TVK-AIADMK_Alliance | ಟಿವಿಕೆ - ಎಐಎಡಿಎಂಕೆ ದೋಸ್ತಿ ಸಂಭವ! 
ದೇಶ

ಟಿವಿಕೆ - ಎಐಎಡಿಎಂಕೆ ದೋಸ್ತಿ ಸಂಭವ!..ಅಧಿಕಾರ ಹಂಚಿಕೆ ಸೂತ್ರದೊಂದಿಗೆ ಪಳನಿಸ್ವಾಮಿ ಮನೆಗೆ ದೌಡಾಯಿಸಿದ್ರಾ ಟಿವಿಕೆ ನಾಯಕ..? | TVK-AIADMK_Alliance

TVK-AIADMK Alliance: ತಮಿಳುನಾಡಿನ ಚುನಾವಣೋತ್ತರ ರಾಜಕೀಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಲೇ ಸಾಗಿದ್ದು, ಅಧಿಕಾರ ಹಿಡಿಯಲು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭರ್ಜರಿ ಕಸರತ್ತು ನಡೆಸುತ್ತಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ, ಈಗ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ಕ್ರೋಢೀಕರಿಸಲು ಎಐಎಡಿಎಂಕೆ ಬೆಂಬಲ ಕೋರಿದೆ ಎಂದು ವರದಿಯಾಗಿದೆ.
ಟಿವಿಕೆ ಮುಖ್ಯಸ್ಥ ವಿಜಯ್ ಅವರ ಆಪ್ತ ನಾಯಕರೊಬ್ಬರು, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಎಐಎಡಿಎಂಕೆಯ ರಾಜ್ಯಸಭಾ ಸಂಸದ ಸಿ.ವಿ. ಷಣ್ಮುಗಂ ನೇತೃತ್ವದ ಒಂದು ಬಣವು ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಶಾಸಕರನ್ನು ಒಗ್ಗೂಡಿಸುತ್ತಿರುವ ವರದಿಗಳ ಬೆನ್ನಲ್ಲೇ, ಟಿವಿಕೆ ಪಾಳಯದಿಂದ ನೇರ ಪ್ರಸ್ತಾವನೆ ಸಲ್ಲಿಕೆಯಾಗಿರುವುದು ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಬಹುಮತಕ್ಕೆ ಅಗತ್ಯವಿರುವ 118ರ ಮ್ಯಾಜಿಕ್ ಸಂಖ್ಯೆ ತಲುಪಲು ಇನ್ನೂ 10 ಸ್ಥಾನಗಳ ಕೊರತೆಯಿದೆ. ಸರ್ಕಾರ ಸುಗುಮವಾಗಿ ನಡೆಯಲು ಐದು ಸ್ಥಾನ ಗೆದ್ದಿರುವ ಕಾಂಗ್ರೆಸ್ ಮಾತ್ರವಲ್ಲದೆ, 47 ಸ್ಥಾನ ಹೊಂದಿರುವ ಎಐಎಡಿಎಂಕೆ ಬೆಂಬಲವೂ ವಿಜಯ್​​ಗೆ ಅನಿವಾರ್ಯವಾಗಿದೆ.
ಚುನಾವಣೆಯಲ್ಲಿ ಎಐಎಡಿಎಂಕೆ ಹಿನ್ನಡೆ ಅನುಭವಿಸಿದ್ದರೂ, ಈಗ ಸರ್ಕಾರ ರಚನೆಯಲ್ಲಿ ಈ ಪಕ್ಷವು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಪಳನಿಸ್ವಾಮಿ ಸೇರಿದಂತೆ ಇತರ ಎನ್​ಡಿಎ ಮಿತ್ರಪಕ್ಷಗಳ ನಾಯಕರು ಇಲ್ಲಿಯವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದಿದ್ದರೂ, ಪಕ್ಷದೊಳಗಿನ ಒಂದು ಪ್ರಭಾವಿ ಬಣ ವಿಜಯ್​​ರನ್ನು ಬೆಂಬಲಿಸಲು ತುದಿಗಾಲಲ್ಲಿ ನಿಂತಿದೆ ಎನ್ನುವ ವರದಿಗಳು ಲಭ್ಯವಾಗಿವೆ.
ದಶಕಗಳ ಸೈದ್ಧಾಂತಿಕ ವಿರೋಧದ ನಡುವೆಯೂ, ಅಸ್ತಿತ್ವ ಉಳಿಸಿಕೊಳ್ಳಲು ಎಐಎಡಿಎಂಕೆ ಶಾಸಕರು ಟಿವಿಕೆ ಜೊತೆ ಕೈಜೋಡಿಸುತ್ತಾರೆಯೇ ಮತ್ತು ಷಣ್ಮುಗಂ ಪ್ರಯತ್ನಕ್ಕೆ ಎಷ್ಟು ಶಾಸಕರು ಸಾಥ್ ನೀಡುತ್ತಾರೆ ಎಂಬುದು ಈಗ ತಮಿಳುನಾಡು ರಾಜಕೀಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವಿಧಾನಸಭೆಯಲ್ಲಿ ಬಹುಮತ ಪಡೆಯಲು ಟಿವಿಕೆ ಸಣ್ಣ ಪಕ್ಷಗಳ ಬದಲಿಗೆ ದೊಡ್ಡ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ ಎನ್ನುವ ಲೆಕ್ಕಾಚಾರ ಹಾಕಿದ್ದು, ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಈಗಾಗಲೇ ಟಿವಿಕೆಗೆ ಬೆಂಬಲ ನೀಡಲು ಸಿದ್ಧವಾಗಿದೆ, ಇದಕ್ಕೆ ಬದಲಾಗಿ ಎರಡು ಕ್ಯಾಬಿನೆಟ್ ಸ್ಥಾನಗಳನ್ನು ನೀಡಬೇಕು ಎಂಬ ಷರತ್ತನ್ನು ವಿಧಿಸಿದೆ ಎಂದು ವರದಿಯಾಗಿದೆ. ಇತ್ತ ತಲಾ ಎರಡು ಸ್ಥಾನಗಳನ್ನು ಗೆದ್ದಿರುವ ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ), ವಿಜಯ್ ಸರ್ಕಾರಕ್ಕೆ ಬೆಂಬಲ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಎರಡು ದಿನಗಳ ಕಾಲಾವಕಾಶ ಕೋರಿದೆ.
ಮತ್ತೊಂದೆಡೆ, ನಾಲ್ವರು ಶಾಸಕರ ಬಲ ಹೊಂದಿರುವ ಪಟ್ಟಾಲಿ ಮಕ್ಕಳ್ ಕಚ್ಚಿ (PMK) ಕೂಡ ಟಿವಿಕೆ ಜೊತೆ ಮೈತ್ರಿ ಮಾತುಕತೆಯಲ್ಲಿ ತೊಡಗಿದೆ. ಧರ್ಮಪುರಿಯ ಸೌಮ್ಯಾ ಅನ್ಬುಮಣಿ, ಜಿಂಗಿಯ ಎ. ಗಣೇಶಕುಮಾರ್, ವಿಕ್ರವಾಂಡಿಯ ಸಿ. ಶಿವಕುಮಾರ್ ಮತ್ತು ಜಿ. ವೈತಿಲಿಂಗಂ ಈಗಾಗಲೇ ವಿಜಯ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ(ಏಜೆನ್ಸೀಸ್​​).