ಅಂದು ಹರಿದ ಪ್ಯಾಂಟ್, ಇಂದು 100 ಕೋಟಿಯ ಅರಮನೆ! ಆಪ್ ತೊರೆದ ಬೆನ್ನಲ್ಲೇ ಕೇಜ್ರಿವಾಲ್ ವಿರುದ್ಧ ಗುಡುಗಿದ ಮಾಲಿವಾಲ್; ದೆಹಲಿದಲ್ಲಿ ರಾಜಕೀಯ ಬಿರುಗಾಳಿ!
ನವದೆಹಲಿ: ದೆಹಲಿ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಮುಂದುವರಿದಿದ್ದು, ಆಪ್‌ಗೆ ಗುಡ್‌ಬೈ ಹೇಳಿ ಕಮಲ ಪಾಳಯ ಸೇರಿರುವ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್(Swati Maliwal), ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಸಲಿ ಮುಖವಾಡ ಕಳಚುವುದಾಗಿ ಸವಾಲು ಹಾಕಿದ್ದಾರೆ. ಒಂದು ಕಾಲದಲ್ಲಿ ಹರಿದ ಪ್ಯಾಂಟ್ ಧರಿಸಿ, ಎರಡು ರೂಪಾಯಿಯ ಪೆನ್ ಹಿಡಿದು ಬದಲಾವಣೆಯ ಕನಸು ಮಾರುತ್ತಿದ್ದ ವ್ಯಕ್ತಿ, ಇಂದು ನೂರು ಕೋಟಿಯ ಶೀಶ್ ಮಹಲ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶೀಶ್ ಮಹಲ್ ಮತ್ತು ಭ್ರಷ್ಟಾಚಾರದ ಆರೋಪ
2011ರ ಭ್ರಷ್ಟಾಚಾರ ವಿರೋಧಿ ಚಳವಳಿಯ ದಿನಗಳನ್ನು ನೆನಪಿಸಿಕೊಂಡ ಮಾಲಿವಾಲ್, ಕೇಜ್ರಿವಾಲ್ ಅವರ ಬದಲಾವಣೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಐಷಾರಾಮಿ ಜೀವನ: ಅಂದು ಮುರುಕಲು ಕಾರಿನಲ್ಲಿ ಓಡಾಡುತ್ತಿದ್ದ ಕೇಜ್ರಿವಾಲ್, ಅಧಿಕಾರಕ್ಕೆ ಬಂದ ಕೂಡಲೇ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯಂತಹ ಮನೆ ಕಟ್ಟಿಸಿಕೊಂಡಿದ್ದಾರೆ. ಅದರಲ್ಲಿ ಕೋಟಿ ಬೆಲೆಯ ಕಾರ್ಪೆಟ್, ಲಕ್ಷಾಂತರ ರೂಪಾಯಿಯ ಫ್ರಿಡ್ಜ್ ಮತ್ತು ಅತ್ಯಂತ ದುಬಾರಿ ಸೋಫಾಗಳಿವೆ. ಕೇವಲ 50 ಕಾರುಗಳ ಬೆಂಗಾವಲು ಸಾಲದೆಂಬಂತೆ ವಿಐಪಿ ಪ್ರೋಟೋಕಾಲ್ ಅನುಭವಿಸುತ್ತಿದ್ದಾರೆ ಎಂದು ಸ್ವಾತಿ ಆರೋಪಿಸಿದ್ದಾರೆ.
ಪಂಜಾಬ್ ಎಟಿಎಂ: ದೆಹಲಿಯಲ್ಲಿ ಸೋತ ನಂತರ ಆಪ್ ಈಗ ಪಂಜಾಬ್ ಅನ್ನು ತನ್ನ ವೈಯಕ್ತಿಕ ಎಟಿಎಂ ಮಾಡಿಕೊಂಡಿದೆ. ಪ್ರಶ್ನೆ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ಗೂಂಡಾಗಿರಿ ನಡೆಸುತ್ತಿದೆ ಎಂದು ಸಂಸದೆ ದೂರಿದ್ದಾರೆ.
