ನವದೆಹಲಿ: ಅತಿಯಾದ ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲಿನ ಮುಂಭಾಗದ ಲೇಬಲಿಂಗ್ (Food Labelling) ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರಕ್ಕೆ (FSSAI) ತೀವ್ರ ತರಾಟೆಗೆ ತೆಗೆದುಕೊಂಡಿದೆ. "ಈ ಕೆಲಸ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ ನಾವೇ ಸೂಕ್ತ ಆದೇಶ ಹೊರಡಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಅಂತಿಮ ಎಚ್ಚರಿಕೆ ನೀಡಿದೆ.
ಕಾರ್ಪೊರೇಟ್ ಒತ್ತಡಕ್ಕೆ ಮಣಿಯಬೇಡಿ
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ದ್ವಿ ಸದಸ್ಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುವ ವೇಳೆ, ಇದು ದೇಶದ ಪ್ರಜೆಗಳ ಹಾಗೂ ಬೆಳೆಯುವ ಮಕ್ಕಳ ಆರೋಗ್ಯದ ವಿಚಾರ. ಹಾಗಾಗಿ ಕಾರ್ಪೋರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಕೇಂದ್ರ ಮತ್ತು ಎಫ್ಎಸ್ಎಸ್ಐಗೆ ಖಡಕ್ ಎಚ್ಚರಿಕೆ ನೀಡಿದೆ.
ಬೃಹತ್ ಆಹಾರ ತಯಾರಿಕಾ ಕಂಪನಿಗಳ ವಿರೋಧಕ್ಕೆ ಮಣಿದಿರುವ ಎಫ್‌ಎಸ್‌ಎಸ್‌ಎಐ, ವಾರ್ನಿಂಗ್ ಲೇಬಲ್ ಬದಲಿಗೆ ಕೇವಲ ಪೋಷಕಾಂಶಗಳ ಪಟ್ಟಿಯನ್ನಷ್ಟೇ ಮುದ್ರಿಸಲು ಸಲಹೆ ನೀಡಿರುವುದಾಗಿ ಅರ್ಜಿದಾರರ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು. ಆದಾಗ್ಯೂ, ಆಹಾರ ಉದ್ಯಮಗಳ ಒತ್ತಡಕ್ಕೆ ಮಣಿದಿರುವ ಎಫ್‌ಎಸ್‌ಎಸ್‌ಎಐ, ನಾಗರಿಕ ಸಮಾಜದ ಪ್ರತಿನಿಧಿಗಳು ನೀಡಿದ್ದ ಸಾಕ್ಷಿಗಳನ್ನು ನಿರ್ಲಕ್ಷಿಸಿದೆ ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ದೇಶ ಎಂದೆಂದಿಗೂ ಅಭಿವೃದ್ಧಿ ಹೊಂದದ ದೇಶವಾಗಿಯೇ ಉಳಿಬೇಕೇ?
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಬ್ರಿಜೇಂದರ್ ಚಾಹರ್, ಭಾರತೀಯ ಸಾಂಪ್ರದಾಯಿಕ ಆಹಾರಗಳಾದ 'ನಮ್ಕೀನ್' ಮುಂತಾದ ಖಾರ ಪದಾರ್ಥಗಳ ಮೇಲೆಯೂ 'ರೆಡ್ ವಾರ್ನಿಂಗ್' (ಕೆಂಪು ಎಚ್ಚರಿಕೆ) ಹಾಕಬೇಕಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉಪ್ಪು, ಸಕ್ಕರೆ ಬಳಕೆಯ ಪ್ರಮಾಣ ಕಡಿಮೆಯಿದ್ದು, ಆ ಮಾನದಂಡಗಳನ್ನು ನೇರವಾಗಿ ಭಾರತಕ್ಕೆ ಅನ್ವಯಿಸುವುದು ಕಷ್ಟ ಎಂದು ವಾದಿಸಿದರು.
ಈ ವಾದವನ್ನು ತಕ್ಷಣವೇ ತಳ್ಳಿಹಾಕಿದ ಸುಪ್ರೀಂ ಕೋರ್ಟ್, "ವಿದೇಶಗಳ ಮಾನದಂಡ ಪಾಲಿಸಲು ಸಾಧ್ಯವಿಲ್ಲ ಎಂದರೆ, ಭಾರತ ಎಂದೆಂದಿಗೂ ಅಭಿವೃದ್ಧಿ ಹೊಂದದ ದೇಶವಾಗಿಯೇ ಉಳಿಬೇಕೇ? ಎಂದು ಪ್ರಶ್ನಿಸಿತು.
ಗ್ರಾಹಕರಿಗೆ ಸತ್ಯ ತಿಳಿಯುವ ಹಕ್ಕಿದೆ
ಹೆಚ್ಚಿನ ಸಕ್ಕರೆ ಮತ್ತು ಕೊಬ್ಬಿರುವ ಆಹಾರಗಳನ್ನು ಜಾಗರೂಕತೆಯಿಂದ ಸೇವಿಸುವಂತೆ ಎಚ್ಚರಿಕೆ ಲೇಬಲ್ ಹಾಕುವುದು ವ್ಯಾಪಾರವನ್ನು ತಡೆಯಲು ಅಲ್ಲ, ಬದಲಿಗೆ ಗ್ರಾಹಕರಾದವರು ಏನು ತಿನ್ನುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲು. ಕಂಪನಿಗಳಿಗೆ ಇದು ಇಷ್ಟವಾಗದಿರಬಹುದು. ಆದರೆ, ಅಂತಿಮ ನಿರ್ಧಾರ ಗ್ರಾಹಕನದೇ ಆಗಿರುತ್ತದೆ. ಈ ವಿಚಾರದಲ್ಲಿ ಕಂಪನಿಗಳ ಹಿತಾಸಕ್ತಿ ಮುಖ್ಯವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಈ ಲೇಬಲಿಂಗ್ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕೊನೆಯದಾಗಿ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಮುಂದಿನ ವಿಚಾರಣೆ ವೇಳೆ ನೇರ ತೀರ್ಪು ಪ್ರಕಟಿಸುವುದಾಗಿ ಕೋರ್ಟ್ ಎಚ್ಚರಿಸಿದೆ (ಏಜೆನ್ಸೀಸ್).