್ದೊಂದು ವಿಚಿತ್ರ ಹಾಗೂ ಹಾಸ್ಯಾಸ್ಪದ ಘಟನೆ ಬೆಳಕಿಗೆ ಬಂದಿದೆ.
ನಿಯಮಬದ್ಧವಾಗಿ ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಹೋದರಿಯರಿಗೆ, "ಹೆಲ್ಮೆಟ್ ಧರಿಸಿಲ್ಲ" ಎಂಬ ಕಾರಣ ನೀಡಿ ಪೊಲೀಸರು ದಂಡದ ನೋಟಿಸ್ (ಚಲನ್) ಕಳುಹಿಸಿದ್ದಾರೆ. ವಿಪರ್ಯಾಸವೆಂದರೆ, ದಂಡದ ನೋಟಿಸ್ ಜತೆಗೆ ಲಗತ್ತಿಸಲಾದ ಫೋಟೋದಲ್ಲಿ ಆ ಇಬ್ಬರೂ ಸಹೋದರಿಯರು ಸ್ಪಷ್ಟವಾಗಿ ಹೆಲ್ಮೆಟ್ ಧರಿಸಿರುವುದು ಕಂಡುಬಂದಿದೆ!
ತ್ರಿಶೂರ್‌ನ ಕರಮುಕ್ಕು ನಿವಾಸಿಗಳಾದ ಈ ಇಬ್ಬರು ಸಹೋದರಿಯರು ಇದೇ ತಿಂಗಳ 13ರಂದು ವಡಾನಪ್ಪಿಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸ್ಕೂಟರ್‌ನಲ್ಲಿ ತ್ರಿಶೂರ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಎರವು ಪೆರುಂಪುಳ ಭತ್ತದ ಗದ್ದೆಯ ಬಳಿ ತ್ರಿಶೂರ್ ಗ್ರಾಮಾಂತರ ಪೊಲೀಸರು ಅಳವಡಿಸಿದ್ದ ಎಐ (AI) ಅಥವಾ ಸಂಚಾರಿ ಕ್ಯಾಮೆರಾದಲ್ಲಿ ಇವರ ದೃಶ್ಯ ಸೆರೆಯಾಗಿದೆ. ಆದರೆ ತಾಂತ್ರಿಕ ದೋಷವೋ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೋ ಎಂಬಂತೆ, ಇಬ್ಬರೂ ಹೆಲ್ಮೆಟ್ ಧರಿಸಿದ್ದರೂ ಸಹ "ಹೆಲ್ಮೆಟ್ ರಹಿತ ಪ್ರಯಾಣ" ಎಂದು ನಮೂದಿಸಿ 500 ರೂಪಾಯಿ ದಂಡ ಪಾವತಿಸುವಂತೆ ಮೊಬೈಲ್‌ಗೆ ಚಲನ್ ಕಳುಹಿಸಲಾಗಿದೆ.
ತಮ್ಮ ತಪ್ಪೇ ಇಲ್ಲದಿದ್ದರೂ ಬಂದಿರುವ ಈ ದಂಡದ ನೋಟಿಸ್ ಹಾಗೂ ಅದರಲ್ಲಿರುವ ತಮ್ಮದೇ ಹೆಲ್ಮೆಟ್ ಧರಿಸಿದ ಫೋಟೋವನ್ನು ಕಂಡು ಸಹೋದರಿಯರು ಅಕ್ಷರಶಃ ಶಾಕ್ ಆಗಿದ್ದಾರೆ. ಕಣ್ಣಿಗೆ ಕಾಣುವ ಸತ್ಯವನ್ನೇ ಮರೆಮಾಚಿ ಕಳುಹಿಸಲಾದ ಈ ತಪ್ಪು ಚಲನ್‌ನಿಂದ ಬೇಸತ್ತ ಅವರು, ತಕ್ಷಣವೇ ಅಂತಿಕ್ಕಾಡ್ ಪೊಲೀಸ್ ಠಾಣೆಗೆ ತೆರಳಿ ಈ ಕುರಿತು ದೂರು ನೀಡಿದ್ದಾರೆ. ತಾವು ಹೆಲ್ಮೆಟ್ ಧರಿಸಿರುವ ಸಾಕ್ಷ್ಯವನ್ನು ಪೊಲೀಸರ ಮುಂದಿಟ್ಟು, ಈ ದಂಡವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಆದರೆ, ಅಂತಿಕ್ಕಾಡ್ ಠಾಣೆಯ ಪೊಲೀಸರು ಈ ಸಮಸ್ಯೆಯನ್ನು ಸ್ಥಳೀಯವಾಗಿ ಬಗೆಹರಿಸುವ ಬದಲು, "ನೀವು ತ್ರಿಶೂರ್ ಎಸ್‌ಪಿ (SP) ಕಚೇರಿಗೆ ಹೋಗಿ ಈ ಬಗ್ಗೆ ಲಿಖಿತ ಅರ್ಜಿ ಸಲ್ಲಿಸಿ ಪರಿಹರಿಸಿಕೊಳ್ಳಿ" ಎಂದು ಕೈತೊಳೆದುಕೊಂಡಿದ್ದಾರೆ. ತಂತ್ರಜ್ಞಾನದ ಯುಗದಲ್ಲಿ ಪೊಲೀಸರ ಕ್ಯಾಮೆರಾ ಮಾಡಿದ ಎಡವಟ್ಟಿಗೆ, ಅಮಾಯಕ ಸವಾರರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿರುವುದು ಮತ್ತೊಂದು ಕಿರಿಕಿರಿಯಾಗಿದೆ. ಪೊಲೀಸರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, (ಏಜೆನ್ಸೀಸ್).