"ನನ್ನ ಮೇಲೆಯೇ ಹಲ್ಲೆ ಮಾಡಿಸಿದ ಮಹಿಳಾ ವಿರೋಧಿ"
ತಮ್ಮ ಮೇಲಾದ ದೈಹಿಕ ಹಲ್ಲೆಯ ಬಗ್ಗೆ ಮಾತನಾಡಿದ ಸ್ವಾತಿ ಮಾಲಿವಾಲ್ ಭಾವುಕರಾದರು. 2006ರಿಂದ ನಾನು ಕೇಜ್ರಿವಾಲ್ ಜೊತೆ ಕೆಲಸ ಮಾಡಿದ್ದೇನೆ. ಆದರೆ ನನ್ನನ್ನೇ ಅವರ ಮನೆಯಲ್ಲಿ ಗೂಂಡಾಗಳಿಂದ ಹೊಡೆಸಿದರು. ಎಫ್‌ಐಆರ್ ಹಿಂಪಡೆಯಲು ನನ್ನ ಮೇಲೆ ತೀವ್ರ ಒತ್ತಡ ಹೇರಲಾಯಿತು. ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದೆ ನನ್ನ ಧ್ವನಿ ಅಡಗಿಸಲು ಪ್ರಯತ್ನಿಸಿದರು. ಇಂತಹ ಮಹಿಳಾ ವಿರೋಧಿಯ ಜೊತೆ ಇರಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು. ತನ್ನ ಮೇಲೆ ಹಲ್ಲೆ ಮಾಡಿದ ಬಿಭವ್ ಕುಮಾರ್‌ನನ್ನು ಪಂಜಾಬ್ ಸಿಎಂಗೆ ಸಲಹೆಗಾರನನ್ನಾಗಿ ನೇಮಿಸಿ ಝೆಡ್-ಪ್ಲಸ್ ಭದ್ರತೆ ನೀಡಿರುವುದನ್ನು ಸ್ವಾತಿ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ನಾಯಕತ್ವಕ್ಕೆ ಸಾಟಿಯಿಲ್ಲ
ಬಿಜೆಪಿ ಸೇರಿದ ನಿರ್ಧಾರದ ಬಗ್ಗೆ ಮಾತನಾಡಿದ ಮಾಲಿವಾಲ್, ಯಾವುದೇ ಒತ್ತಡಕ್ಕೆ ಮಣಿದು ನಾನು ಬಿಜೆಪಿ ಸೇರಿಲ್ಲ. ಪ್ರಧಾನಿ ಮೋದಿ ಅವರ ಐತಿಹಾಸಿಕ ನಿರ್ಧಾರಗಳು ಮತ್ತು ದೇಶದ ಅಭಿವೃದ್ಧಿಯ ಮೇಲಿನ ಅವರ ದೃಷ್ಟಿಕೋನವನ್ನು ಕಂಡು ನಾನು ಈ ನಿರ್ಧಾರ ತಳೆದಿದ್ದೇನೆ. ಮಹಿಳಾ ಮೀಸಲಾತಿ ಬಿಲ್ ಆಗಲಿ ಅಥವಾ ನಕ್ಸಲಿಸಂ ಅಂತ್ಯಗೊಳಿಸುವುದಾಗಲಿ, ಮೋದಿ ಮತ್ತು ಅಮಿತ್ ಷಾ ಅವರ ನೇತೃತ್ವದಲ್ಲಿ ದೇಶ ಪ್ರಗತಿ ಕಾಣುತ್ತಿದೆ ಎಂದು ಶ್ಲಾಘಿಸಿದ್ದಾರೆ.
'ಆಪರೇಷನ್ ಲೋಟಸ್' ಮತ್ತು ಪಕ್ಷಾಂತರದ ಕಿಚ್ಚು
ಇತ್ತೀಚೆಗಷ್ಟೇ ಸ್ವಾತಿ ಮಾಲಿವಾಲ್, ಹರ್ಭಜನ್ ಸಿಂಗ್, ರಾಘವ್ ಚಡ್ಡಾ ಸೇರಿದಂತೆ ಏಳು ಸಂಸದರು ಆಪ್ ತೊರೆದು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿರುವುದು ಕೇಜ್ರಿವಾಲ್ ಪಡೆಗೆ ನುಂಗಲಾರದ ತುತ್ತಾಗಿದೆ. ಆಪ್ ಇವರನ್ನು ದೇಶದ್ರೋಹಿಗಳು ಎಂದು ಕರೆದರೆ, ಮಾಲಿವಾಲ್ ಅವರು ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದ ಕೇಜ್ರಿವಾಲ್ ಅವರೇ ಅತಿದೊಡ್ಡ ದ್ರೋಹಿ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ದೂರು ನೀಡಿ, ಪಕ್ಷಾಂತರ ವಿರೋಧಿ ಕಾಯ್ದೆಯಡಿ ಸಂಸದರನ್ನು ಅನರ್ಹಗೊಳಿಸಲು ಆಪ್ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ಸರಣಿ ಸಭೆಗಳನ್ನು ನಡೆಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಿದ್ದಾರೆ,(ಏಜೆನ್ಸೀಸ್).